ADVERTISEMENT

ಪರಿಸರ ಸೂಕ್ಷ್ಮ ವಲಯ ಸೃಷ್ಟಿಗೆ ಕವಲು ದಾರಿ

ಲೋಕೇಶ್ ಸುಬ್ರಹ್ಮಣ್ಯ
Published 19 ಆಗಸ್ಟ್ 2017, 7:39 IST
Last Updated 19 ಆಗಸ್ಟ್ 2017, 7:39 IST
ಕಲ್ಮಕಾರಿನಲ್ಲಿ ಪ್ರತಿಭಟನೆ ನಡೆಸಿದ ಜನ
ಕಲ್ಮಕಾರಿನಲ್ಲಿ ಪ್ರತಿಭಟನೆ ನಡೆಸಿದ ಜನ   

ಸುಬ್ರಹ್ಮಣ್ಯ: ಪರಿಸರ ಸೂಕ್ಷ್ಮ ವಲಯಕ್ಕೆ ಸುಳ್ಯ ತಾಲ್ಲೂಕಿನ ಎರಡು ಗ್ರಾಮಗಳ ಸೇರ್ಪಡೆಗೆ ಕೇಂದ್ರ ಸರ್ಕಾರ ಕರಡು ಮಸೂದೆ ಜಾರಿಗೊಳಿಸಿರುವುದು ಆ ಭಾಗದ ಕೃಷಿಕರಿಗೆ ನುಂಗಲಾರದ ತುತ್ತಾಗಿದೆ. ಹಿಂದೊಮ್ಮೆ ಡಾ. ಕಸ್ತೂರಿ ರಂಗನ್ ಜಾರಿಗೆ ಮುಂದಾಗಿದ್ದ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ ಇದೀಗ ಸೂಕ್ಷ್ಮ ವಲಯ ವಿಸ್ತರಿಸುವ ನೆಪದಲ್ಲಿ ಇಲ್ಲಿಯ ಕೃಷಿಕರಿಗೆ ಸಂಚಕಾರ ತಂದೊಡ್ಡುವ ಕೆಲಸ ನಡೆಸಿದೆ.

ಕೊಡಗು ವ್ಯಾಪ್ತಿಯಲ್ಲಿರುವ ವೈಲ್ಡ್‌ ಲೈಫ್‌ ವಿಸ್ತರಿಸುವ ಪ್ರಕ್ರಿಯೆಗೆ ಕಲ್ಮಕಾರು ಮತ್ತು ಬಾಳುಗೋಡು ಗ್ರಾಮಗಳು ಸೇರ್ಪಡೆಯಾಗುತ್ತಿದ್ದು, ಕೊಲ್ಲಮೊಗ್ರು ರೈತ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಹಮೀದ್ ಇಡ್ನೂರು ಅವರು ಈ ಕುರಿತು ಮಾಹಿತಿ ಸಂಗ್ರಹಿಸಿದ್ದಾರೆ.

ಪುಷ್ಪಗಿರಿ ವನ್ಯಧಾಮ, ಆನೆಕಾರಿಡಾರ್, ಗ್ರೇಟರ್ ತಲಕಾವೇರಿ ಬಳಿಕ ಡಾ.ಕಸ್ತೂರಿ ರಂಗನ್ ಇತ್ಯಾದಿ ಹೆಸರನಲ್ಲಿ ಯೋಜನೆಗಳು ಈ ಹಿಂದೆ ಈ ಭಾಗಕ್ಕೆ ತಟ್ಟಿದ್ದವು, ಕೃಷಿಕರ ವಿರೋಧದಿಂದ ತಣ್ಣಗಾಗಿದ್ದವು. ಬಳಿಕ ಇದೀಗ ವೈಲ್ಡ್‌ಲೈಪ್ ಪ್ರದೇಶ ವಿಸ್ತರಿಸುವ ಪ್ರಕ್ರಿಯೆಗೆ ಈ ಎರಡು ಗ್ರಾಮಗಳು ಬಲಿಯಾಗುತ್ತಿವೆ, ವಲಯಕ್ಕೆ ಗ್ರಾಮಗಳ ಸೇರ್ಪಡೆಯಿಂದ ಕೃಷಿಕರು ಆತಂಕಗೊಂಡಿದ್ದು, ಹೋರಾಟಕ್ಕೆ ಚಿಂತನೆ ನಡೆಸುತ್ತಿದ್ದಾರೆ.

ಪುಷ್ಪಗಿರಿ ವನ್ಯಧಾಮಕ್ಕೆ ಸುರಕ್ಷತೆ ತರುವ ದೃಷ್ಟಿಯಿಂದ ಈ ಯೋಜನೆ ಸಿದ್ಧವಾಗಿದ್ದು, ಅದರ ಸುತ್ತಲ ಕೆಲ ಪ್ರದೇಶಗಳನ್ನು ಪರಿಸರ ಸೂಕ್ಷ್ಮ ವಲಯ ವ್ಯಾಪ್ತಿಗೆ ಸೇರಿಸುವ ಯೋಜನೆ ಇದಾಗಿದೆ. ಕೇಂದ್ರದಿಂದ ಜೂನ್‌ 27ರಂದು ಈ ಸಂಬಂಧ ಅಧಿಸೂಚನೆ ಹೊರಬಿದ್ದಿದೆ.

ADVERTISEMENT

ಈ ಕುರಿತು ಮಾಸ್ಟರ್ ಪ್ಲಾನ್ ರೂಪಿಸುವ ಹೊಣೆ ರಾಜ್ಯ ಸರ್ಕಾರದ್ದಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಈಗಾಗಲೇ ಕಾರ್ಯೋನ್ಮುಖವಾಗಿರುವ ಕುರಿತು ಮಾಹಿತಿಗಳು ದೊರಕಿವೆ. ಎರಡು ವರ್ಷದೊಳಗೆ ಮಾಸ್ಟರ್ ಪ್ಲಾನ್ ರಚಿಸಬೇಕಿದೆ. ಯೋಜನೆ ಸಿದ್ಧಪಡಿಸುವಾಗ ಕೇಂದ್ರ-ರಾಜ್ಯ ಸರ್ಕಾರದ ಕಾನೂನು-ನಿಯಮಗಳ ಮೀರದಂತೆ ಎಚ್ಚರ ವಹಿಸಲು ಸೂಚಿಸಲಾಗಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.