ADVERTISEMENT

ನಾಗರಿಕ ಸನ್ನದು ಕಾಯ್ದೆ ಅನುಷ್ಠಾನಕ್ಕೆ ಪುತ್ತೂರು ಸನ್ನದ್ಧ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2012, 9:55 IST
Last Updated 1 ಮಾರ್ಚ್ 2012, 9:55 IST

ಪುತ್ತೂರು: ಜನತೆಯ ಪಾಲಿಗೆ ಆಶಾಕಿರಣವಾದ ಮತ್ತು ಅಧಿಕಾರಿಗಳ ಜವಾಬ್ದಾರಿಗೆ ಮಾನದಂಡವಾದ `ನಾಗರಿಕ ಸನ್ನದು~ ಕಾಯ್ದೆ ಪುತ್ತೂರು ತಾಲ್ಲೂಕಿನಲ್ಲಿ  ಗುರುವಾರದಿಂದ  ಪ್ರಾಯೋಗಿಕವಾಗಿ ಜಾರಿಗೊಳ್ಳುತ್ತಿದೆ.  ತಾಲ್ಲೂಕಿನ 11  ಪ್ರಮುಖ ಇಲಾಖೆಗಳು   ಈ ಕಾಯ್ದೆಯ  ಅನುಷ್ಠಾನ ವ್ಯಾಪ್ತಿಗೊಳಪಟ್ಟಿದ್ದು, ಈ ನಿಟ್ಟಿನಲ್ಲಿ ಇಲಾಖೆಗಳ ಅಧಿಕಾರಿಗಳು ತರಾತುರಿಯಲ್ಲಿ ಸಕಲ ಸಿದ್ಧತೆ -ಪೂರ್ವ ತಯಾರಿ ನಡೆಸಿದ್ದಾರೆ.

ಮಾಹಿತಿ ಹಕ್ಕು ಯೋಜನೆಯ ಬಳಿಕದ ಎರಡನೇ ಅಸ್ತ್ರವಾದ ಕರ್ನಾಟಕ ನಾಗರಿಕ ಸೇವಾ ಖಾತರಿ ಅಧಿನಿಯಮ 2011 (ನಾಗರಿಕ ಸನ್ನದು ಕಾಯ್ದೆ) ಜನ ಸಾಮಾನ್ಯರ ಪಾಲಿಗೆ ವರದಾನವಾಗಲಿದೆ. ಆದರೆ ಈ ತನಕವೂ ತಾಲ್ಲೂಕಿನ ಬಹುತೇಕ ಜನತೆಗೆ `ನಾಗರಿಕ ಸನ್ನದು~ ಎಂದರೆ ಏನೆಂಬುವುದೇ ತಿಳಿದಿಲ್ಲ.
 
ಹಾಗೆಂದರೇನು ಎಂದು ಪ್ರಶ್ನಿಸುವವರ ಸಂಖ್ಯೆಯೇ ಅಧಿಕ. ಜನರಿಗೆ ಅಗತ್ಯ ಸೇವೆಗಳನ್ನು ಕಾಯ್ದೆಯ ನಿಗದಿತ ಕಾಲ ಮಿತಿಯೊಳಗೆ  ನೀಡುವ  ಈ ಕಾಯ್ದೆಯ ಬಗ್ಗೆ ತಿಳಿದವರಂತೂ ಸಂತಸ ಪಡುತ್ತಿದ್ದಾರೆ.

ಆರೋಗ್ಯ ಇಲಾಖೆ, ಕಾರ್ಮಿಕ ಇಲಾಖೆ,  ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ವಾಣಿಜ್ಯ ಇಲಾಖೆಗಳಲ್ಲಿ ಸಿಬ್ಬಂದಿ ಕೊರತೆಯಿದ್ದು, ಕೈಗಾರಿಕಾ ಇಲಾಖೆಯೇ ಪುತ್ತೂರಿನಲ್ಲಿ ಇಲ್ಲ. ಸಿಬ್ಬಂದಿ ಕೊರತೆ ನಡುವೆ ಎಲ್ಲಾ ಇಲಾಖೆಗಳು ನಿರ್ದಿಷ್ಟ ಅವಧಿಯೊಳಗೆ ಅಗತ್ಯ ಸೇವೆ ನೀಡಲು ಪರದಾಡಬೇಕಾದ ಪರಿಸ್ಥಿತಿ ಬಂದಿದೆ.

