ADVERTISEMENT

ಪೆಟ್ರೋಲಿಯಂ ಉತ್ಪನ್ನ ಬೆಲೆ ಏರಿಕೆ ವಿರೋಧಿಸಿ ಕಾರ್ಮಿಕ ಸಂಘಟನೆಗಳಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 24 ಜೂನ್ 2011, 10:20 IST
Last Updated 24 ಜೂನ್ 2011, 10:20 IST
ಪೆಟ್ರೋಲಿಯಂ ಉತ್ಪನ್ನ ಬೆಲೆ ಏರಿಕೆ ವಿರೋಧಿಸಿ ಕಾರ್ಮಿಕ ಸಂಘಟನೆಗಳಿಂದ ಪ್ರತಿಭಟನೆ
ಪೆಟ್ರೋಲಿಯಂ ಉತ್ಪನ್ನ ಬೆಲೆ ಏರಿಕೆ ವಿರೋಧಿಸಿ ಕಾರ್ಮಿಕ ಸಂಘಟನೆಗಳಿಂದ ಪ್ರತಿಭಟನೆ   

 ಮಂಗಳೂರು/ಉಡುಪಿ: ಪೆಟ್ರೋಲಿಯಂ ಬೆಲೆ ಏರಿಕೆಗೆ ಕಾರಣವಾಗಿರುವ ಕೇಂದ್ರ ಸರ್ಕಾರದ ಆರ್ಥಿಕ ನೀತಿಯನ್ನು ಖಂಡಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು) ಆಯೋಜಿಸಿದ್ದ ರಾಷ್ಟ್ರವ್ಯಾಪಿ ಪ್ರತಿಭಟನೆ ಬೆಂಬಲಿಸಿ ಗುರುವಾರ ಸಮಿತಿಯ ವತಿಯಿಂದ  ಮಂಗಳೂರು ಮತ್ತು ಉಡುಪಿ ಯಲ್ಲೂ ಪ್ರತಿಭಟನೆ ನಡೆಯಿತು.

`ಬಂಡವಾಳಶಾಹಿ ಕಪಿಮುಷ್ಠಿ~

ಮಂಗಳೂರು: ಕೇಂದ್ರ ಮತ್ತು ರಾಜ್ಯ ಸರ್ಕಾರ ಬಂಡವಾಳಶಾಹಿಗಳ ಕಪಿಮುಷ್ಠಿಯಲ್ಲಿ ಇವೆ ಎಂದು ಎಚ್‌ಎಂಎಸ್ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ರಫಿ ದೂರಿದರು. ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆ ವಿರೋಧಿಸಿ ಸಿಐಟಿಯು ಸೇರಿದಂತೆ ಹಲವು ಸಂಘಟನೆಗಳ ಆಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ನಡೆದ ಪ್ರತಿಭಟನಾ ಪ್ರದರ್ಶನದಲ್ಲಿ ಅವರು ಮಾತನಾಡಿದರು.

ಕಳೆದ ಒಂಬತ್ತು ತಿಂಗಳಿನಲ್ಲಿ ಜಿಲ್ಲೆಯಲ್ಲಿ ಒಂದೇ ಒಂದು ಪಡಿತರ ಚೀಟಿ ವಿತರಣೆ ಮಾಡಿಲ್ಲ. ಜಿಲ್ಲಾಧಿಕಾರಿ ಅವರಿಗೂ ಮನವಿ ಸಲ್ಲಿಸಿದರೂ ಪ್ರಯೋಜನ ಆಗಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಸಿಪಿಎಂ ಮುಖಂಡ ಬಿ.ಮಾಧವ ಮಾತನಾಡಿ, ಸರ್ಕಾರ ಪೆಟ್ರೋಲಿಯಂ ಬೆಲೆ ಏರಿಕೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು. ಪೆಟ್ರೋಲ್ ಬೆಲೆಯಲ್ಲಿ ಶೇ 56ರಷ್ಟು ತೆರಿಗೆ ಇರುತ್ತದೆ.

