ADVERTISEMENT

ದೇಶದ ಮಾನ ಹರಾಜಿಗಿಟ್ಟ ಕೇಂದ್ರ: ಪ್ರಹ್ಲಾದ್

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2011, 7:15 IST
Last Updated 12 ಏಪ್ರಿಲ್ 2011, 7:15 IST
ದೇಶದ ಮಾನ ಹರಾಜಿಗಿಟ್ಟ ಕೇಂದ್ರ: ಪ್ರಹ್ಲಾದ್
ದೇಶದ ಮಾನ ಹರಾಜಿಗಿಟ್ಟ ಕೇಂದ್ರ: ಪ್ರಹ್ಲಾದ್   

ಕಾರ್ಕಳ: ಕೇಂದ್ರ ಸರ್ಕಾರ ದೇಶದ ಮಾನ ಹರಾಜಿಗಿಟ್ಟಿದೆ ಎಂದು ಧಾರವಾಡ ಸಂಸದ ಪ್ರಹ್ಲಾದ್ ಜೋಶಿ ಇಲ್ಲಿ ಟೀಕಿಸಿದರು.ಕೇಂದ್ರ ಸರ್ಕಾರದ ರಾಷ್ಟ್ರೀಯ ಸುರಕ್ಷಾ ವಿರೋಧಿ ನೀತಿ ಹಾಗೂ ಲಕ್ಷಾಂತರ ಕೋಟಿ ರೂಪಾಯಿ ಭ್ರಷ್ಟಾಚಾರ, ವಿದೇಶಿ ಬ್ಯಾಂಕುಗಳಲ್ಲಿರುವ ಕಪ್ಪುಹಣ ವಾಪಸಾತಿಗೆ ಆಗ್ರಹಿಸಿ ಕಾರ್ಕಳ ಬಸ್ ನಿಲ್ದಾಣದಲ್ಲಿ ಭಾನುವಾರ ರಾಜ್ಯ ಯುವಮೋರ್ಚಾ ವತಿಯಿಂದ ನಡೆದ ಪಾದಯಾತ್ರೆ ಸಮಾರೋಪದಲ್ಲಿ ಅವರು ಮಾತನಾಡಿದರು.

ದೇಶದ ಒಟ್ಟು ಆದಾಯದ ಶೇ 50ರಷ್ಟು ಅಂದರೆ ಸುಮಾರು 80 ಲಕ್ಷ ಕೋಟಿ ರೂಪಾಯಿ ಹೊರದೇಶದಲ್ಲಿದೆ. ಈ ಕುರಿತು ಸುರ್ಪ್ರೀಂ ಕೋರ್ಟ್ ದೇಶದ ಇತಿಹಾಸದಲ್ಲೇ ಕಟುವಾದ ಶಬ್ದಗಳಿಂದ ಕೇಂದ್ರ ಸರ್ಕಾರವನ್ನು ಎಚ್ಚರಿಸಿದೆ. 2003ರಲ್ಲಿ ಅಮೆರಿಕದಲ್ಲಿ 148 ದೇಶಗಳು ಸೇರಿ ನಡೆಸಿದ ಯಾವೆನ್ ನಿರ್ಣಯದಲ್ಲಿ ವಿದೇಶದಲ್ಲಿರುವ ಹಣ ವಾಪಸ್ ತರಿಸಿಕೊಳ್ಳುವ ನಿರ್ಣಯ ಮಾಡಿಕೊಂಡಿವೆ. ಆದರೆ ಭಾರತ ಮಾತ್ರ ಇದರಲ್ಲಿ ಆಸಕ್ತಿ ವಹಿಸಿಲ್ಲ. ದೀರ್ಘಕಾಲ ದೇಶ ಆಳಿದ ಕಾಂಗ್ರೆಸ್ ಸರ್ಕಾರದ ನಾಯಕರ ಹಣ ವಿದೇಶಿ ಬ್ಯಾಂಕುಗಳಲ್ಲಿದೆ. ಅದರ ಗುಟ್ಟು ರಟ್ಟಾಗುವ ಸಾಧ್ಯತೆಯ ಹಿನ್ನೆಲೆಯಲ್ಲಿ ಕಪ್ಪುಹಣವನ್ನು ಹಿಂಪಡೆಯುವಲ್ಲಿ ಕೇಂದ್ರ ಸರ್ಕಾರ ಚಕಾರ ಎತ್ತುತ್ತಿಲ್ಲ ಎಂದು ಆರೋಪಿಸಿದರು.

