ADVERTISEMENT

ಧಾರ್ಮಿಕ ಸಂಸ್ಕಾರದ ಪಾಠ ಅಗತ್ಯ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2012, 7:30 IST
Last Updated 21 ಆಗಸ್ಟ್ 2012, 7:30 IST

ಕಟೀಲು (ಮೂಲ್ಕಿ): ಸಮಾಜದಲ್ಲಿ ಅಶಾಂತಿಯ ವಾತಾವರಣವನ್ನು ನಿರ್ಮಾಣ ಮಾಡುವ ಶಕ್ತಿಗಳನ್ನು ನಿಯಂತ್ರಿಸಲು ಧಾರ್ಮಿಕ ಸಂಸ್ಕಾರದ ಪಾಠವನ್ನು ಕಲಿಸುವ ಅವಶ್ಯಕತೆ ಇಂದಿನ ಯುವಜನಾಂಗಕ್ಕೆ ಅಗತ್ಯವಾಗಿದೆ ಎಂದು ಕೇಂದ್ರ ಇಂಧನ ಸಚಿವ ಎಂ.ವೀರಪ್ಪ ಮೊಯಿಲಿ ಹೇಳಿದರು.

ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಸ್ಮಾರಕ ಟ್ರಸ್ಟ್‌ನ ಸಂಯೋಜನೆಯಲ್ಲಿ ಜನ್ಮಶತಮಾನೋತ್ಸವದ ನೆನಪಿಗಾಗಿ ನಿರ್ಮಿಸಿದ ನೂತನ ಕಟ್ಟಡವನ್ನು ಸೋಮವಾರ ಕಟೀಲಿನಲ್ಲಿ ಉದ್ಘಾಟಿಸಿ ಮಾತನಾಡಿದರು.

ಧಾರ್ಮಿಕ ಕ್ಷೇತ್ರಗಳಲ್ಲಿ ಸಾಮಾಜಿಕ ಸೇವೆಯ ಕೆಲಸವಾಗಬೇಕು, ಪರಿಸರ, ಅಭಿವೃದ್ದಿ ಎರಡೂ ಸಮಾನವಾಗಿ ಸಾಗಬೇಕಾದರೆ ನಮ್ಮ ಧೋರಣೆಯನ್ನು ಬದಲಾಯಿಸಬೇಕು ಎಂದರು.  ಕಟೀಲು ಕ್ಷೇತ್ರ ಒಂದು  ಪ್ರವಾಸಿ ಕ್ಷೇತ್ರವಾಗಲು ಇಲ್ಲಿನ ಆಸ್ರಣ್ಣ ಬಂಧುಗಳ ಶ್ರಮ ಸಾಕಷ್ಟಿದೆ ಎಂದು ಅವರು ಹೇಳಿದರು.

ಕಟೀಲು ದೇವಸ್ಥಾನದ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಅಮರನಾಥ ಶೆಟ್ಟಿ, ಶಾಸಕ ಅಭಯಚಂದ್ರ, ದ.ಕ. ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರದೀಪ್‌ಕುಮಾರ್ ಕಲ್ಕೂರ, ಕ.ಸಾ.ಪದ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ಯುಗಪುರುಷ ಕಿನ್ನಿಗೋಳಿಯ ಕೊಡೆತ್ತೂರು ಭುವನಾಭಿರಾಮ ಉಡುಪ, ಪುನರೂರು ಕ್ಷೇತ್ರದ ಆಡಳಿತ ಮೊಕ್ತೇಸರ ಪಠೇಲ್ ವೆಂಕಟೇಶರಾವ್ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.