ನಿಜವಾದ ಬೆಲೆ ಶೇ 44ರಷ್ಟು. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲಗಳ ಬೆಲೆ ಏರಿಕೆ ಆದಾಗ ತೆರಿಗೆ ಏಕೆ ಏರಿಸುತ್ತೀರಿ ಎಂದು ಪ್ರಶ್ನಿಸಿದರು. ಎಐಟಿಯುಸಿ ಜಿಲ್ಲಾ ಕಾರ್ಯದರ್ಶಿ ಸೀತಾರಾಮ ಬೇರಿಂಜೆ ಮಾತನಾಡಿ, ಕಾರ್ಮಿಕರ ವೇತನ ಏರಿಕೆ, ಸವಲತ್ತು ಪರಿಷ್ಕರಣೆಗೆ ರಾಜ್ಯ ಸರ್ಕಾರ ವರ್ಷಾನುಗಟ್ಟಲೆ ಸಮಯ ವ್ಯಯ ಮಾಡುತ್ತದೆ. ಆದರೆ ವಿರೋಧ ಪಕ್ಷಗಳ ಅನುಪಸ್ಥಿತಿಯಲ್ಲಿ ನಿಮಿಷದೊಳಗೆ ಶಾಸಕರ ವೇತನ ಪರಿಷ್ಕರಣೆಗೆ ಒಪ್ಪಿಗೆ ನೀಡಲಾಗಿದೆ. ಇಂತಹ ತಾರತಮ್ಯ ನಿಲ್ಲಬೇಕು ಎಂದು ಆಗ್ರಹಿಸಿದರು.

ಬಿಎಂಎಸ್ ಜಿಲ್ಲಾ ಘಟಕದ ಅಧ್ಯಕ್ಷ ವಿಶ್ವನಾಥ ಶೆಟ್ಟಿ ಮಾತನಾಡಿ, 10 ವರ್ಷದಿಂದ ರಾಜ್ಯ ಸರ್ಕಾರ ಕಾರ್ಮಿಕ ವೇತನ ಪರಿಷ್ಕರಿಸಿಲ್ಲ. ಅಗತ್ಯ ವಸ್ತುಗಳ ಬೆಲೆ ಗಗನಮುಖಿಯಾಗುತ್ತಿದೆ. ಹೀಗಾದರೆ ಕಾರ್ಮಿಕರು ಹಾಗೂ ಜನಸಾಮಾನ್ಯರು ಬದುಕುವುದು ಹೇಗೆ ಎಂದು ಪ್ರಶ್ನಿಸಿದರು.

ಬಿಎಂಎಸ್ ನೇತೃತ್ವದಲ್ಲಿ ನವೆಂಬರ್ 23ರಂದು ಪಾರ್ಲಿಮೆಂಟ್ ಚಲೊ ಹಮ್ಮಿಕೊಂಡಿದ್ದು, ದೇಶಾದ್ಯಂತ ಲಕ್ಷಕ್ಕೂ ಅಧಿಕ ಮಂದಿ ಪಾಲ್ಗೊಳ್ಳುವರು ಎಂದು ಅವರು ಮಾಹಿತಿ ನೀಡಿದರು.

ಡಿವೈಎಫ್‌ಐ ಜಿಲ್ಲಾ ಘಟಕದ ಅಧ್ಯಕ್ಷ ಮುನೀರ್ ಕಾಟಿಪಳ್ಳ, ಸುನೀಲ್ ಕುಮಾರ್ ಬಜಾಲ್, ವಸಂತ ಆಚಾರಿ ಮತ್ತಿತರರು ಇದ್ದರು. ನೂರಾರು ಪ್ರತಿಭಟನಾಕಾರರು ಕೇಂದ್ರದ ವಿರುದ್ಧ ಘೋಷಣೆ ಕೂಗಿದರು.
ಭಾರತೀಯ ಮಜ್ದೂರ್ ಸಂಘ, ಐಎನ್‌ಟಿಯುಸಿ, ಎಐಟಿಯುಸಿ, ಎಚ್‌ಎಂಎಸ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದವು.