ಕಾಶ್ಮೀರದಲ್ಲಿ ರಾಷ್ಟ್ರಧ್ವಜ ಹಾರಿಸಲು ಅವಕಾಶ ಮಾಡಿಕೊಟ್ಟಿಲ್ಲ. ದೇಶದ ಪೂರ್ವಾಂಚಲ ಗಡಿ ಈಗ ದುರ್ಬಲವಾಗುತ್ತಿದೆ. ದೇಶದ ಸುಭದ್ರತೆ, ಸುರಕ್ಷತೆ ಮುಖ್ಯವಾಗಿದೆ. ಇದನ್ನು ನಮ್ಮಯುವ ಜನಾಂಗ ಅರಿತುಕೊಳ್ಳುವಂತೆ ಮಾಡಲು ಈ ಬಗೆಯ ಆಂದೋಲನ ಕೈಗೊಂಡಿರುವುದು ಅಭಿಮಾನದ ಸಂಗತಿ ಎಂದರು.

ರಾಜ್ಯ ಯುವಮೋರ್ಚಾ ಅಧ್ಯಕ್ಷ ವಿ.ಸುನೀಲ್ ಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ ಕೇಂದ್ರ ಸರ್ಕಾರದ ಭ್ರಷ್ಟಾಚಾರ ಕುರಿತು ಯುವಜನರಲ್ಲಿ ಜಾಗೃತಿ ಉಂಟು ಮಾಡಲಿಕ್ಕಾಗಿ ರಾಜ್ಯದ 136 ಕಡೆ ಇಂತಹ ಯುವಸಂಘರ್ಷ ಆಂದೋಲನ ಪಾದಯಾತ್ರೆಗಳು ನಡೆಯಲಿವೆ. ಮೇ 15ರಂದು ಇದರ ಸಮಾರೋಪ ಬೆಂಗಳೂರಿನಲ್ಲಿ ನಡೆಯಲಿದೆ. ನಕ್ಸಲ್ ಚಟುವಟಿಕೆ ಪಶ್ಚಿಮ ಬಂಗಾಲದಿಂದ ಕಾರ್ಕಳಕ್ಕೆ ಬಂದಿದೆ. ಕಾಂಗ್ರೆಸ್ ನಾಯಕರು ದೇಶ ಲೂಟಿ ಮಾಡುತ್ತಿದ್ದಾರೆ. ಇದರ ಕುರಿತು ಯುವಜನರಲ್ಲಿ ಜಾಗೃತಿಯನ್ನುಂಟು ಮಾಡಲು ಈ ಆಂದೋಲನ ನಡೆಯುತ್ತಿದೆ ಎಂದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಜಯರಾಮ್ ಸಾಲ್ಯಾನ್, ತಾಲ್ಲೂಕು ಯುವಮೋರ್ಚಾ ಅಧ್ಯಕ್ಷ ಮಹಾವೀರ ಹೆಗ್ಡೆ, ಬಿಜೆಪಿ ಜಿಲ್ಲಾ ಘಟಕ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ, ಬಿಜೆಪಿ ನಾಯಕ ಬೋಳ ಪ್ರಭಾಕರ ಕಾಮತ್, ವಕೀಲ ಎಂ.ಕೆ.ವಿಜಯ್ ಕುಮಾರ್, ತಾಲ್ಲೂಕು ಘಟಕ ಅಧ್ಯಕ್ಷೆ ಮಮತಾ ಹರೀಶ್ ಅಧಿಕಾರಿ, ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ರೇಷ್ಮಾಉದಯ ಶೆಟ್ಟಿ, ಯುವಮೋರ್ಚಾ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ನವೀನ್ ನಾಯಕ್ ಅತ್ತೂರು, ಪ್ರಸನ್ನ ಕುಕ್ಕುಂದೂರು, ಪ್ರತಾಪ, ವಿಕಾಸ, ಮುನೀಂದ್ರ ಕುಮಾರ್, ಷಣ್ಮುಖ ಗುರಿಕಾರ್, ಹರಿಶ್ಚಂದ್ರ ಕುಲಾಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.