ADVERTISEMENT

ಪಡುಬಿದ್ರಿಯಲ್ಲಿ ಬೈಪಾಸ್‌ಗೆ ಜಿಲ್ಲಾಧಿಕಾರಿ ಸ್ಥಳ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 7 ಜೂನ್ 2012, 8:20 IST
Last Updated 7 ಜೂನ್ 2012, 8:20 IST

ಪಡುಬಿದ್ರಿ: ತೀವ್ರ ಕುತೂಹಲಕ್ಕೆ ಕಾರಣವಾದ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಯ ವೇಳೆ ಪಡುಬಿದ್ರಿಯಲ್ಲಿ ಬೈಪಾಸ್ ಯೋಜನೆಗೆ ಸಂಬಂಧಿಸಿ ಜಿಲ್ಲಾಧಿಕಾರಿ ಡಾ.ಎಮ್.ಟಿ.ರೇಜು ಬುಧವಾರ ಭೇಟಿ ಸ್ಥಳ ಪರಿಶೀಲನೆ ನಡೆಸಿದರು.

ಬೈಪಾಸ್ ಹಾದುಹೋಗಲಿರುವ ಪಾದೆಬೆಟ್ಟು, ಎಸ್.ಸಿ. ಕಾಲನಿ, ರಾಮನಗರ, ದೀನ್‌ಸ್ಟ್ರೀಟ್, ಅಬ್ಬಾಸ್ ಗುಡ್ಡೆ ಪ್ರದೇಶಗಳಿಗೆ ಕಾಲ್ನಡಿಗೆಯಲ್ಲೇ ತೆರಳಿ ಸಂತ್ರಸ್ತರಾಗಲಿರುವ ಕುಟುಂಬಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿಗಳನ್ನು ಪಡೆದುಕೊಂಡರು.

ಪಡುಬಿದ್ರಿಯಲ್ಲಿ ಬೈಪಾಸ್:  ಬೈಪಾಸ್ ವಿರೋಧವಾಗಿ ಹೈಕೋರ್ಟ್‌ಗೆ ಸಲ್ಲಿಸಿದ್ದ ಪಿಐಎಲ್ ರದ್ದಾಗಿದೆ ಅಲ್ಲದೇ ಹೆದ್ದಾರಿ ಚತುಷ್ಪಥ ಕಾಮಗಾರಿಯ ವೇಗಕ್ಕೆ ಈ ಭಾಗದಲ್ಲಿ ತೊಡಕಾಗಿದೆ. ಹಾಗಾಗಿ ಶೀಘ್ರ ಸರ್ವೇ ನಡೆಸಿ ನೋಟಿಸ್ ಜಾರಿ ಮಾಡಿ ಬೈಪಾಸ್ ಕಾಮಗಾರಿ ಆರಂಭಿಸಲಾಗುವುದು.

ಈ ಹಿಂದೆ 60ಮೀಟರ್ ಬೈಪಾಸ್ ಯೋಜನೆ ನಿರ್ಮಿಸಲು ಉದ್ದೇಶಿಸಲಾಗಿದ್ದು, ಇದರಂತೆ 48ಮನೆಗಳಿಗೆ ಹಾನಿಯಾಗುವ ಬಗ್ಗೆ ವರದಿ ಸಲ್ಲಿಸಲಾಗಿತ್ತು. ಆದರೆ ಈಗ ಮುಖ್ಯಮಂತ್ರಿಗಳು 45ಮೀಟರ್‌ಗೆ ಬೈಪಾಸ್ ಸೀಮಿತಗೊಳಿಸಲು ಆದೇಶಿಸಿರುವುದರಿಂದ 20ಮನೆಗಳಿಗೆ ಮಾತ್ರ ಹಾನಿಯಾಗಲಿದೆ. ಎಸ್‌ಸಿ ಕಾಲೊನಿಯಲ್ಲೂ 3 ಮನೆಗಳು ಇದರಲ್ಲಿ ಸೇರಿವೆ ಎಂದರು.

ಸರ್ವೇಗೆ ಸೂಚನೆ: ಸರ್ಕಾರವು ಬೈಪಾಸ್ ಯೋಜನೆ ಜಾರಿಗೆ ನಿರ್ಧರಿಸಿದ್ದು, ಎರಡು ದಿನಗಳೊಳಗೆ ಈ ಭಾಗದ ಕನಿಷ್ಠ ಮನೆ ತೆಗೆಯುವ ನಿಟ್ಟಿನಲ್ಲಿ ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ಹೆದ್ದಾರಿ ಪ್ರಾಧಿಕಾರ ಕಂದಾಯ ಇಲಾಖೆಗೆ ಸೂಚನೆ ನೀಡಿದರು.

