ADVERTISEMENT

ನಾಳೆಯಿಂದ ಎರಡು ದಿನಕ್ಕೊಮ್ಮೆ ನೀರು

ಮೂಡುಬಿದಿರೆ ಪುರಸಭೆ ವಿಶೇಷ ಸಭೆ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 31 ಜನವರಿ 2013, 10:14 IST
Last Updated 31 ಜನವರಿ 2013, 10:14 IST
ಮೂಡುಬಿದಿರೆ ಪುರಸಭೆ ಸಭಾಂಗಣದಲ್ಲಿ ಬುಧವಾರ ನಡೆದ ವಿಶೇಷ ಸಭೆಯಲ್ಲಿ ನೀರಿನ ವಿಚಾರದಲ್ಲಿ ಚರ್ಚೆ ನಡೆಯಿತು.
ಮೂಡುಬಿದಿರೆ ಪುರಸಭೆ ಸಭಾಂಗಣದಲ್ಲಿ ಬುಧವಾರ ನಡೆದ ವಿಶೇಷ ಸಭೆಯಲ್ಲಿ ನೀರಿನ ವಿಚಾರದಲ್ಲಿ ಚರ್ಚೆ ನಡೆಯಿತು.   

ಮೂಡುಬಿದಿರೆ: ನಗರಕ್ಕೆ ಕುಡಿಯುವ ನೀರಿನ ಮೂಲವಾಗಿರುವ ಪುಚ್ಚೆಮೊಗರು ನದಿಯಲ್ಲಿ ಜಲಮಟ್ಟ ತೀವ್ರ ಇಳಿಕೆಯಾಗಿರುವುದರಿಂದ ಫೆಬ್ರವರಿ 1ರಿಂದ ನಗರದ ಜನತೆಗೆ ಎರಡು ದಿನಕ್ಕೊಮ್ಮೆ ನೀರು ಪೂರೈಕೆ ಮಾಡಲು ಪುರಸಭೆ ನಿರ್ಧರಿಸಿದೆ.

ಇಲ್ಲಿನ ಪುರಸಭಾಂಗಣದಲ್ಲಿ ಬುಧವಾರ ಪುರಸಭೆ ಅಧ್ಯಕ್ಷ ರತ್ನಾಕರ ದೇವಾಡಿಗ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಯಿತು.

ಬೇಸಿಗೆಯಲ್ಲಿ ಕುಡಿಯುವ ನೀರಿನ ಕ್ಷಾಮ ಕಳೆದ ವರ್ಷಕ್ಕಿಂತಲೂ ಹೆಚ್ಚಾಗಲಿರುವುದರಿಂದ ನೀರಿನ ಬಳಕೆ ನಿಯಂತ್ರಿಸಲು ಮುಂದಿನ ದಿನಗಳಲ್ಲಿ ಪುರಸಭೆ ಎರಡು ದಿನಕ್ಕೊಮ್ಮೆ ನೀರು ಪೂರೈಸಲಿದೆ ಎಂದು ಮುಖ್ಯಾಧಿಕಾರಿ ರಾಯಪ್ಪ ತಿಳಿಸಿದರು.

ಪುಚ್ಚೆಮೊಗರಿನ ಜಲಮಟ್ಟ ಪರಿಶೀಲಿಸಿ ಬಳಿಕ ನಿರ್ಧಾರ ತೆಗೆದುಕೊಳ್ಳುವುದು ಒಳಿತು ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ್ ಕೋಟ್ಯಾನ್ ಸಲಹೆಯಿತ್ತರು.

