ADVERTISEMENT

ಪಡುಮಲೆ ಕ್ಷೇತ್ರ ಅಭಿವೃದ್ಧಿ: ನಾಳೆ ವಿಶೇಷ ಪೂಜೆ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2013, 4:24 IST
Last Updated 21 ಡಿಸೆಂಬರ್ 2013, 4:24 IST

ಪುತ್ತೂರು: ಪಡುಮಲೆಯ ಕೋಟಿ ಚೆನ್ನಯ ಐತಿಹಾಸಿಕ ಕ್ಷೇತ್ರ ಸಂವರ್ಧನಾ ಪ್ರತಿಷ್ಠಾನದ ವತಿಯಿಂದ ಡಿ.13ರಿಂದ 17ರ ತನಕ ನಡೆದ ಅಷ್ಟಮಂಗಲ ಚಿಂತನೆಯಲ್ಲಿ ಕಂಡು ಬಂದಂತೆ ರಾಜರಾಜೇಶ್ವರಿ ದೇವಿಯನ್ನು ಶಾಂತಗೊಳಿಸುವ ಸಲುವಾಗಿ ಭಾನುವಾರ ಪಡುಮಲೆ ಕೂವೆ ಶಾಸ್ತಾರ ದೇವಸ್ಥಾನಲ್ಲಿ ಶ್ರೀ ದೇವಿಯನ್ನು ಪ್ರಾರ್ಥಿಸಿ ಅಷ್ಟದ್ರವ್ಯ ಸಮೇತ 108 ತೆಂಗಿನ ಕಾಯಿಗಳ ಗಣಪತಿ ಹೋಮ, ಸರ್ವ ಐಶ್ವರ್ಯ ವರಲಕ್ಷ್ಮಿ ಪೂಜೆ ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ ನಡೆಯಲಿದೆ.

ಪ್ರತಿಷ್ಠಾನದ ಅಧ್ಯಕ್ಷ ನಾರಾಯಣ ರೈ ಕುದ್ಕಾಡಿ ಮತ್ತು ಕಾರ್ಯದರ್ಶಿ ಉಲ್ಲಾಸ್ ಕೋಟ್ಯಾನ್  ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತ­ನಾಡಿ, ದ.ಕ. ಉಡುಪಿ,ಮಡಿಕೇರಿ ಮತ್ತು ಕಾಸರ­ಗೋಡು ಜಿಲ್ಲಾ ವ್ಯಾಪ್ತಿಯಲ್ಲಿರುವ ಎಲ್ಲಾ 230 ಗರಡಿಗಳ ಮುಖ್ಯಸ್ಥ­ರು ಮತ್ತು ಊರಿನ ಭಕ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ಕೇಳಿಕೊಂಡರು.

ಪ್ರತಿಷ್ಠಾನದ ಪ್ರಯತ್ನದಿಂದಾಗಿ ಮತ್ತು ಈ ಭಾಗದ ಜನಪ್ರತಿನಿಧಿಗಳ ಪೂರ್ಣ ಸಹಕಾರದಿಂದಾಗಿ ಪಡುಮಲೆ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರದಿಂದ ಒಟ್ಟು ₨ 5.25 ಕೋಟಿ ಅನುದಾನ ಬಿಡುಗಡೆ­ಯಾಗಿದೆ. ಪಡುಮಲೆ ಐತಿಹಾಸಿಕ ಮತ್ತು ಧಾರ್ಮಿಕ ಕ್ಷೇತ್ರವಾಗಿರುವುದರಿಂದ ಸಂಬಂಧಪಟ್ಟ ಕಾಮಗಾರಿ­ಗಳನ್ನು ಆರಂಭಿಸುವ ಹಿನ್ನೆಲೆಯಲ್ಲಿ ಕೇರಳದ ಪ್ರಸಿದ್ಧ ದೈವಜ್ಞರಾದ ಶಶಿಧರನ್ ಮಾಂಗಾಡು ಅವರ ಮೂಲಕ ಅಷ್ಟಮಂಗಲ ಪ್ರಶ್ನೆ ಚಿಂತನೆ ನಡೆಸ­ಲಾಗಿತ್ತು. ಪ್ರಶ್ನೆ ಚಿಂತನೆಯಲ್ಲಿ ಕೋಟಿ ಚೆನ್ನಯರ ತಾಯಿ ದೇಯಿ ಬೈದೆತಿ  ಅಗಾಧವಾದ ಶಕ್ತಿ ಸ್ವರೂ­ಪಿಣಿ­ಯಾಗಿರುವ ವಿಚಾರ ಕಂಡು ಬಂದಿದೆ. ದೇಯಿ ಬೈದೆತಿಯೇ ದೈವತ್ವಕ್ಕೇರಿ ಸಾಕ್ಷಾತ್ ರಾಜರಾಜೇಶ್ವರಿ ದೇವಿಯಾಗಿರುವುದು, ಕ್ಷೇತ್ರದ ಪ್ರಧಾನ ದೈವೀ ಶಕ್ತಿಯಾದ ರಾಜರಾಜೇಶ್ವರಿ ದೇವಿಗೆ ಆರಾಧನೆ ನಡೆಯದೇ ಇರುವುದರಿಂದ ಮತ್ತು ಕಡೆಗಣನೆ­ಯಿಂದಾಗಿ ಕೋಪಿಷ್ಟೆಯಾಗಿ ನೋವಿನಿಂದ ಇರು­ವು­ದು ಹಾಗೂ ಇದರಿಂದಾಗಿ ಸಮಸ್ಯೆಗಳು ಎದುರಾ­ಗುತ್ತಿ­ರುವ ವಿಚಾರ ಅಷ್ಟಮಂಗಲ ಪ್ರಶ್ನೆಯಿಂದ ಕಂಡು ಬಂದಿದೆ ಎಂದರು.

