ADVERTISEMENT

ನುಡಿಸಿರಿಯ ವೈಭವ ಕಳೆಗಟ್ಟಿದೆ ನೋಡಾ...!

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2013, 9:11 IST
Last Updated 20 ಡಿಸೆಂಬರ್ 2013, 9:11 IST
ಮೂಡುಬಿದಿರೆಯಲ್ಲಿ ಗುರುವಾರ ಆರಂಭಗೊಂಡ ಆಳ್ವಾಸ್‌ ವಿಶ್ವನುಡಿಸಿರಿ ವಿರಾಸತ್‌–2013ರ ಹಿನ್ನೆಲೆಯಲ್ಲಿ ನಡೆದ ಮೆರವಣಿಗೆಗೆ ಮೆರುಗು ನೀಡಿದ ಡೊಳ್ಳು ಕುಣಿತ ತಂಡ. 	–ಪ್ರಜಾವಾಣಿ ಚಿತ್ರ
ಮೂಡುಬಿದಿರೆಯಲ್ಲಿ ಗುರುವಾರ ಆರಂಭಗೊಂಡ ಆಳ್ವಾಸ್‌ ವಿಶ್ವನುಡಿಸಿರಿ ವಿರಾಸತ್‌–2013ರ ಹಿನ್ನೆಲೆಯಲ್ಲಿ ನಡೆದ ಮೆರವಣಿಗೆಗೆ ಮೆರುಗು ನೀಡಿದ ಡೊಳ್ಳು ಕುಣಿತ ತಂಡ. –ಪ್ರಜಾವಾಣಿ ಚಿತ್ರ   

ವಿದ್ಯಾಗಿರಿ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆಯೋಜಿಸುವ ಕನ್ನಡ ನಾಡು-ನುಡಿಯ ರಾಷ್ಟ್ರೀಯ ಸಮ್ಮೇಳನ ನುಡಿಸಿರಿಗೆ ಈ ಬಾರಿ ಹತ್ತನೇ ವರ್ಷದ ಸಂಭ್ರಮ. ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ವಿರಾಸತ್ ಈ ಬಾರಿ 20ನೇ ವರ್ಷಕ್ಕೆ ಕಾಲಿಡುತ್ತಿದೆ. ಹಾಗಾಗಿ, ಈ ಬಾರಿ ಇಲ್ಲಿನ ವಿದ್ಯಾಗಿರಿಯಲ್ಲಿ ನಾಲ್ಕು ದಿನಗಳ ಕಾಲ 'ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ ಸಂಭ್ರಮ. ಈ ವರ್ಷ ಕೃಷಿಸಿರಿಯೂ ನಡೆಯಲಿದೆ. ಗುರುವಾರದಿಂದ ಭಾನುವಾರದವರೆಗೆ ಇಲ್ಲಿ ಎಲ್ಲವೂ ಕೃಷಿ, ಕನ್ನಡ ಮತ್ತು ಸಂಸ್ಕೃತಿಮಯ.

ವಿರಾಸತ್ ಕಾರ್ಯಕ್ರಮ ಇಷ್ಟು ವರ್ಷ ಮೂಡುಬಿದಿರೆ ಸಮೀಪದ ಮಿಜಾರಿನ ಶೋಭಾವನದಲ್ಲಿ ನಡೆಯುತ್ತಿತ್ತು. ಈ ಬಾರಿ ಅದು ವಿದ್ಯಾಗಿರಿಯ ಆವರಣದಲ್ಲೇ ನಡೆಯುತ್ತಿದೆ. ನುಡಿಸಿರಿಯನ್ನು ಮೊದಲಿಂದಲೂ ಇಲ್ಲೇ ಆಯೋಜಿಸಲಾಗುತ್ತಿದೆ. ವಿರಾಸತ್ ಮತ್ತು ನುಡಿಸಿರಿ ಮೊದಲ ಬಾರಿಗೆ ಒಂದೇ ಕಡೆ, ಒಂದೇ ಸಂದರ್ಭದಲ್ಲಿ ನಡೆಯುತ್ತಿರುವ ಕಾರಣ, ವಿದ್ಯಾಗಿರಿ ನವ ವಧುವಿನಂತೆಯೂ, ನವ ವರನಂತೆಯೂ ಸಿಂಗರಿಸಿಕೊಂಡಿದೆ.