ಗೌರವ ಧನ ಏರಿಕೆ: ನೀರು ಬಿಡುವವರು ಸರಿಯಾಗಿ ಕೆಲಸ ಮಾಡುತ್ತಿಲ್ಲ. ತಮಗೆ ಬೇಕಾದವರಿಗೆ ನೀರು ಬಿಟ್ಟು ಉಳಿದವರಿಗೆ ಅನ್ಯಾಯ ಮಾಡುತ್ತಿದ್ದಾರೆ. ಅವರ ಇಚ್ಚೆಯಂತೆ ಕೆಲಸ ಮಾಡಿದರೆ ಬೇಸಿಗೆಯಲ್ಲಿ ನೀರಿನ ಬಳಕೆದಾರರು ಮತ್ತಷ್ಟು ಸಮಸ್ಯೆ ಎದುರಿಸಲಿದ್ದಾರೆ. ಅವರು ಕಾನೂನು ರೀತಿ ಕೆಲಸ ಮಾಡುವಂತೆ ಪುರಸಭೆ ಕ್ರಮ ಕೈಗೊಳ್ಳಬೇಕು ಎಂದು ಕೃಷ್ಣರಾಜ ಹೆಗ್ಡೆ ಒತ್ತಾಯಿಸಿದರು. ಇದಕ್ಕೆ ಸ್ಪಂದಿಸಿದ ಅಧ್ಯಕ್ಷರು ಶೀಘ್ರದಲ್ಲೆ ನೀರು ಬಿಡುವ ಕಾರ್ಮಿಕರ ಸಭೆ ಕರೆದು ಅವರಿಗೆ ನಿರ್ದೇಶನ ನೀಡಲಾಗುವುದು. ಕಾರ್ಮಿಕರ ಗೌರವ ಧನವನ್ನು ಮಾಸಿಕ 600 ರೂಪಾಯಿಯಿಂದ 1000ಕ್ಕೆ ಏರಿಸಲಾಗುವುದು ಎಂದು ಅಧ್ಯಕ್ಷರು ತಿಳಿಸಿದರು.

ಪರವಾನಗಿ ನಿರಾಕರಣೆ: ಪುರಸಭೆ ವ್ಯಾಪ್ತಿಯಲ್ಲಿ ನೀರಿನ ಕೊರತೆ ನೀಗಿಸುವ ನಿಟ್ಟಿನಲ್ಲಿ ಪ್ರತಿ ಮನೆಯವರು ತಮ್ಮ ಜಾಗದಲ್ಲಿ ನೀರು ಇಂಗಿಸುವ ವ್ಯವಸ್ಥೆ ಮಾಡಿಕೊಳ್ಳಬೇಕು. ಈ ವ್ಯವಸ್ಥೆ ಮಾಡಿಕೊಳ್ಳದಿದ್ದವರಿಗೆ ಕಟ್ಟಡ ಪರವಾನಗಿ ನೀಡಬಾರದು ಎಂದು ಪಿ.ಕೆ. ಥೋಮಸ್ ಸಲಹೆಯಿತ್ತರು.

ನೀರು ಇಂಗಿಸುವಿಕೆ ವ್ಯವಸ್ಥೆಯನ್ನು ಪ್ರತಿ ಮನೆಗಳಲ್ಲಿ ಮಾಡಿಕೊಳ್ಳಲು ಅನುಕೂಲವಾಗುವಂತೆ ಕಟ್ಟಡ ಪರವಾನಗಿಯಲ್ಲಿ ಷರತ್ತು ಹಾಕಬೇಕೆಂದು ಸಭೆ ಸಲಹೆ ನೀಡಿತು.

ಪ್ರಾಂತ್ಯ ಗ್ರಾಮದಲ್ಲಿ ಪ್ರಸ್ತಾವಿತ ಹೊಸ ಹಿಂದೂ ರುದ್ರಭೂಮಿ ನಿರ್ಮಾಣ ವಿಚಾರ ಸಭೆಯಲ್ಲಿ ಪರ- ವಿರೋಧ ಚರ್ಚೆಗೆ ಗ್ರಾಸವಾಯಿತು. ರುದ್ರಭೂಮಿಗೆ ಸಂಬಂಧಿಸಿ ವಿಶ್ವನಾಥ ಪ್ರಭು ಅವರ ಕೋರಿಕೆ ಪತ್ರದ ಮೇಲೆ ಮಾತನಾಡಿದ ಕೃಷ್ಣರಾಜ ಹೆಗ್ಡೆ ಹೊಸ ರುದ್ರಭೂಮಿ ಪುರಸಭೆ ನಿಯಮಾವಳಿ ಪ್ರಕಾರ ರಚನೆಗೊಂಡು ಅದನ್ನು ಪುರಸಭೆಗೆ ಹಸ್ತಾಂತರಿಸುವುದಾದರೆ ಅನುಮತಿ ಕೊಡಿ.

