ADVERTISEMENT

‘ನನ್ನ ಸಾವಿನ ಮೊದಲು ಹಂತಕರಿಗೆ ಶಿಕ್ಷೆ ಆಗಲಿ’

​ಪ್ರಜಾವಾಣಿ ವಾರ್ತೆ
Published 14 ಜುಲೈ 2017, 5:05 IST
Last Updated 14 ಜುಲೈ 2017, 5:05 IST
ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್‌ನಲ್ಲಿ ಹತ್ಯೆಗೀಡಾದ ಆರ್ಎಸ್ಎಸ್ ಕಾರ್ಯಕರ್ತ ಶರತ್ ಮಡಿವಾಳ ಅವರ ಮನೆಗೆ ಗುರುವಾರ ಬಿ.ಎಸ್.ಯಡಿಯೂರಪ್ಪ ಭೇಟಿ ನೀಡಿ ಸಾಂತ್ವನ ಹೇಳಿದರು.
ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್‌ನಲ್ಲಿ ಹತ್ಯೆಗೀಡಾದ ಆರ್ಎಸ್ಎಸ್ ಕಾರ್ಯಕರ್ತ ಶರತ್ ಮಡಿವಾಳ ಅವರ ಮನೆಗೆ ಗುರುವಾರ ಬಿ.ಎಸ್.ಯಡಿಯೂರಪ್ಪ ಭೇಟಿ ನೀಡಿ ಸಾಂತ್ವನ ಹೇಳಿದರು.   

ಬಂಟ್ವಾಳ: ತಾಲ್ಲೂಕಿನ ಬಿ.ಸಿ.ರೋಡ್ ಉದಯ ಲಾಂಡ್ರಿಯಲ್ಲಿ ಇದೇ 4ರಂದು ದುಷ್ಕರ್ಮಿಗಳಿಂದ ಹತ್ಯೆಯಾದ ನನ್ನ ಏಕೈಕ ಪುತ್ರ, ಶ್ರಮಜೀವಿಯಾಗಿ ಮನೆಗೆ ಆಧಾರಸ್ಥಂಭವಾಗಿದ್ದ ಶರತ್ ಮಡಿವಾಳ ಹಂತಕರಿಗೆ ನಾನು ಸಾಯುವ ಮೊದಲು ಶಿಕ್ಷೆ ಆಗುವಂತೆ ಮಾಡಿ ಎಂದು ಮೃತರ ತಂದೆ ತನಿಯಪ್ಪ ಮಡಿವಾಳ ಗುರುವಾರ ಅಳಲು ತೋಡಿಕೊಂಡರು.

ಇಲ್ಲಿನ ಸಜಿಪಮುನ್ನೂರು ಸಮೀ ಪದ ಕಂದೂರು ಮೃತರ ಮನೆಗೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಗುರುವಾರ ಭೇಟಿ ನೀಡಿದ ವೇಳೆ ಅವರಲ್ಲಿ ಅಳಲು ತೋಡಿಕೊಂಡರು. ಅವರಿಗೆ ಧೈರ್ಯ ಧೈರ್ಯ ತುಂಬಿದ ಬಿ.ಎಸ್.ಯಡಿಯೂರಪ್ಪ ಅವರು ಮೃತರ ಕುಟುಂಬಕ್ಕೆ ವೈಯಕ್ತಿಕ ನೆಲೆಯಲ್ಲಿ ಸಹಾಯಧನ ನೀಡುವುದಾಗಿ ತಿಳಿಸಿ, ನಾವೆಲ್ಲರೂ ನಿಮ್ಮ ಜೊತೆ ಇದ್ದೇವೆ ಎಂದು ಭರವಸೆ ನೀಡಿದರು.

ಆರ್ಎಸ್ಎಸ್ ಮುಖಂಡ ಡಾ. ಪ್ರಭಾಕರ ಭಟ್ ಕಲ್ಲಡ್ಕ ಅವರು ಮಾತ ನಾಡಿ, ಶರತ್ ಅತ್ಯಂತ ಪ್ರಾಮಾಣಿಕ ಮತ್ತು ನಿಷ್ಠಾವಂತ ಕಾರ್ಯಕರ್ತ ಆಗಿದ್ದರು ಎಂದು ತಿಳಿಸಿದರು.
ಸಂಸದರಾದ ನಳಿನ್ ಕುಮಾರ್ ಕಟೀಲ್, ಶೋಭಾ ಕರಂದ್ಲಾಜೆ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಂಜೀವ ಮಠಂದೂರು, ಮಾಜಿ ಸಚಿವ ನಾಗರಾಜ ಶೆಟ್ಟಿ, ಮಾಜಿ ಶಾಸಕರಾದ ಎ.ರುಕ್ಮಯ ಪೂಜಾರಿ, ಪ್ರಭಾಕರ ಬಂಗೇರ, ಕೆ.ಪದ್ಮನಾಭ ಕೊಟ್ಟಾರಿ, ಕ್ಷೇತ್ರಾಧ್ಯಕ್ಷ ಬಿ. ದೇವದಾಸ ಶೆಟ್ಟಿ, ಬಿಜೆಪಿ ಮುಖಂಡ ಉಳಿಪಾಡಿಗುತ್ತು ರಾಜೇಶ್ ನಾಯ್ಕ್, ಬ್ರಿಜೇಶ್ ಚೌಟ, ಜಿಲ್ಲಾ ಪಂಚಾಯಿತಿ ಸದಸ್ಯ ರವೀಂದ್ರ ಕಂಬಳಿ, ಜಿಲ್ಲಾ ಎಸ್.ಸಿ. ಮೋಚರ್ಾ ಅಧ್ಯಕ್ಷ ದಿನೇಶ್ ಅಮ್ಟೂರು, ಪ್ರಮುಖ ರಾದ ಮೋನಪ್ಪ ದೇವಸ್ಯ, ರಾಮದಾಸ ಬಂಟ್ವಾಳ, ಕೃಷ್ಣಪ್ಪ ಪೂಜಾರಿ , ಆರ್.ಚೆನ್ನಪ್ಪ ಕೋಟ್ಯಾನ್ ಮತ್ತಿತರರು ಇದ್ದರು.

