ADVERTISEMENT

ಪರಮಾಣು ಯೋಜನೆ-ಇಂಧನ ಕ್ಷೇತ್ರ ಸುರಕ್ಷತೆ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2012, 9:30 IST
Last Updated 26 ಫೆಬ್ರುವರಿ 2012, 9:30 IST

ಮಂಗಳೂರು: ದೇಶವು ಇಂಧನ ಕ್ಷೇತ್ರದಲ್ಲಿ ಸುರಕ್ಷತೆ ಸಾಧಿಸಲು ದೀರ್ಘಾವಧಿ ಪರಮಾಣು ಯೋಜನೆ ಯಿಂದ ಸಾಧ್ಯವಿದೆ ಎಂದು ಅಣುಶಕ್ತಿ ಆಯೋಗದ ಅಧ್ಯಕ್ಷ ಹಾಗೂ ಅಣು ಶಕ್ತಿ ಇಲಾಖೆಯ ಕಾರ್ಯದರ್ಶಿ ಶ್ರೀಕುಮಾರ್ ಬ್ಯಾನರ್ಜಿ ಅಭಿಪ್ರಾಯ ಪಟ್ಟರು.

ಸುರತ್ಕಲ್‌ನ ಎನ್‌ಐಟಿಕೆಯಲ್ಲಿ ಶನಿವಾರ 9ನೇ ಘಟಿಕೋತ್ಸವದಲ್ಲಿ ಭಾಷಣ ಮಾಡಿದ ಅವರು, ಕಲ್ಪಾಕಂನಲ್ಲಿರುವ ದೇಶಿ ತಂತ್ರಜ್ಞಾನದ ಅಣುವಿದ್ಯುತ್ ಸ್ಥಾವರದಲ್ಲಿ ಈಗ ನಿರ್ಮಾಣ ಹಂತದಲ್ಲಿರುವ ಪ್ರೊಟೊ ಟೈಪ್ ಫಾಸ್ಟ್‌ಬ್ರೀಡರ್ ಸ್ಥಾವರ ಇನ್ನೂ ಹೆಚ್ಚಿನ ಗುಣಮಟ್ಟದ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇದು ಸಕಾಲಕ್ಕೆ ಕಾರ್ಯಾರಂಭ ಮಾಡಿದರೆ, ಮಾಲಿನ್ಯರಹಿತ ವಿದ್ಯುತ್ ಬೇಡಿಕೆ ಈಡೇರಿಸಲು ಸಾಧ್ಯವಾಗಲಿದೆ ಎಂದರು.

ಸಿದ್ಧ ಘಟಿಕೋತ್ಸವ ಭಾಷಣ ಪ್ರತಿ ಓದದೇ ಮುಕ್ತ ಚಿಂತನೆ ಹರಿಯಬಿಟ್ಟ ಶ್ರೀಕುಮಾರ್, ಕಳೆದ ವರ್ಷ ಜಪಾನ್‌ನಲ್ಲಿ ಸುನಾಮಿ, ಭೂಕಂಪದ ಸಂದರ್ಭ ಫುಕೊಶಿಮಾ ಸ್ಥಾವರದಲ್ಲಾದ ಅವಘಡದಿಂದ ಜಗತ್ತಿನೆಲ್ಲೆಡೆ ಅಣು ಸ್ಥಾವರಗಳ ಸುರಕ್ಷತೆ ಬಗ್ಗೆ ಚರ್ಚೆ ಆರಂಭವಾಗಿದೆ. ದೇಶದಲ್ಲಿ 20 ಅಣುವಿದ್ಯುತ್ ಸ್ಥಾವರಗಳಿವೆ.

ವಿಶ್ವದಲ್ಲಿ 1400ಕ್ಕೂ ಹೆಚ್ಚು ಪರಮಾಣು ವಿದ್ಯುತ್ ಸ್ಥಾವರಗಳಿವೆ. ಆದರೆ ಇಲ್ಲಿ ಅವಘಡಗಳಾದ ನಿದರ್ಶನ ಕಡಿಮೆ. 3ಮೈಲ್ ದ್ವೀಪ, ಫುಕೊಶಿಮಾ ದುರಂತದಲ್ಲಿ ಅಣುವಿದ್ಯುತ್ ಸಮಸ್ಯೆ ಯಿಂದಾಗಿ ಜನರು ಸತ್ತ ನಿದರ್ಶನಗಳಿಲ್ಲ. ಚೆರ್ನೊಬಿಲ್‌ನಲ್ಲಿ ವಿಕಿರಣ ಪ್ರಭಾವದಿಂದ 50 ರಿಂದ 60 ಮಂದಿ ಮಡಿದಿರ ಬಹುದು. ಆದರೆ ಅಣು ತ್ಯಾಜ್ಯ ವಿಲೇವಾರಿ ಹೇಗೆ ಮಾಡಬಹುದು ಎಂಬುದು ಸವಾಲು. ಈ ನಿಟ್ಟಿನಲ್ಲಿ ಸಂಶೋಧನೆಗಳಾಗಬೇಕು ಎಂದು ಹೇಳಿದರು.