ಈ ರುದ್ರಭೂಮಿ ಸಾರ್ವಜನಿಕ ಸೇವೆಗೆ ಲಭ್ಯವಾದಂದಿನಿಂದ ಈಗಿರುವ ರುದ್ರಭೂಮಿಯನ್ನು ಮುಚ್ಚಿ ಅಲ್ಲಿ ಘನತ್ಯಾಜ್ಯ ನಿರ್ವಹಣೆಗೆ ಬಳಸುವ ವಾಹನಗಳಿಗೆ ಪಾರ್ಕಿಂಗ್ ಮಾಡಲು ಅವಕಾಶ ಕಲ್ಪಿಸಬಹುದು ಎಂದು ಸಲಹೆ ಇತ್ತರು. ಇದಕ್ಕೆ ಪ್ರೇಮಾ ಸಾಲ್ಯಾನ್ ಸಹಿತ ಕೆಲ ಸದಸ್ಯರು ಬೆಂಬಲ ಸೂಚಿಸಿದರು. ಆದರೆ ಈಗಿರುವ ರುದ್ರಭೂಮಿಯನ್ನು ಮುಚ್ಚುವುದಕ್ಕೆ ಬಿಜೆಪಿಯ ಪ್ರಸಾದ್ ಕುಮಾರ್ ಮತ್ತು ದಿನೇಶ್ ಪೂಜಾರಿ ಆಕ್ಷೇಪ ವ್ಯಕ್ತಪಡಿಸಿ ಎರಡೂ ರುದ್ರಭೂಮಿಗಳು ಸಾರ್ವಜನಿಕರ ಸೇವೆಗೆ ಇರಬೇಕು ಎಂದು ಆಗ್ರಹಿಸಿದರು.

ಹೊಸದಾಗಿ ನಿರ್ಮಾಣವಾಗಲಿರುವ ರುದ್ರಭೂಮಿ ದಲಿತರ ಮನೆಗಳಿಗೆ ಹತ್ತಿರವಾಗಲಿರುವುದರಿಂದ ಅದಕ್ಕೆ ಅವಕಾಶ ಕೊಡಬಾರದು ಎಂದು ಉಪಾಧ್ಯಕ್ಷೆ ರಮಣಿ ಒತ್ತಾಯಿಸಿದರು. ಬಳಕೆಯಾಗದಿದ್ದರೂ ಈಗಿರುವ ರುದ್ರಭೂಮಿಯ ಕಂಪೌಂಡನ್ನು ಕೆಡವಬಾರದು ಎಂದ ಅವರು ಹೇಳಿದಾಗ ಆ ರೀತಿ ಮಾಡಿದವರ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಲಾಗುವುದು ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ್ ಕೋಟ್ಯಾನ್ ಹೇಳಿದರು. ಕೆಲ ಸದಸ್ಯರ  ಆಕ್ಷೇಪಗಳ ಹೊರತಾಗಿ ಪ್ರಸ್ತಾವಿತ ರುದ್ರಭೂಮಿಗೆ ಅನುಮತಿ ನೀಡುವುದಾಗಿ ಅಧ್ಯಕ್ಷರು ಸಭೆಗೆ ತಿಳಿಸಿದರು.
ಬಾಹುಬಲಿ ಪ್ರಸಾದ್, ರಾಜೇಶ್, ಹರೀಶ್ ಮತ್ತಿತರ ಸದಸ್ಯರು ಚರ್ಚೆಯಲ್ಲಿ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.