ADVERTISEMENT

ಪುತ್ತೂರು ಎಎಸ್‌ಪಿ ಕೊನೆಗೂ ಎತ್ತಂಗಡಿ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2011, 8:30 IST
Last Updated 11 ಫೆಬ್ರುವರಿ 2011, 8:30 IST

ಮಂಗಳೂರು: ಜಿಲ್ಲೆಯ ಬಂಟ್ವಾಳ ನಗರಾಭಿವೃದ್ಧಿ ಪ್ರಾಧಿಕಾರದ (ಬುಡಾ) ಅಧ್ಯಕ್ಷ ಗೋವಿಂದ ಪ್ರಭು ಅವರ ಮೇಲೆ ಹಲ್ಲೆ ನಡೆಸಿದ ಆರೋಪಕ್ಕೆ ಒಳಗಾಗಿ ಆಡಳಿತಾರೂಢ ಬಿಜೆಪಿ ಮುಖಂಡರ ಕೆಂಗಣ್ಣಿಗೆ ಒಳಗಾಗಿದ್ದ ಐಪಿಎಸ್ ಅಧಿಕಾರಿ ಪುತ್ತೂರು ಎಎಸ್‌ಪಿ ಅಮಿತ್ ಸಿಂಗ್ ಅವರನ್ನು ಯಾವುದೇ ಹುದ್ದೆ ತೋರಿಸದೆ ಎತ್ತಂಗಡಿ ಮಾಡಿದ ‘ಶಿಕ್ಷೆ’ ನೀಡಲಾಗಿದೆ.

ಎಸ್‌ಪಿ ಹುದ್ದೆಯ ನಿರೀಕ್ಷೆಯಲ್ಲಿದ್ದ ಅಮಿತ್ ಸಿಂಗ್ ಅವರಿಗೆ ಸೀನಿಯರ್ ಟೈಂ ಸ್ಕೇಲ್‌ಗೆ ಬಡ್ತಿ ನೀಡಲಾಗಿದೆಯಾದರೂ ಯಾವುದೇ ಹುದ್ದೆ ತೋರಿಸದೆ ಪೊಲೀಸ್ ಮುಖ್ಯಸ್ಥರ ಕಚೇರಿಗೆ ತೆರಳಿ ಮುಂದಿನ ಸೂಚನೆ ಪಾಲಿಸುವಂತೆ ತಿಳಿಸಲಾಗಿದೆ.

‘ಬಿಜೆಪಿ ಮುಖಂಡರ ಮೇಲೆಯೇ ಈ ರೀತಿ ಹಲ್ಲೆ ನಡೆಸುವ ಈ ಅಧಿಕಾರಿ ಇನ್ನು ಸಾಮಾನ್ಯ ಕಾರ್ಯಕರ್ತರೊಂದಿಗೆ ಹೇಗೆ ನಡೆದುಕೊಂಡಾರು’ ಎಂದು ಗುಡುಗಿದ ಮುಖಂಡರು ಘಟನೆ ನಡೆದ ದಿನವೇ ರಾತ್ರಿ ಬಂಟ್ವಾಳ ಠಾಣೆ ಹಾಗೂ ಅಮಿತ್ ಸಿಂಗ್ ಅವರ ಪುತ್ತೂರು ನಿವಾಸದ ಮುಂದೆ ಪ್ರತಿಭಟನೆ ನಡೆಸಿ ಎತ್ತಂಗಡಿ ಮಾಡಿಸುವ ಸೂಚನೆ ನೀಡಿದ್ದರು.

ಸೇವೆ ತೃಪ್ತಿ ತಂದಿದೆ...
ಈ ಸಂಬಂಧ ಗುರುವಾರ ರಾತ್ರಿ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅಮಿತ್ ಸಿಂಗ್, ‘ಪುತ್ತೂರಿನಲ್ಲಿ ಕಳೆದ ಒಂದು ವರ್ಷದ ಅವಧಿಯ ಸೇವೆ ತೃಪ್ತಿ ತಂದಿದೆ. ನನ್ನ ಈ ಅಕಾಲಿಕ ವರ್ಗಾವಣೆಗೆ ರಾಜಕೀಯ ಒತ್ತಡ ಕಾರಣವಾಗಿದೆಯೋ ಏನೋ ತಿಳಿದಿಲ್ಲ, ಆದರೆ ನನ್ನ ಕರ್ತವ್ಯವನ್ನು ಎಲ್ಲಿ ಹೋದರೂ ಮುಂದುವರೆಸುತ್ತೇನೆ. ಎಂತಹ ಸಂದರ್ಭದಲ್ಲೂ ಅಧಿಕಾರಿಗಳು ಅಧೀರರಾಗಬಾರದು’ ಎಂದರು.ನನಗೀಗ ಮುಂದಿನ ಕರ್ತವ್ಯದ ಸ್ಥಳ ತೋರಿಸಿಲ್ಲವಾದರೂ ಒಂದು ವಾರದೊಳಗೆ ಆದೇಶ ಕೊಡಬಹುದು ಎಂಬ ನಿರೀಕ್ಷೆಯಲ್ಲಿರುವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.