ಮಾನವ ಅಭಿವೃದ್ಧಿ ಸೂಚ್ಯಂಕಕ್ಕೆ ಮತ್ತು ತಲಾವಾರು ವಿದ್ಯುತ್ ಬಳಕೆಗೆ ನಿಕಟ ಸಂಬಂಧವಿದೆ. ವಿಶ್ವದಲ್ಲಿ ಸರಾಸರಿ ತಲಾವಾರು ವಿದ್ಯುತ್ ಬಳಕೆ 2500 ಕಿಲೋವ್ಯಾಟ್ ಇದ್ದರೆ, ಭಾರತದಲ್ಲಿ ಇದು 700 ಕಿಲೋವ್ಯಾಟ್. ಭಾರತದ ಶೇ. 40ರಷ್ಟು ಜನತೆಗೆ ಇನ್ನೂ ವಿದ್ಯುತ್ ಸಂಪರ್ಕ ದೊರೆತಿಲ್ಲ. ಈಗ ಸಂಪರ್ಕ ಪಡೆದಿರುವವರಲ್ಲಿ ಶೇ. 10ರಿಂದ 15ರಷ್ಟು ಜನರು ದಿನಕ್ಕೆ 4 ಗಂಟೆ ಮಾತ್ರ ಗುಣಮಟ್ಟದ ವಿದ್ಯುತ್ ಪಡೆಯು ತ್ತಿರುತ್ತಾರೆ ಎಂದು ಅವರು ವಿವರಿಸಿದರು.

ಮೇಧಾವಿ ವಿಜ್ಞಾನಿಗಳಾದ ಹೋಮಿ ಜಹಾಂಗೀರ್ ಬಾಬಾ, ವಿಕ್ರಮ್ ಸಾರಾಬಾಯಿ, ಶಾಂತಿಸ್ವರೂಪ ಭಟ್ನಾಗರ, ಪಿ.ಸಿ. ಮಹಾಲನೊಬಿಸ್,ಸಿ.ವಿ.ರಾಮನ್, ಜಗದೀಶಚಂದ್ರ ಬೋಸ್, ಸತ್ಯೇಂದ್ರನಾಥ ಬೋಸ್ ಅವರು ಕಳೆದ ಶತಮಾನದಲ್ಲಿ ಹಾಕಿಕೊಟ್ಟ ಭದ್ರ ಅಡಿಪಾಯದಿಂದ ದೇಶ ಇಂದು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಬಲಿಷ್ಟವಾಗಿದೆ. ಈ ಬುನಾದಿಯನ್ನು ಇನ್ನಷ್ಟು ಬಲಗೊಳಿಸ ಬೇಕಾಗಿದೆ.
 
ಇದಕ್ಕಾಗಿ ದೇಶವನ್ನು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಸಂಪೂರ್ಣ ಸ್ವಾವಲಂಬಿಯಾಗಿ ಮಾಡ ಬೇಕಾಗಿದೆ ಎಂದರು.ಇದಕ್ಕೆ ಮೊದಲು ಅಧ್ಯಕ್ಷ ಭಾಷಣ ಮಾಡಿದ ಎನ್‌ಐಟಿಕೆ ಅಧ್ಯಕ್ಷ ಸುಶೀಲ್ ಚಂದ್ರ ತ್ರಿಪಾಠಿ, ದೇಶದ ಅಭಿವೃದ್ಧಿಯಲ್ಲಿ ಇಂಧನದ್ದು ದೊಡ್ಡ ಪಾತ್ರವಿದೆ.

ಕಲ್ಲಿದ್ದಲು ಬಳಕೆಯನ್ನೇ ದೀರ್ಘಕಾಲ ನಂಬಿ ಕೊಂಡಿರಲು ಸಾಧ್ಯವಿಲ್ಲ. ಅದು ಮುಗಿದು ಹೋಗುವ ಸಂಪನ್ಮೂಲ. ಇಂಧನ ಕ್ಷೇತ್ರದ ಸ್ವಾವಲಂಬನೆಗೆ ಅಣುಶಕ್ತಿ ಬಳಕೆಗೆ ಒತ್ತುನೀಡಬೇಕಿದೆ. ಅಣು ಇಂಧನ ವಿದ್ಯುತ್ ಉತ್ಪಾದನೆಯಲ್ಲಿ ಮಹತ್ವದ ಮೂಲ ಎಂದು ಅಭಿಪ್ರಾಯಪಟ್ಟರು.ಎನ್‌ಐಟಿಕೆ ನಿರ್ದೇಶಕ ಪ್ರೊ.ಸಂದೀಪ್ ಸಂಚೇತಿ ಸ್ವಾಗತಿಸಿ ಪರಿಚಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.