ಅಷ್ಟ ಮಂಗಲ ಪ್ರಶ್ನೆ ಚಿಂತನೆ ಮುಂದಿನ ಜೂನ್ 2 ರಿಂದ 7ರ ತನಕ ಮತ್ತೆ ನಡೆಯಲಿದೆ. ನಡುವೆ ದೈವಜ್ಞ­ರಿಗೆ ಸಮಯಾವಕಾಶ ಇದ್ದಲ್ಲಿ ಫೆಬ್ರವರಿ ತಿಂಗಳಲ್ಲಿ ಪ್ರಶ್ನೆ ಚಿಂತನೆ ನಡೆಯಲಿದೆ ಎಂದು ಅವರು ತಿಳಿಸಿದರು. 

ಪ್ರತಿಷ್ಠಾನದ ಉಪಾಧ್ಯಕ್ಷ ಶೇಖರ್ ನಾರಾವಿ  ಮಾತನಾಡಿ, ಕೋಟಿ- ಚೆನ್ನಯರು ಜೀವಿತಾವಧಿ­ಯ­ಲ್ಲಿ ಪಡುಮಲೆ ಬಿಟ್ಟು ತೆರಳಿದ್ದರೂ ಕಾಲಾ ನಂತರ ದೈವತ್ವಕ್ಕೇರಿದ್ದಾರೆ. ದೇಯಿ ಬೈದೆತಿ ಕಾಲಾ ನಂತರ ದೈವತ್ವಕ್ಕೇರಿ ರಾಜರಾಜೇಶ್ವರಿ ದೇವಿಯಾಗಿ ಪಡು­ಮಲೆ ಕ್ಷೇತ್ರದಲ್ಲಿ ನೆಲೆಯಾಗಿರುವುದರಿಂದ ಆಕೆಯ ಮಕ್ಕಳಾದ ಕೋಟಿ- ಚೆನ್ನಯರು ಪಡುಮಲೆಗೆ ಬಂದೇ ಬರುತ್ತಾರೆ.

ಈ ವಿಚಾರ ಪ್ರಶ್ನೆ ಚಿಂತನೆ­ಯ­ಲ್ಲೂ ಸ್ಪಷ್ಟ­ಗೊಂಡಿದೆ ಎಂದರು. ಮುಂದಿನ ದಿನಗಳಲ್ಲಿ ಸಲಹಾ ಸಮಿತಿಯನ್ನು ರಚಿಸಿಕೊಂಡು ಪ್ರತಿಷ್ಠಾನನ್ನು ಇನ್ನಷ್ಟು ವಿಸ್ತರಿಸುವ ಮತ್ತು ಬಲಗೊಳಿಸುವ ಮೂಲ­ಕ ಪಡುಮಲೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಪ್ರಯತ್ನಿ­ಸಲಿದೆ ಎಂದರು. ಇದು ಒಂದೆರಡು ವರ್ಷ­ದಲ್ಲಿ ಮುಗಿ­ಯುವ ಕೆಲಸವಲ್ಲ. ಇದು ಸುಮಾ­ರು 25 ವರ್ಷ­ಗಳ ದೀರ್ಘಾವಧಿ ಯೋಜನೆ­ಯಾಗಿದ್ದು, ಆ ಬಳಿಕದ ದಿನಗಳಲ್ಲಿ  ಪಡುಮಲೆ ಕ್ಷೇತ್ರ ಮತ್ತು ಪಡು­ಮಲೆಯ ಇತಿಹಾಸ ಲೋಕ ಪ್ರಖ್ಯಾತವಾಗಲಿದೆ ಎಂದರು.

ಪ್ರತಿಷ್ಠಾನದ ಸಂಚಾಲಕ ಕೆ,ಸಿ,ಪಾಟಾಳಿ ಪಡು­ಮಲೆ ಅವರು ಮಾತನಾಡಿ, ಅಷ್ಟಮಂಗಲ ಪ್ರಶ್ನೆಯ ಬಳಿಕವಷ್ಟೇ ಧಾರ್ಮಿಕ ಕೇಂದ್ರದ ವ್ಯವಸ್ಥೆಗೆ ಯೋಜನೆ ರೂಪಿಸಬೇಕಾಗಿದೆ. ಇದೀಗ ಬಿಡುಗಡೆಯಾದ ಅನು­ದಾನದಲ್ಲಿ ಕೆಲಸ ಕಾರ್ಯಗಳು ಮುಂದುವರಿಯ­ಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.