ನುಡಿಸಿರಿಯ ವಿಚಾರಗೋಷ್ಠಿಗಳು ನಡೆಯುವ ರತ್ನಾಕರವರ್ಣಿ ವೇದಿಕೆ, ವಿರಾಸತ್ ಕಾರ್ಯಕ್ರಮಗಳು ನಡೆಯುವ ವೇದಿಕೆ, ಪ್ರತಿನಿಧಿಗಳಿಗೆ ಸಾಂಸ್ಕೃತಿಕ ರಸದೌತಣ ನೀಡಲಿರುವ ಕೆ.ವಿ. ಸುಬ್ಬಣ್ಣ ಬಯಲು ರಂಗಮಂದಿರ ಸೇರಿದಂತೆ ಒಟ್ಟು ಒಂಬತ್ತು ವೇದಿಕೆಗಳನ್ನು ಸಜ್ಜುಗೊಳಿಸಲಾಗಿದೆ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಆವರಣದಲ್ಲಿ ಎಲ್ಲಿ ನೋಡಿದರೂ ಸಂಭ್ರಮದ ಗದ್ದಲ, ಸಡಗರ, ಪ್ರತಿನಿಧಿಗಳು ಮತ್ತು ಕಾರ್ಯಕ್ರಮದ ಪದಾಧಿಕಾರಿಗಳ ಸಡಗರದ ಓಡಾಟ.

ನುಡಿಸಿರಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ನಡೆದಿದ್ದು ಗುರುವಾರ ಸಂಜೆ 6 ಗಂಟೆಗೆ. ಆದರೆ ವಿದ್ಯಾಗಿರಿಯಲ್ಲಿ ಶುಕ್ರವಾರ ಬೆಳ್ಳಂಬೆಳಿಗ್ಗೆಯೇ ಸಡಗರ ಮನೆ ಮಾಡಿತ್ತು. ರಾಜ್ಯದ ವಿವಿಧ ಜಿಲ್ಲೆಗಳಿಂದ ಬರುವ ಪ್ರತಿನಿಧಿಗಳನ್ನು ಸ್ವಾಗತಿಸಲು, ಅವರ ಹೆಸರು ನೋಂದಣಿ ಮಾಡಿಕೊಳ್ಳಲು ಪದಾಧಿಕಾರಿಗಳು ಬೆಳಿಗ್ಗೆ ಏಳು ಗಂಟೆಯ ವೇಳೆಗಾಗಲೇ ಸಜ್ಜಾಗಿದ್ದರು. ವಿವಿಧ ಜಿಲ್ಲೆಗಳಿಂದ ಬರುವ ಪ್ರತಿನಿಧಿಗಳಿಗೆ ಬೇರೆ ಬೇರೆ ಕೇಂದ್ರಗಳನ್ನು ತೆರೆಯಲಾಗಿದೆ. ಬೆಳಿಗ್ಗೆ ಏಳು ಗಂಟೆಗೇ ವಿವಿಧ ಜಿಲ್ಲೆಗಳ ಪ್ರತಿನಿಧಿಗಳು ವಿದ್ಯಾಗಿರಿ ತಲುಪಿದ್ದರು. ಕಾಲೇಜು ಆವರಣದಲ್ಲಿ ಸಂಭ್ರಮದಿಂದ ತಿರುಗಾಡಿಕೊಂಡಿದ್ದರು.

ಗುತ್ತಿನ ಮನೆ:  ಪಾರಂಪರಿಕ ಗುತ್ತಿನ ಮನೆಯ ಶೈಲಿಯಲ್ಲಿ ರತ್ನಾಕ­ರ­ವರ್ಣಿ ವೇದಿಕೆಯನ್ನು ರೂಪಿಸಲಾಗಿದ್ದು, ಪೂರ್ವಾಹ್ನದ ವೇಳೆಗೆ ಕಲಾವಿದರು ವೇದಿಕೆಯ ಸೌಂದರ್ಯಕ್ಕೆ ಇನ್ನಷ್ಟು ಹೊಳಪು ನೀಡುವ ಕೆಲಸದಲ್ಲಿ ತಲ್ಲೀನರಾಗಿದ್ದರು. ಉದ್ಘಾಟನಾ ಕಾರ್ಯಕ್ರಮದ ವೇಳೆಗೆ ಆ ಕೆಲಸವೂ ಪೂರ್ಣಗೊಂಡಿತು. ವೇದಿಕೆಯ ಎದುರಿರುವ ಕೋಟ ಶಿವರಾಮ ಕಾರಂತ ಸಭಾಂಗಣ ಬಣ್ಣದ ಗೂಡುದೀಪ­ಗಳಿಂದ ಅಲಂಕೃತಗೊಂಡು, ನೋಡುಗರ ಕಣ್ಮನ ಸೆಳೆಯುತ್ತಿದೆ.

ವಿದ್ಯಾಗಿರಿಯ ಮುಖಮಂಟಪದಿಂದ ಪ್ರಧಾನ ವೇದಿಕೆಯತ್ತ ಸಾಗುವ ಮಾರ್ಗದಲ್ಲಿ ಅಕ್ಕ-ಪಕ್ಕದಲ್ಲಿ ನಾಡಿನ ಹಿರಿಯ ಸಾಹಿತಿಗಳು, ಕಲಾವಿದರ ಭಾವಚಿತ್ರಗಳನ್ನು ಹಾಕಲಾಗಿದೆ. ನುಡಿಸಿರಿಗೆ ಬರುವ ಸಾಹಿತ್ಯಾಸಕ್ತರಿಗೆ ನಾಡಿನ ಹಿರಿಯ ಸಾಹಿತಿಗಳು, ಕಲಾವಿದರ ನೆನಪಾಗುವಂತೆ ಮಾಡುತ್ತವೆ ಈ ಭಾವಚಿತ್ರಗಳು. ತಮಗಿಷ್ಟವಾದ ಸಾಹಿತಿ, ಕಲಾವಿದರ ಭಾವಚಿತ್ರದ ಬುಡದಲ್ಲಿ ನಿಂತುಕೊಂಡು ಫೋಟೊ ತೆಗೆಸಿಕೊಳ್ಳುತ್ತಿದ್ದ ಸಾಹಿತ್ಯಾಸಕ್ತರ ಸಂಭ್ರಮ ಹೇಳತೀರದು.

