ಮಂಗಳೂರು: ‘ಪರ್ಯಾಯ ನೆಲೆ ಕಲ್ಪಿಸದೆ ಸರ್ಕಾರಿ ಜಾಗ ಅತಿಕ್ರಮಿಸಿರುವ ದಲಿತರನ್ನು ಒಕ್ಕಲೆಬ್ಬಿಸಬೇಡಿ’ ಎಂದು ದಲಿತ ಮುಖಂಡರು ಜಿಲ್ಲಾಡಳಿತವನ್ನು ವಿನಂತಿಸಿದ್ದಾರೆ.
ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಬಾಲಕಾರ್ಮಿಕ ಅಧಿನಿಯಮ, ಜೀತ ಕಾರ್ಮಿಕ ಅಧಿನಿಯಮ, ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪ ಯೋಜನೆ ಕಾರ್ಯಕ್ರಮ ಅನುಷ್ಠಾನ ಬಗ್ಗೆ ಶುಕ್ರವಾರ ಹಮ್ಮಿಕೊಂಡಿದ್ದ ಉಸ್ತುವಾರಿ ಸಮಿತಿ ಸಭೆಯಲ್ಲಿ ಮಾತನಾಡಿದ ದಲಿತ ಸಂಘರ್ಷ ಸಮಿತಿ (ಭೀಮವಾದ) ಮುಖಂಡ, ಪಿ.ಕೇಶವ ‘ಸರ್ಕಾರಿ ಜಾಗ ಅತಿಕ್ರಮಿಸಿರುವವರನ್ನು ಒಕ್ಕಲೆಬ್ಬಿಸುವುದಕ್ಕೆ ಆಕ್ಷೇಪವಿಲ್ಲ. ಒಕ್ಕಲೆಬ್ಬಿಸುವುದಕ್ಕೆ ಆಸಕ್ತಿ ವಹಿಸುವ ಜಿಲ್ಲಾಡಳಿತ ಡಿಸಿ ಮನ್ನಾ ಜಾಗ ಅತಿಕ್ರಮಣ ತೆರವುಗೊಳಿಸಿ ಅದನ್ನು ಪರಿಶಿಷ್ಟರಿಗೆ ಒದಗಿಸುವ ಬಗ್ಗೆ ಮೌನ ವಹಿಸಿದೆ’ ಎಂದು ಆರೋಪಿಸಿದರು.
ಇದಕ್ಕೆ ಉತ್ತರಿಸಿದ ಸಹಾಯಕ ಆಯುಕ್ತ ಪ್ರಭುಲಿಂಗ ಕವಳಿಕಟ್ಟಿ, ‘ದಲಿತರಿಗಾಗಿ ಕಾದಿಸಿದ ಡಿಸಿ ಮನ್ನಾ ಜಾಗ ಅತಿಕ್ರಮಣ ಬಗ್ಗೆ ಈಗಾಗಲೇ ಮಾಹಿತಿ ಕಲೆ ಹಾಕಿದ್ದೇವೆ. ಈ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು. ಸರ್ಕಾರಿ ಜಾಗ ಅತಿಕ್ರಮಣ ತೆರವಿನ ವೇಳೆ ಎಲ್ಲರಿಗೂ ಒಂದೇ ಸೂತ್ರ ಅನುಸರಿಸಬೇಕಾಗುತ್ತದೆ’ ಎಂದರು.ಉರ್ವ ಸ್ಟೋರ್, ಕೋಡಿಕಲ್ ಹಾಗೂ ದಡ್ಡಾಲ್‌ಕೋಡಿ, ದೇರೇಬೈಲ್ ಪ್ರದೇಶದಲ್ಲೂ 205 ಎಕರೆಗೂ ಅಧಿಕ ಡಿಸಿ ಮನ್ನಾ ಜಾಗವಿದ್ದು, ಬಹುತೇಕ ಜಾಗ ಅತಿಕ್ರಮಣಗೊಂಡಿದೆ’ ಎಂದು ವಿಶುಕುಮಾರ್ ಆರೋಪಿಸಿದರು.
