ADVERTISEMENT

ನನಸಾಗುವುದೇ ಕ್ರೀಡಾಂಗಣ ನಿರ್ಮಾಣದ ಕನಸು?

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2012, 10:40 IST
Last Updated 16 ಏಪ್ರಿಲ್ 2012, 10:40 IST

ಕಾರವಾರ: ನಗರದಲ್ಲಿ ಕ್ರೀಡಾಪ್ರತಿಭೆಗಳಿಗೆ ಕೊರತೆ ಇಲ್ಲ. ಆದರೆ, ಸೂಕ್ತ ಸೌಲಭ್ಯಗಳಿಲ್ಲದೆ ಕ್ರೀಡಾ ಪ್ರತಿಭೆಗಳು ಸೊರಗುತ್ತಿವೆ. ಕ್ರೀಡಾಂಗಣದ ಕೊರತೆಯಿಂದಾಗಿ ಇಲ್ಲಿಯ ವಾಲಿಬಾಲ್, ಫುಟ್‌ಬಾಲ್, ಕಬಡ್ಡಿ ಪ್ರತಿಭೆಗಳು ಕಮರಿಹೋಗುತ್ತಿವೆ.

ನಗರದಲ್ಲಿ ಮಾಲಾದೇವಿ ಮೈದಾನವಿದ್ದರೂ ಒಂದೆಡೆ ಅಥ್ಲೆಟಿಕ್ಸ್, ಇನ್ನೊಂದೆಡೆ ಕ್ರಿಕೆಟ್ ಹೀಗೆ ಒಂದೇ ಮೈದಾನದಲ್ಲಿ ಎಲ್ಲರೂ ಅಭ್ಯಾಸ ನಡೆಸಬೇಕಾದ ಪರಿಸ್ಥಿತಿ ಇದೆ. ಇದೂ ಅಲ್ಲದೆ ದೊಡ್ಡದೊಡ್ಡ ಸಮಾರಂಭಗಳಿಗೂ ಈ ಮೈದಾನ ಬಳಕೆ ಮಾಡುತ್ತಿರುವುದು ವಿಷಾದನೀಯ ಸಂಗತಿ. ಕ್ರೀಡಾಂಗಣದಲ್ಲಿ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆಗಳೇ ಇಲ್ಲ.

ಕ್ರೀಡಾ ಚಟುವಟಿಕೆಗೆ ಪ್ರೋತ್ಸಾಹ ನೀಡಲು ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಒಳಾಂಗಣ ಕ್ರೀಡಾಂಗಣ ನಿರ್ಮಿಸಲು ದಶಕದ ಹಿಂದೆ ಇಲ್ಲಿಯ ಹಬ್ಬುವಾಡದಲ್ಲಿರುವ ಅಂದಾಜು 15 ಗುಂಟೆ ಜಾಗದಲ್ಲಿ ಅಡಿಪಾಯ ಹಾಕಿದೆ. ಅಧಿಕಾರಿಗಳ ನಿರ್ಲಕ್ಷ್ಯ, ಜನಪ್ರತಿನಿಧಿಗಳ ನಿರಾಸಕ್ತಿಯಿಂದಾಗಿ ಅದು ಇನ್ನೂ ಪೂರ್ಣಗೊಂಡಿಲ್ಲ.

ಒಳಾಂಗಣ ಕ್ರೀಡಾಂಗಣ ನಗರದ ಮಾಲಾದೇವಿ ಮೈದಾನದಲ್ಲಿ ಮಾಡಬೇಕು ಎಂದು ಇಲಾಖೆ ನಿರ್ಧರಿಸಿತ್ತು. ಮೈದಾನದಲ್ಲಿದ್ದ ಶಿಕ್ಷಣ ಇಲಾಖೆಯ ಕಟ್ಟಡಗಳನ್ನು ನೆಲಸಮಗೊಳಿಸಿ ಕ್ರೀಡಾಂಗಣ ನಿರ್ಮಿಸಬೇಕು ಎನ್ನುವಾಗ ಸ್ಥಳೀಯರು ವಿರೋಧಿಸಿದರು. ಬಳಿಕ ಕ್ರೀಡಾಂಗಣ ನಿರ್ಮಿಸಲು ಹಬ್ಬುವಾಡದಲ್ಲಿ ಜಮೀನು ನೀಡುವುದಾಗಿ ನಗರಸಭೆ ತಿಳಿಸಿತು. 2003ರಲ್ಲಿ ಈ ಜಮೀನು ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಹೆಸರಿನಲ್ಲಿ ನೊಂದಣಿ ಆಗಿದೆ. ಆದರೆ, ಕ್ರೀಡಾಂಗಣ ನಿರ್ಮಾಣ ಕಾಮಗಾರಿ ಮಾತ್ರ ಕುಂಟುತ್ತ ಸಾಗಿದೆ.

ಒಳಾಂಗಣ ಕ್ರೀಡಾಂಗಣ ನಿರ್ಮಾಣವಾದರೆ ವಾಲಿಬಾಲ್, ಬ್ಯಾಡ್ಮಿಂಟನ್, ಬ್ಯಾಸ್ಕೆಟ್‌ಬಾಲ್ ಹೀಗೆ ಎಲ್ಲ ರೀತಿಯ ಕ್ರೀಡಾ ಚಟುವಟಿಕೆಗಳಿಗೆ ಬಳಸಬಹುದು. ಇದರಿಂದ ಕಮರಿಹೋಗುತ್ತಿರುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ. ಇದೂ ಅಲ್ಲದೆ ಕ್ರೀಡೆಯ ಬಗ್ಗೆ ಜನರಲ್ಲಿ ಆಸಕ್ತಿಯೂ ಮೂಡುತ್ತದೆ. ಹೆಸರುವಾಸಿಯಾಗಿರುವ ವಾಲಿಬಾಲ್ ಆಟಗಾರರು ಇಲ್ಲಿದ್ದು ಉತ್ತಮ ಆಟಗಾರರನ್ನು ರೂಪಿಸಲು ಅವರ ಸೇವೆಯನ್ನು ಪಡೆಯಬಹುದಾಗಿದೆ.

`ಒಳಾಂಗಣ ಕೀಡಾಂಗಣ ನಿರ್ಮಿಸುವುದಕ್ಕೆ ಸಂಬಂಧಪಟ್ಟಂತೆ ಸ್ಥಳ ನೋಡಲು ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ನಿರ್ದೇಶಕ ಎಂ.ಕೆ.ಬಲದೇವಕೃಷ್ಣ ಭಾನುವಾರ ಇಲ್ಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಕ್ರೀಡಾಂಗಣ ನಿರ್ಮಾಣಕ್ಕೆ ಚಾಲನೆ ಸಿಗುವ ಸಂಭವ ಇದೆ. ಇದೇ 17ರಂದು ಬೆಂಗಳೂರಿನಿಂದ ಕ್ರೀಡಾ ಇಲಾಖೆ ಎಂಜಿನಿಯರ್ ಇಲ್ಲಿಗೆ ಆಗಮಿಸಿ ಕ್ರೀಡಾಂಗಣದ ವಿನ್ಯಾಸದ ಬಗ್ಗೆ ವರದಿ ಸಿದ್ಧಪಡಿಸಲಿದ್ದಾರೆ.

ಅಂದಾಜು ರೂ. 2ರಿಂದ 3 ಕೋಟಿ ವೆಚ್ಚದಲ್ಲಿ ಕ್ರೀಡಾಂಗಣದ ಕಾಮಗಾರಿ ನಡೆಯಲಿದೆ~ ಎಂದು ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿ ಪ್ರಕಾಶ ರೇವಣಕರ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.