ನಾಗರಿಕ ಸನ್ನದು ಸೇವೆ ನೀಡಲು ಸಂಬಂಧಪಟ್ಟ ಪ್ರತೀ ಇಲಾಖೆಗಳಲ್ಲಿ ಪೂರ್ವ ತಯಾರಿ ನಡೆದಿದೆ. ಇಲಾಖೆಯ ಮುಖ್ಯಸ್ಥರ ಸಭೆ ನಡೆಸಿ ತರಬೇತಿ ನೀಡಲಾಗಿದೆ. ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳಿಗೆ ಮತ್ತು ನೌಕರರಿಗೆ ತರಬೇತಿ ನೀಡಲಾಗಿದೆ. 

ತಾಲ್ಲೂಕಿನ 10 ಇಲಾಖಾ ಕೇಂದ್ರಗಳಲ್ಲಿಯೂ ಕಂಪ್ಯೂಟರ್ ಆಪರೇಟರ್, ಇಂಟರ್‌ನೆಟ್ ಸಂಪರ್ಕ ಇರುವ ಸೇವಾ ಕೇಂದ್ರ ತೆರೆಯಲಾಗಿದ್ದು, ಜನತೆಗೆ  ನಾಗರಿಕ ಸನ್ನದು ಕಾಯ್ದೆಯಡಿ ವ್ಯವಸ್ಥಿತ ಸೇವೆ ನೀಡುವ ನಿಟ್ಟಿನಲ್ಲಿ ಪ್ರಯತ್ನ ಸಾಗಿದೆ. ತಾಲ್ಲೂಕಿನಲ್ಲಿ ಉಪವಿಭಾಗಾಧಿಕಾರಿಗಳು ವ್ಯವಸ್ಥೆಗೆ ಮುಖ್ಯಸ್ಥರಾಗಿ ಹಿಡಿತ ಹೊಂದಿದ್ದಾರೆ. 

ಕಂದಾಯ ಇಲಾಖೆ ವ್ಯಾಪ್ತಿಗೆ ಒಟ್ಟು 22 ಸೇವೆಗಳು ಬರುತ್ತಿದ್ದು, ಈ ಪೈಕಿ 17 ನೆಮ್ಮದಿ ಕೇಂದ್ರಕ್ಕೆ ಸಂಬಂಧಪಟ್ಟದ್ದಾಗಿದೆ. ತಾಲ್ಲೂಕಿನಲ್ಲಿ ಜನತೆಯ ನೆಮ್ಮದಿ ಕೆಡಿಸಿದ ಆರೋಪವುಳ್ಳ ನೆಮ್ಮದಿ ಕೇಂದ್ರದ ಜವಾಬ್ದಾರಿ ಮತ್ತಷ್ಟು ಹೆಚ್ಚಿದೆ. ಕೇವಲ 2 ಸಿಬ್ಬಂದಿ ಇರುವ ಕಾರ್ಮಿಕ ಇಲಾಖೆ 13 ಸೇವೆಗಳನ್ನು ನೀಡಬೇಕಿದೆ. ಪುತ್ತೂರಿನಲ್ಲಿ ಅಸ್ತಿತ್ವದಲ್ಲೇ ಇಲ್ಲದ ಕೈಗಾರಿಕಾ ಇಲಾಖೆ ವ್ಯಾಪ್ತಿಗೆ 7 ಸೇವೆಗಳನ್ನು ನಿಗದಿಪಡಿಸಲಾಗಿದೆ. 