ಶಿವರಾಮ ಕಾರಂತ ಸಭಾಂಗಣದಿಂದ ಪುಸ್ತಕ ಪ್ರದರ್ಶನ, ಆಹಾರ ಮೇಳ ಇರುವ ಕಡೆ ಸಾಗುವ ಮಾರ್ಗದ ಇಕ್ಕೆಲಗಳಲ್ಲಿ ಪರಶುರಾಮ, ನಾಟ್ಯ ಗಣಪತಿ, ಭಗವಾನ್ ಬಾಹುಬಲಿ, ಕೋಟಿ- ಚೆನ್ನಯರ ಮೂರ್ತಿಗಳನ್ನು ನಿಲ್ಲಿಸಲಾಗಿದೆ. ಥರ್ಮೋಕೋಲ್ ಬಳಸಿ ನಿರ್ಮಿಸಿರುವ ಈ ಮೂರ್ತಿಗಳು ಆಕರ್ಷಣೆಯ ಕೇಂದ್ರಗಳಾಗಿ ಪರಿವರ್ತನೆಗೊಂಡಿವೆ.

ಹಣ್ಣಿನಲ್ಲಿ ಸಾಹಿತಿಗಳ ಮುಖ: ಪುಸ್ತಕ ಪ್ರದರ್ಶನ ಇರುವ ಜಾಗದಿಂದ ಆಹಾರ ಮೇಳ ಇರುವ ಕಡೆ ಸಾಗುವ ಮಾರ್ಗದಲ್ಲಿ, ಕಲ್ಲಂಗಡಿ ಹಣ್ಣಿನಲ್ಲಿ ನಾಡಿನ ಹಿರಿಯ ಸಾಹಿತಿಗಳ ಮುಖದ ಕೆತ್ತನೆ ಮಾಡಲಾಗಿದೆ. ಬಳ್ಳಾರಿಯ ಶರಣಪ್ಪ ಮತ್ತು ಹರೀಶ್ ಎಂಬುವರು ಇದರ ಶಿಲ್ಪಿಗಳು. ಇದಲ್ಲದೆ, ತಾಳೆಗರಿ ಬಳಸಿ ಗಣಪತಿಯನ್ನೂ ರಚಿಸಿದ್ದಾರೆ.

ಭಗವಾನ್ ಬಾಹುಬಲಿಯ ಮೂರ್ತಿ ಇರುವ ಜಾಗದಿಂದ ನಿಂತು ನೋಡಿದರೆ, ಮೂಡುಬಿದಿರೆ ಪಟ್ಟಣದ ವಿಹಂಗಮ ನೋಟ ಕಣ್ಣಿಗೆ ಹಬ್ಬ ಎನಿಸುತ್ತದೆ. ಅಲ್ಲೇ ಕೆಳಗೆ ಹರಡಿಕೊಂಡಿರುವ ಬಯಲಿನಲ್ಲಿ ಕೃಷಿ ಮೇಳ ನಡೆಯಲಿದೆ. ಅದು ಶುಕ್ರವಾರ ಉದ್ಘಾಟನೆಗೊಳ್ಳಲಿದೆ. 

ಮಾಧ್ಯಮ ಕೇಂದ್ರ:  ನೂರಕ್ಕೂ ಹೆಚ್ಚಿನ ಕಂಪ್ಯೂಟರ್ ಹೊಂದಿರುವ ಸುಸಜ್ಜಿತ ಮಾಧ್ಯಮ ಕೇಂದ್ರವನ್ನು ಈ ಬಾರಿಯೂ ಸಜ್ಜುಗೊಳಿಸಲಾಗಿದೆ. ಪ್ರತಿಯೊಂದು ಕಂಪ್ಯೂಟರಿಗೆ ಇಂಟರ್ನೆಟ್ ಸಂಪರ್ಕ ಕಲ್ಪಿಸಲಾಗಿದೆ. ವಾಹನಗಳ ನಿಲುಗಡೆಗೆ ಮೀಸಲಿಟ್ಟಿರುವ 17 ಎಕರೆ ಜಾಗ ಸೇರಿದಂತೆ ಒಟ್ಟು ನೂರು ಎಕರೆ ಜಾಗದಲ್ಲಿ ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT