ADVERTISEMENT

ಪುಣಚ: ಮದ್ಯದಂಗಡಿ ಆರಂಭಕ್ಕೆ ವಿರೋಧ

​ಪ್ರಜಾವಾಣಿ ವಾರ್ತೆ
Published 20 ಜನವರಿ 2011, 8:55 IST
Last Updated 20 ಜನವರಿ 2011, 8:55 IST

ಪುಣಚ (ವಿಟ್ಲ): ಪುಣಚ ಗ್ರಾಮದ ಪರಿಯಾಲ್ತಡ್ಕ ಎಂಬಲ್ಲಿ ಸರ್ಕಾರಿ ಸ್ವಾಮ್ಯದ ಎಂಎಸ್‌ಐಎಲ್ ಮದ್ಯ ಮಾರಾಟ ಮಳಿಗೆಯನ್ನು ತೆರೆಯುವ ಪ್ರಯತ್ನವನ್ನು ಕೈಬಿಡಬೇಕೆಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಒತ್ತಾಯಿಸಿದೆ.ಯೋಜನೆಯ ವಿಟ್ಲ ವಲಯ ಕಚೇರಿಯಲ್ಲಿ ಬುಧವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ವಲಯ ಮೇಲ್ವಿಚಾರಕ ವಿಠಲ ಪೂಜಾರಿ ಮಾತನಾಡಿದರು.

ಬಂಟ್ವಾಳ ತಾಲ್ಲೂಕಿನಲ್ಲಿ ಎರಡನೆಯ ದೊಡ್ಡ ಗ್ರಾಮವಾಗಿ ಗುರುತಿಸಲ್ಪಟ್ಟ ಪುಣಚ ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕವಾಗಿ ಬೆಳೆಯುತ್ತಿರುವ ಗ್ರಾಮವಾಗಿದ್ದು, ಮದ್ಯ ಮರಾಟ ಮಳಿಗೆ ತೆರೆಯಲು ಇಲ್ಲಿ ಪರವಾನಗಿ ನೀಡಬಾರದೆಂದು ಯೋಜನೆಯ ಸ್ತ್ರೀಶಕ್ತಿ ಗುಂಪಿನ ಸಹಸ್ರಾರು ಮಹಿಳೆಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. 

 ಮದ್ಯದಂಗಡಿ ತೆರೆಯಲು ರಾಜಕೀಯ ಪ್ರೇರಿತ ಕೆಲವೆ ವ್ಯಕ್ತಿಗಳು ತೆರೆಮರೆಯಲ್ಲಿ ಭಾರೀ ಪ್ರಯತ್ನ ನಡೆಸುತ್ತಿದ್ದು, ಅವರ ಪ್ರತಿಷ್ಠೆಯನ್ನು ಉಳಿಸಿಕೊಳ್ಳಲು ಮುನ್ನಡೆದರೆ, ಸ್ಥಳೀಯ ಸಾಮಾಜಿಕ ಸಂಘ, ಸಂಸ್ಥೆಗಳೊಂದಿಗೆ ಕಾನೂನೂಬದ್ಧವಾಗಿ, ಅಹಿಂಸಾರೂಪದ ಹೋರಾಟನಡೆಸಬೆಕಾದೀತು ಎಂದು ಅವರು ಎಚ್ಚರಿಕೆ ನೀಡಿದರು.

 ಸಾರ್ವಜನಿಕ ಹಿತದೃಷ್ಟಿಯಿಂದ ಇದಕ್ಕೆ ಸಂಬಂಧಪಟ್ಟ ಇಲಾಖೆಯೂ ಸಹ ಸ್ಪಂದಿಸಬೇಕಾಗಿದೆ. ಒಬ್ಬಿಬ್ಬರ ಹಿತವನ್ನು ಕಾಯಲು, ಅವರಿಗೆ ಲಾಭ ತರಿಸುವ ಉದ್ದೇಶದಿಂದ ಊರಿನ ಜನರ ಕ್ಷೇಮ, ಅಭಿವೃದ್ಧಿ, ಶಾಂತಿಯನ್ನು ಕಸಿದುಕೊಳ್ಳುವ ಪ್ರಕ್ರಿಯೆಗೆ ಮುಂದಾಗಬಾರದು. ಗ್ರಾಮದ ಪ್ರತಿಯೊಂದು ಅಭಿವೃದ್ಧಿ, ಬೆಳವಣಿಗೆಯ ಕಾರ್ಯಕ್ರಮಗಳಿಗೆ ಸಂಪೂರ್ಣ ಬೆಂಬಲ ನೀಡುತ್ತೆವೆ ಎಂದು ಭರವಸೆ ನೀಡಿದರು.

ಗ್ರಾಮ ಹಿತರಕ್ಷಣಾ ವೇದಿಕೆ ವಿರೋಧ:   ಪುಣಚ ಗ್ರಾಮದ ಪರಿಯಾಲ್ತಡ್ಕದಲ್ಲಿ ಮದ್ಯದ ಅಂಗಡಿ ಆರಂಭಕ್ಕೆ  ಗ್ರಾಮ ಹಿತ ರಕ್ಷಣಾ ವೇದಿಕೆ ಅವಕಾಶ ನೀಡುವುದಿಲ್ಲ, ಇದರ ವಿರುದ್ಧ ಉಗ್ರ ಹೋರಾಟಕ್ಕೂ ಸಿದ್ಧ ಎಂದು ಎಚ್ಚರಿಸಿದೆ. ಇದರ ಜತೆ ಸ್ಥಳೀಯ ಯುವಕ ಮಂಡಲವೂ ವಿರೋಧ ವ್ಯಕ್ತಪಡಿಸಿದೆ.

ಪತ್ರಿಕಾಗೋಷ್ಟಿಯಲ್ಲಿ ಯೋಜನೆಯ ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಕೇಂದ್ರ ಒಕ್ಕೂಟ ಅಧ್ಯಕ್ಷ ತನಿಯಪ್ಪ ಮೂಲ್ಯ, ಗ್ರಾಮ ಹಿತರಕ್ಷಣಾ ವೇದಿಕೆಯ ಗೌರವಾಧ್ಯಕ್ಷ  ಪಿ.ಜಯಂತ ನಾಯಕ್, ಪುಣಚ ಯುವಕ ಮಂಡಲದ ಸಂಘಟನಾ ಕಾರ್ಯದರ್ಶಿ ಬಿ. ರಾಜೇಂದ್ರ ರೈ, ತಾಲ್ಲೂಕು ಜನ ಜಾಗೃತಿ ಸಮಿತಿ ಸಲಹೆಗಾರ ನಟೇಶ್ ವಿಟ್ಲ, ಸದಸ್ಯ ಬಾಲಕೃಷ್ಣ ಕಾರಂತ, ಪುಣಚ ಒಕ್ಕೂಟ ಅಧ್ಯಕ್ಷ ಚೋಮಣ್ಣ ನಾಯ್ಕ, ಅಜ್ಜಿನಡ್ಕ ಒಕ್ಕೂಟ ಅಧ್ಯಕ್ಷ ಓ.ಸುರೇಶ್ ಗೌಡ, ಒಕ್ಕೆತ್ತೂರು ಒಕ್ಕೂಟ ಅಧ್ಯಕ್ಷ ಪ್ರಕಾಶ್, ವಿಟ್ಲ ಒಕ್ಕೂಟದ ಮಾಜಿ ಅಧ್ಯಕ್ಷ ರಮೇಶ್ ರೈ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.