ದೂರುದಾರರ ಕೇಂದ್ರವಾದ ಪೊಲೀಸ್ ಇಲಾಖೆ ವ್ಯಾಪ್ತಿಗೆ 13 ಸೇವೆಗಳು ಬರುತ್ತಿದ್ದು, ದೂರು ನೀಡಿದ 30 ನಿಮಿಷದೊಳಗೆ ದೂರು ದಾಖಲಿಸಿಕೊಳ್ಳಬೇಕಾದ ಮತ್ತು ದೂರು ದಾಖಲಾದ ತಕ್ಷಣ ಎಫ್.ಐ.ಆರ್. ಪ್ರತಿಯನ್ನು ದೂರುದಾರರಿಗೆ ನೀಡಬೇಕಾದ ಅನಿವಾರ್ಯತೆ ಎದುರಾಗಿದೆ.

ಆರೋಗ್ಯ ಇಲಾಖೆ 12, ವಾಣಿಜ್ಯ ಇಲಾಖೆ 10, ಶಿಕ್ಷಣ ಇಲಾಖೆ 9, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ 5 ನಿಗದಿತ ಸೇವೆ ನಿಗದಿತ ಅವಧಿಯೊಳಗೆ ನೀಡಬೆಕಾಗಿ ಬಂದಿದೆ.

ಕೆಲಸ ಮಾಡಿ ತೋರಿಸಬೇಕು: ಜನತೆಯ ಪಾಲಿಗೆ ಮಾಹಿತಿ ಹಕ್ಕು ಯೋಜನೆ ಬಳಿಕ ಬಂದ 2ನೇ ವರದಾನ ನಾಗರಿಕ ಸನ್ನದು ಕಾಯ್ದೆ. ಮಾಹಿತಿ ಹಕ್ಕು ಯೋಜನೆಯಡಿ ಮಾಹಿತಿ ನೀಡಿದರೆ ಸಾಕು. ಆದರೆ ನಾಗರಿಕ ಸನ್ನದು ಕಾಯ್ದೆಯಡಿ ಅಧಿಕಾರಿಗಳು ಕೆಲಸ ಮಾಡಿ ತೋರಿಸಬೇಕು. ಇದರಿಂದಾಗಿ ಜನತೆಯ ಪಾಲಿಗೆ ಬಹಳಷ್ಟು ಅನುಕೂಲವಾಗಲಿದೆ ಎಂದು ತಹಸೀಲ್ದಾರ್ ಡಾ. ದಾಸೇ ಗೌಡ ಅಭಿಪ್ರಾಯ ಪಟ್ಟಿದ್ದಾರೆ.

ಉದ್ಘಾಟನೆ: ಕಾಯ್ದೆಯ ಉದ್ಘಾಟನೆ ಗುರುವಾರ ಪುತ್ತೂರು ಪುರಸಭೆಯಲ್ಲಿ ನಡೆಯಲಿದೆ. ಸಂಸದ ನಳಿನ್ ಕುಮಾರ್ ಉದ್ಘಾಟಿಸುವರು. ಶಾಸಕಿ ಮಲ್ಲಿಕಾ ಪ್ರಸಾದ್ ಅಧ್ಯಕ್ಷತೆ ವಹಿಸುವರು.

ವಿಧಾನಪರಿಷತ್ ಸದಸ್ಯ ಗಣೇಶ್ ಕಾರ್ಣಿಕ್, ತಾ.ಪಂ. ಅಧ್ಯಕ್ಷ ಶಂಭು ಭಟ್, ಪುರಸಭಾಧ್ಯಕ್ಷೆ ಕಮಲಾ ಆನಂದ್, ಪ್ರಭಾರ ಜಿಲ್ಲಾಧಿಕಾರಿ ಕೆ.ಎ.ದಯಾನಂದ್, ಜಿ.ಪಂ. ಸಿಇಒ ಕೆ.ಎನ್.ವಿಜಯ ಪ್ರಕಾಶ್, ಪುತ್ತೂರು ಎಸಿಪಿ ಎಂ.ಎನ್. ಅನುಚೇತ್ ಭಾಗವಹಿಸುವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.