ADVERTISEMENT

‘ಸಚಿವರಿಗೆ ಚುನಾವಣೆಯದ್ದೇ ಚಿಂತೆ’:
ಜಿಲ್ಲೆಗೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕನಿಷ್ಠ ಸೌಜನ್ಯಕ್ಕೂ ಶರತ್ ಮನೆಗೆ ಭೇಟಿ ನೀಡಿಲ್ಲ. ಈ ಜಿಲ್ಲೆಯ ಇಬ್ಬರು ಸಚಿವರಿಗೆ ಇದರ ಬಗ್ಗೆ ಚಿಂತೆಯೇ ಇಲ್ಲ, ಅವರಿಗೆ ಕೇವಲ ಚುನಾವಣೆಯದ್ದೇ ಚಿಂತೆ. ಮುಖ್ಯಮಂತ್ರಿ ಕೂಡಾ ಅದೇ ಹಾದಿಯಲ್ಲಿ ಸಾಗುತ್ತಿದ್ದಾರೆ. ಶರತ್ ಸಾವಿನ ವಾಸ್ತವ ವಿಚಾರ ಗೊತ್ತಿದ್ದರೂ ಅದನ್ನು ಮುಚ್ಚಿಟ್ಟು ಮಂಗಳೂರಿನ ಅಡ್ಯಾರಿನಲ್ಲಿ ಅದ್ದೂರಿ ಸಮಾವೇಶ ನಡೆಸುವ ಔಚಿತ್ಯವಾದರೂ ಏನಿತ್ತು ಬಿ.ಎಸ್.ಯಡಿಯೂರಪ್ಪ ಖಾರವಾಗಿ ಪ್ರಶ್ನಿಸಿದರು.

ಮಾಧ್ಯಮದವರೊಂದಿಗೆ ಮಾತನಾಡಿ, ‘ ತಕ್ಷಣವೇ ಕೆಎಫ್‌ಡಿ ಹಾಗೂ ಪಿಎಫ್ಐ ಸಂಘಟನೆ ನಿಷೇಧಿಸಬೇಕು ಎಂದು ಅವರು ಆಗ್ರಹಿಸಿದರು. ‘ಕೋಮುಗಲಭೆಯಿಂದ ಕಾಂಗ್ರೆಸ್ ಸರ್ಕಾರ ರಾಜಕೀಯ ಲಾಭ ಗಳಿಸಲು ಯತ್ನಿಸುತ್ತಿದ್ದು, ಶಾಂತವಾಗಿ ನಡೆಯುತ್ತಿದ್ದ ಶವಯಾತ್ರೆಗೆ ಕಲ್ಲು ತೂರಾಟ ನಡೆಸಿದ ನೈಜ ಆರೋಪಿಗಳನ್ನು ಬಂಧಿಸಲು ಸಾಧ್ಯವಾಗದ ಪೊಲೀಸರಿಗೆ ಆರ್ಎಸ್ಎಸ್ ಮುಖಂಡ ಡಾ. ಪ್ರಭಾಕರ ಭಟ್ ಕಲ್ಲಡ್ಕ ಅವರನ್ನು ಬಂಧಿಸಲು ಮುಖ್ಯಮಂತ್ರಿ ಮತ್ತು ಇಲ್ಲಿನ ಸಚಿವರು ಆದೇಶಿಸುತ್ತಿರುವುದು ನಾಚಿಕೆಗೇಡು. ರಾಜ್ಯದಲ್ಲಿ ಜಾತಿ ವಿಷಬೀಜ ಬಿತ್ತುವ ಕಾರ್ಯವನ್ನು ಕಾಂಗ್ರೆಸ್ ಮಾಡುತ್ತಿದ್ದು, ಇದಕ್ಕೆ ಮುಂದಿನ ಚುನಾವಣೆಯಲ್ಲಿ ಜನರೇ ತಕ್ಕ ಪಾಠ ಕಲಿಸಲಿದ್ದಾರೆ’ ಎಂದು ಯಡಿಯೂರಪ್ಪ ಎಚ್ಚರಿಸಿದರು.

ಮುಖ್ಯಮಂತ್ರಿ ಷಡ್ಯಂತ್ರ: ರಾಜ್ಯದಲ್ಲಿ ಮುಖ್ಯಮಂತ್ರಿ ಸಹಿತ ನನ್ನ ಬಾಯಿ ಮುಚ್ಚಿಸುವ ಬಗ್ಗೆ ಷಡ್ಯಂತ್ರ ನಡೆಯುತ್ತಿದ್ದು, ನಾನು ಇಂತಹ ಯಾವ ಬೆದರಿಕೆಗೂ ಜಗ್ಗುವುದಿಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ರಾಜ್ಯದಲ್ಲಿ ಶರತ್ ಹತ್ಯೆ ಪ್ರಕರಣ ಸಹಿತ ಒಟ್ಟು 24 ಹತ್ಯೆ ಪ್ರಕರಣಗಳ ಬಗ್ಗೆ ರಾಷ್ಟ್ರೀಯ ತನಿಖಾ ತಂಡವು ಸಮಗ್ರ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.