ADVERTISEMENT

ಪೂಜಾರಿ ಆಶೀರ್ವಾದಕ್ಕೆ ಮುಗಿಬಿದ್ದ ಅಭ್ಯರ್ಥಿಗಳು!

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2018, 10:29 IST
Last Updated 21 ಏಪ್ರಿಲ್ 2018, 10:29 IST
ಜನಾರ್ದನ ಪೂಜಾರಿ ಅವರ ಬಂಟ್ವಾಳದ ಮನೆಯಲ್ಲಿ ಶುಕ್ರವಾರ ಪೂಜಾರಿ ಕಾಲಿಗೆರಗಿದ ಮಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಜೆ.ಆರ್‌. ಲೋಬೊ.
ಜನಾರ್ದನ ಪೂಜಾರಿ ಅವರ ಬಂಟ್ವಾಳದ ಮನೆಯಲ್ಲಿ ಶುಕ್ರವಾರ ಪೂಜಾರಿ ಕಾಲಿಗೆರಗಿದ ಮಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಜೆ.ಆರ್‌. ಲೋಬೊ.   

ಮಂಗಳೂರು: ಜಿಲ್ಲೆಯ ಹಿರಿಯ ರಾಜಕಾರಣಿ, ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿಯವರ ಆಶೀರ್ವಾದಕ್ಕೆ ಈಗ ಬೇಡಿಕೆ ಹೆಚ್ಚಿದೆ. ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸುತ್ತಿರುವ ಶಾಸಕರು ಮತ್ತು ಶಾಸಕ ಸ್ಥಾನದ ಆಕಾಂಕ್ಷಿಗಳು ಪೂಜಾರಿಯವರ ಕಾಲಿಗೆ ಬಿದ್ದು ಆಶೀರ್ವಾದ ಪಡೆಯಲು ಮುಗಿಬೀಳುತ್ತಿದ್ದಾರೆ.

ರಾಜಕೀಯದಲ್ಲಿ ಪೂಜಾರಿಯವರ ಶಿಷ್ಯ ಎಂದೇ ಗುರುತಿಸಿಕೊಳ್ಳುತ್ತಿರುವ ಬಿ.ರಮಾನಾಥ ರೈ ಬುಧವಾರ ಅವರ ಮನೆಗೆ ಹೋಗಿ ಆಶೀರ್ವಾದ ಪಡೆದುಕೊಂಡು ಬಂದಿದ್ದರು. ಮುನಿಸಿಕೊಂಡಿದ್ದ ಗುರುವಿನ ಜೊತೆ ಸಂಬಂಧ ಸುಧಾರಣೆಗೆ ಯತ್ನಿಸಿದ್ದರು. ಅವರ ಬೆನ್ನಲ್ಲೇ ಕಾಂಗ್ರೆಸ್‌ನ ಹಲವು ಶಾಸಕರು ಆಶೀರ್ವಾದ ಪಡೆದು ಬಂದಿದ್ದಾರೆ.

ಉಡುಪಿ ಜಿಲ್ಲೆ ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಶಾಸಕ ವಿನಯಕುಮಾರ್ ಸೊರಕೆ ಗುರುವಾರ ಪೂಜಾರಿಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ. ಅವರು ಹಿರಿಯ ನಾಯಕನ ಕಾಲಿಗೆರಗಿ ನಮಸ್ಕಾರ ಮಾಡಿದ್ದಾರೆ. ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಶಾಸಕ ಜೆ.ಆರ್‌.ಲೋಬೊ ಶುಕ್ರವಾರ ಬಂಟ್ವಾಳಕ್ಕೆ ತೆರಳಿ ಪೂಜಾರಿಯವರ ಆಶೀರ್ವಾದ ಪಡೆದಿದ್ದಾರೆ. ಅವರು ಕೂಡ ಕಾಲಿಗೆ ನಮಸ್ಕರಿಸಿದ್ದಾರೆ.

ADVERTISEMENT

ಮಂಗಳೂರು ಉತ್ತರ ಕ್ಷೇತ್ರದ ಅಭ್ಯರ್ಥಿ ಮೊಹಿಯುದ್ದೀನ್‌ ಬಾವಾ ಸಹ ಪೂಜಾರಿ ಮನೆಗೆ ತೆರಳಿ ಆಶೀರ್ವಾದ ಪಡೆದರು.

ಪೂಜಾರಿಯವರ ಆಶೀರ್ವಾದ ಪಡೆದವರಲ್ಲಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಳಷ್ಟೇ ಇಲ್ಲ. ಇತ್ತೀಚೆಗೆ ಕಾಂಗ್ರೆಸ್‌ ತೊರೆದು ಜೆಡಿಎಸ್‌ ಸೇರಿ, ಮಂಗಳೂರು (ಉಳ್ಳಾಲ) ವಿಧಾನಸಭಾ ಕ್ಷೇತ್ರದಲ್ಲಿ ಆ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಲು ಪ್ರಯತ್ನಿಸುತ್ತಿರುವ ಮಂಗಳೂರಿನ ಮಾಜಿ ಮೇಯರ್‌ ಕೆ.ಅಶ್ರಫ್‌ ಕೂಡ ಸೇರಿದ್ದಾರೆ. ಅವರು ಶುಕ್ರವಾರ ಪೂಜಾರಿಯವರನ್ನು ಭೇಟಿಮಾಡಿ ಆಶೀರ್ವಾದ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.