ADVERTISEMENT

ನಂದಿಕೂರು: ರೈತಸಂಘದಿಂದ ರೈಲು ರೋಕೋ

​ಪ್ರಜಾವಾಣಿ ವಾರ್ತೆ
Published 2 ಜೂನ್ 2011, 8:30 IST
Last Updated 2 ಜೂನ್ 2011, 8:30 IST

ನಂದಿಕೂರು (ಪಡುಬಿದ್ರಿ): ನಂದಿಕೂರಿನ ಯುಪಿಸಿಎಲ್ ವಿದ್ಯುತ್ ಯೋಜನೆಗೆ ರೈಲಿನಲ್ಲಿ ಕಲ್ಲಿದ್ದಲು ಸಾಗಿಸುತ್ತಿರುವುದನ್ನು ವಿರೋಧಿಸಿ ರೈತ ಸಂಘದ ಉಡುಪಿ ಜಿಲ್ಲಾ ಘಟಕದ ಆಶ್ರಯದಲ್ಲಿ ಬುಧವಾರ ನಂದಿಕೂರು ರೈಲು ನಿಲ್ದಾಣದಲ್ಲಿ ರೈಲು ರೋಕೋ ನಡೆಯಿತು.

ಮಂಗಳೂರಿನಿಂದ ಮುಂಬೈಗೆ ತೆರಳುತ್ತಿದ್ದ ಮತ್ಸ್ಯಗಂಧ ಎಕ್ಸ್‌ಪ್ರೆಸ್ ಪ್ರಯಾಣಿಕರ ರೈಲನ್ನು ಜಿಲ್ಲಾ ರೈತ ಸಂಘದ ಅಧ್ಯಕ್ಷ ವಿಜಯ ಹೆಗ್ಡೆ ನೇತೃತ್ವದಲ್ಲಿ 10ನಿಮಿಷಗಳ ಕಾಲ ತಡೆ ಹಿಡಿಯಲಾಯಿತು. 3 ಗಂಟೆ 50ನಿಮಿಷಕ್ಕೆ ಆರಂಭವಾದ ರೈಲು ರೋಕೋ 4ಗಂಟೆಯವರೆಗೆ ಮುಂದುವರಿಯಿತು. ಈ ವೇಳೆ ರೈತ ಸಂಘದ ಕಾರ್ಯಕರ್ತರು ಯುಪಿಸಿಎಲ್ ವಿರುದ್ಧ ಹಾಗೂ ಕೊಂಕಣ ರೈಲ್ವೆ ಅಧಿಕಾರಿಗಳು ಹಾಗೂ ಇಲಾಖೆಯ ವಿರುದ್ಧ ಘೋಷಣೆ ಕೂಗಿದರು.

ಕೊಂಕಣ ರೈಲ್ವೆ ಕಮರ್ಷಿಯಲ್ ಸುಪರಿಡೆಂಟ್ ನಾಗಪತಿ ಹೆಗಡೆ ಮತ್ತು ನಂದಿಕೂರು ರೈಲು ನಿಲ್ದಾಣದ ಸೀನಿಯರ್ ಸ್ಟೇಷನ್ ಮಾಸ್ಟರ್ ಎಂ.ಮಹಾಬಲ ನಾಯಕ್ ಅವರಿಗೆ ರೈತ ಸಂಘದಿಂದ ಮನವಿ ಸಲ್ಲಿಸಲಾಯಿತು. `ಕಾನೂನು ಬಾಹಿರವಾಗಿ ಯುಪಿಸಿಎಲ್‌ಗೆ ಕಲ್ಲಿದ್ದಲು ಸಾಗಣೆಯಾಗುತ್ತಿದೆ ಎಂದು ಆರೋಪಿಸಿದ ರೈತ ಸಂಘದ ಮುಖಂಡರು, ಕಲ್ಲಿದ್ದಲು ಸಾಗಿಸುವುದಕ್ಕೆ ಸಂಬಂಧಿಸಿದ ದಾಖಲೆ ಪತ್ರ ಇದ್ದಲ್ಲಿ ಬಹಿರಂಗ ಪಡಿಸುವಂತೆ ಆಗ್ರಹಿಸಿದರು. ಪ್ರತಿಭಟನಾಕಾರರ ಪ್ರಶ್ನೆಗಳಿಗೆ ಉತ್ತರಿಸಲು ಅಧಿಕಾರಿಗಳು ತಡಕಾಡಿದರು.