ವಿರೋಧ: ಹೆದ್ದಾರಿ ಯೋಜನೆ ಆರಂಭಗೊಂಡಂದಿನಿಂದ ಪಡುಬಿದ್ರಿಯಲ್ಲಿ ಹೆದ್ದಾರಿ ಅಗಲೀಕರಣಕ್ಕೆ ಬದಲಾಗಿ ಬೈಪಾಸ್ ಯೋಜನೆಗೆ ನೀಲಿ ನಕಾಶೆ ಸಿದ್ಧಪಡಿಸಲಾಗಿತ್ತು. ಆದರೆ ಸಾರ್ವಜನಿಕ ವಿರೋಧದಿಂದ ಈ ಯೋಜನೆ ಕಾರ್ಯಗತಗೊಂಡಿರಲಿಲ್ಲ.

ಅಂತಿವಾಗಿಲ್ಲ:  ಈ ಬಗ್ಗೆ ಸಂಸದ ಜಯಪ್ರಕಾಶ್ ಹೆಗ್ಡೆ ಅವರನ್ನು `ಪ್ರಜಾವಾಣಿ~ ಸಂಪರ್ಕಿಸಿದಾಗ ಇದುವರೆಗೂ ಬೈಪಾಸ್ ಬಗ್ಗೆ ಅಂತಿಮ ತೀರ್ಮಾನ ಆಗಿಲ್ಲ. ದೆಹಲಿಯಲ್ಲಿ ಆಸ್ಕರ್ ಜೊತೆಗೂಡಿ ಹೆದ್ದಾರಿ ಪ್ರಾಧಿಕಾರದೊಂದಿಗೆ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

 ರಾಜ್ಯ ಬಿಜೆಪಿ ಸರಕಾರದಿಂದ ದಲಿತರಿಗೆ, ಜನಸಾಮಾನ್ಯರಿಗೆ ಆದ ತೊಂದರೆಯನ್ನು ಹೆದ್ದಾರಿ ಪ್ರಾಧಿಕಾರ ಮತ್ತು ಕೇಂದ್ರ ಜನಪ್ರತಿನಿಧಿಗಳು ನಿವಾರಿಸುವ ಭರವಸೆ ಇತ್ತು. ಇದೀಗ ತೀವ್ರ ನಿರಾಸೆಯಾಗಿದೆ. ಕೇಂದ್ರ ಮತ್ತು ರಾಜ್ಯ ಸರಕಾರ ಒಂದೇ ನಾಣ್ಯದ ಎರಡು ಮುಖಗಳು. ಇವರಿಗೆ ಬಡವರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ ಎಂದು ದಲಿತ ಮುಖಂಡ ಶೇಖರ ಹೆಜ್ಮಾಡಿ ಹೇಳಿದ್ದಾರೆ.

ಬಂಡವಾಳಶಾಹಿಗಳ ಪರ:  ಈ ಮೊದಲು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಸಂಸದರಾಗಿದ್ದ ವೇಳೆ ಬೈಪಾಸ್‌ಗೆ ವಿರೋಧ ವ್ಯಕ್ತಪಡಿಸಿದ್ದರು. ಆದರೆ ಮುಖ್ಯಮಂತ್ರಿಯಾದ ಬಳಿಕ ಬಂಡವಾಳಶಾಹಿಗಳ ಒತ್ತಡಕ್ಕೆ ಮಣಿದು ಬೈಪಾಸ್‌ಗೆ ಆದೇಶಿಸಿದ್ದಾರೆ ಸಂಸದ ಜಯಪ್ರಕಾಶ್ ಹೆಗ್ಡೆಯವರು ಇದನ್ನೇ ಮುಂದುವರಿಸಿದ್ದಾರೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಹೇಳಿದ್ದಾರೆ. 

 ಬೈಪಾಸ್‌ನಿಂದ ಅಲ್ಪಸಂಖ್ಯಾತ ಮುಸ್ಲಿಂ ಸಮಾಜದ ಹಲವು ಕುಟುಂಬಗಳು  ಸಂತ್ರಸ್ತರಾಗಲ್ದ್ದಿದು,  ಜಿಲ್ಲಾಡಳಿತ ಪುನರ್‌ಪರಿಶೀಲನೆ ನಡೆಸಬೇಕು. ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿಬೇಕು ಎಂದು ಪಡುಬಿದ್ರಿ ವಲಯ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಎಂ.ಪಿ.ಮೊಯಿದಿನಬ್ಬ ಹೇಳಿದ್ದಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.