‘ಅಂಬೇಡ್ಕರ್ ನಿಗಮದ ಸವಲತ್ತು ಸಮರ್ಪಕವಾಗಿ ದೊರಕುತ್ತಿಲ್ಲ. ಅಧಿಕಾರಿಗಳಲ್ಲಿ ಈ ಬಗ್ಗೆ ವಿಚಾರಿಸಿದಲ್ಲಿ ಅನುದಾನ ಬಂದಿಲ್ಲ ಎಂಬ ಸಿದ್ಧ ಉತ್ತರ ದೊರಕುತ್ತದೆ. ಹಾಗಾದರೆ ದಲಿತರ ಅಭಿವೃದ್ಧಿಯ ಹಣ ಎಲ್ಲಿಗೆ ಹೋಯಿತು?’ ಎಂದು ದಲಿತ ಮುಖಂಡ ಸುರೇಂದ್ರ ಪ್ರಶ್ನಿಸಿದರು.ಈ ಬಗ್ಗೆ ಸ್ಪಷ್ಟೀಕರಣ ನೀಡಲು ನಿಗಮದ ಅಧಿಕಾರಿಯೂ ಹಾಜರಿರಲಿಲ್ಲ. ಅಧಿಕಾರಿಗೆ ನೋಟಿಸ್ ಜಾರಿಗೊಳಿಸುವಂತೆ ಸಹಾಯಕ ಆಯುಕ್ತರು ಆದೇಶಿಸಿದರು.
ಪಾಲಿಕೆ ವ್ಯಾಪ್ತಿಯಲ್ಲಿ ಕುಂಜತ್ತಬೈಲ್‌ನಲ್ಲಿ 22ಕ್ಕೂ ಅಧಿಕ ದಲಿತ ಕುಟುಂಬಗಳು 10ಕ್ಕೂ ಹೆಚ್ಚು ವರ್ಷದಿಂದ ವಾಸವಾಗಿವೆ. ಅವರಿಗೆ ಹಕ್ಕುಪತ್ರ ನೀಡಲು ಅವಕಾಶವಿಲ್ಲ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದು, ಆ ಕುಟುಂಬಗಳು ತ್ರಿಶಂಕು ಸ್ಥಿತಿಯಲ್ಲಿವೆ’ ಎಂದು ಕೇಶವ ತಿಳಿಸಿದರು.ಅಕ್ರಮ-ಸಕ್ರಮ ಕಾನೂನು ಪಾಲಿಕೆ ವ್ಯಾಪ್ತಿಗೆ ಅನ್ವಯವಾಗುವುದಿಲ್ಲ. ಆದರೆ ಆ ಕುಟುಂಬಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಅವಕಾಶವಿದೆ. ಈ ಬಗ್ಗೆ ವಿವರ ಒದಗಿಸುವಂತೆ ಸಹಾಯಕ ಆಯುಕ್ತರು ಸೂಚಿಸಿದರು.
ವಿದ್ಯಾರ್ಥಿವೇತನವನ್ನು ಪ್ರಾಂಶುಪಾಲರ ಮೂಲಕ ನೀಡದೆ, ದಲಿತ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಬೇಕು ಎಂದು ಕೆಲವರು ಒತ್ತಾಯಿಸಿದರು. ಈ ಪ್ರಸ್ತಾಪವನ್ನು ಕೆಲವು ದಲಿತ ಮುಖಂಡರು ವಿರೋಧಿಸಿದರು. ‘ಪಾಲಿಕೆ ವ್ಯಾಪ್ತಿಯಲ್ಲಿ 300 ಅಧಿಕ ಶಿಕ್ಷಣ ಸಂಸ್ಥೆಗಳಿದ್ದು, ಸಾವಿರಾರು ದಲಿತ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಅಷ್ಟೂ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡುವುದು ಕಷ್ಟಸಾಧ್ಯ’ ಎಂದು ಪಾಲಿಕೆ ಜಂಟಿ ಆಯುಕ್ತರಾದ ವಿಜಯಾ ಕುಮಾರಿ ಶೆಣೈ ತಿಳಿಸಿದರು.ಪ್ರಭಾರ ತಹಸೀಲ್ದಾರ್ ರೋಹಿಣಿ ಸಿಂಧೂರಿ ದಾಸರಿ, ಎಸಿಪಿ ಪುಟ್ಟಮಾದಯ್ಯ ಹಾಗೂ ಸಮಾಜ ಕಲ್ಯಾಣಾಧಿಕಾರಿ ರೆಡ್ಡಿ ನಾಯಕ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.