ADVERTISEMENT

ಕಲ್ಲಿದ್ದಲು ಸಾಗಣೆಯಿಂದ ತೊಂದರೆ:  ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ವಿಜಯ್‌ಹೆಗ್ಡೆ ಮಾತನಾಡಿ, `ಯುಪಿಸಿಎಲ್ ಕಂಪೆನಿಯು ಕಲ್ಲಿದ್ದಲನ್ನು ಕಾನೂನು ಬಾಹಿರವಾಗಿ ಸಾಗಿಸುತ್ತಿದ್ದು, ಇದಕ್ಕೆ ಕೊಂಕಣ ರೈಲ್ವೇಯು ಬೆಂಬಲ ನೀಡುತ್ತಿದೆ~ ಎಂದು ಆರೋಪಿಸಿದರು.

`ಕಲ್ಲಿದ್ದಲು ಸಾಗಣೆಯಿಂದ ಸ್ಥಳೀಯರ ಜೀವನದ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತಿದ್ದು, ಕೃಷಿ ಚಟುವಟಿಕೆಗೂ ಹಾನಿಯಾಗುತ್ತಿದೆ. ಈಗಾಗಲೇ ಕೊಂಕಣ ರೈಲ್ವೇಗೆ ಈ ಬಗ್ಗೆ ತಿಳಿಸಲಾಗಿತ್ತು. ಆದರೂ ಕಲ್ಲಿದ್ದಲು ಸಾಗಣೆ ಮುಂದುವರಿದಿದೆ~ ಎಂದರು.

ಗಡುವು:  `ಕಲ್ಲಿದ್ದಲು ಸಾಗಣೆಯನ್ನು ಒಂದುವಾರಗಳ ಒಳಗಾಗಿ ಸ್ಥಗಿತಗೊಳಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ತರಹದ ಹೋರಾಟ ನಡೆಸಲಾಗುವುದು. ಈ ಬಗ್ಗೆ ಒಂದು ವಾರಗಳ ಬಳಿಕ ಸಭೆ ಸೇರಿ ಮುಂದಿನ ಹೋರಾಟದ ಬಗ್ಗೆ ನಿರ್ಧರಿಸಲಾಗುವುದು~ ಎಂದು ಹೆಗ್ಡೆ ಎಚ್ಚರಿಸಿದರು.

ಮನವಿ ಅಲ್ಲ ಎಚ್ಚರಿಕೆ: ಜಿಲ್ಲಾ ರೈತ ಸಂಘದ ಶಶಿಧರ ಶೆಟ್ಟಿ ಮಾತನಾಡಿ, `ಈಗ ನೀಡಿರುವುದು ಮನವಿ ಅಲ್ಲ. ಇದು ಎಚ್ಚರಿಕೆಯ ಪತ್ರ. ರೈತಸಂಘ ಮನವಿ ನೀಡುವುದಿಲ್ಲ. ಎಚ್ಚರಿಕೆ ಮಾತ್ರ ನೀಡುವುದು. ಒಂದು ವೇಳೆ ಕಂಪೆನಿಗೆ ಕಾನೂನು ಬಾಹಿರ ಕಲ್ಲಿದ್ದಲು ಸಾಗಣೆ ಸ್ಥಗಿತಗೊಳಿಸದಿದ್ದಲ್ಲಿ ಮುಂದೆ ನಡೆಸುವ ಹೋರಾಟದಲ್ಲಿ ಆಗುವ ತೊಂದರೆಗಳಿಗೆ ಕೊಂಕಣ ರೈಲ್ವೆಯೇ ಹೊಣೆ~ ಎಂದು ಎಚ್ಚರಿಕೆ ನೀಡಿದರು.

ರೈತಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಮುಂಬೈ ಸಮಿತಿಯ ಅಧ್ಯಕ್ಷ ಸುರೇಶ್ ಶೆಟ್ಟಿ, ಸುಧಾಕರ ಶೆಟ್ಟಿ, ಪೂವಪ್ಪ ಪೂಜಾರಿ, ನಿತಿನ್‌ಶೆಟ್ಟಿ, ವಿನಯಶೆಟ್ಟಿ, ನೀಲಯ್ಯ ಫಲಿಮಾರು, ನೀತಾ ಗುರುರಾಜ್, ನವೀನ್ ಶೆಟ್ಟಿ, ಜಿತೇಂದ್ರ ಶೆಟ್ಟಿ, ಅಶೋಕ್ ಪೂಜಾರಿ, ಶೋಭಾ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.