`ಕಾರ್ಮಿಕ ವರ್ಗಕ್ಕೆ ಸಂಕಷ್ಟ~
ಉಡುಪಿ: ನಗರದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಿಂದ ತಾಲ್ಲೂಕು ಕಚೇರಿಯವರೆಗೆ ಮೆರವಣಿಗೆಯಲ್ಲಿ ಸಾಗಿದ ಪ್ರತಿಭಟನಾಕಾರರು ತಹಸೀಲ್ದಾರರ ಮೂಲಕ ಪ್ರಧಾನಿಗೆ ಮನವಿ ಸಲ್ಲಿಸಿದರು. ಸಮಿತಿಯ ನೂರಾರು ಸದಸ್ಯರು ಬೆಲೆ ನಿಯಂತ್ರಿಸುವಂತೆ ಆಗ್ರಹಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಜೆಸಿಟಿಯು ಜಿಲ್ಲಾ ಸಂಚಾಲಕ ಅದಮಾರು ಶ್ರೀಪತಿ ಆಚಾರ್ಯ ಮಾತನಾಡಿ, ` ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಬೆಲೆ ಏರಿಕೆ ನೀತಿಯಿಂದಾಗಿ ಜನತೆ ಹಾಗೂ ಕಾರ್ಮಿಕ ವರ್ಗ ಸಂಕಷ್ಟಕ್ಕೀಡಾಗುತ್ತಿದೆ. ಕಚ್ಚಾತೈಲ ಬೆಲೆಯೇರಿಕೆ ನೆಪವೊಡ್ಡಿ ಕೇಂದ್ರವು ಈಗಾಗಲೇ ಪ್ರತಿ ಲೀಟರ್ ಪೆಟ್ರೋಲ್ ಬೆಲೆಯನ್ನು 5 ರೂಪಾಯಿ ಏರಿಸಿದೆ.

ಪೆಟ್ರೋಲಿಯಂ ಉತ್ಪನ್ನಗಳ ಬೆಲೆಗಳ ಮೇಲಿನ ಸರ್ಕಾರದ ನಿಯಂತ್ರಣವನ್ನು ರದ್ದುಪಡಿಸಲಾದ ಮೇಲೆ ಈ ಒಂದು ವರ್ಷದಲ್ಲಿ ಒಂಭತ್ತು ಸಲ ಬೆಲೆ ಏರಿಕೆ ಮಾಡಲಾಗಿದೆ.  ಕೇಂದ್ರ ಸರ್ಕಾರ ಡೀಸೆಲ್, ಸೀಮೆಎಣ್ಣೆ ಹಾಗೂ ಅಡುಗೆ ಅನಿಲ ದರವನ್ನೂ ಏರಿಸುವ ಮುನ್ಸೂಚನೆ ನೀಡಿದೆ~ ಎಂದರು.

`ದೇಶದಲ್ಲಿ ಲಭ್ಯವಿರುವ ತೈಲ ಮತ್ತು ನೈಸರ್ಗಿಕ ಅನಿಲಗಳ ನಿಕ್ಷೇಪವನ್ನು ಸಂಶೋಧಿಸಿ ಅವುಗಳನ್ನು ತಾನೇ ನಿರ್ವಹಿಸುವ ಮೂಲಕ ವಿದೇಶಿ ತೈಲದ ಮೇಲಿನ ಅವಲಂಬನೆಯನ್ನು ಕಡಿಮೆಗೊಳಿಸಬೇಕಾಗಿದೆ. ಕೇಂದ್ರ ಸರ್ಕಾರ ಈ ಕೆಲಸವನ್ನು ಖಾಸಗಿ ಗುತ್ತಿಗೆದಾರ ಬಂಡವಾಳಗಾರರು ಮತ್ತು ವಿದೇಶಿ ಕಂಪೆನಿಗಳ ಕೈಗೆ ಒಪ್ಪಿಸಿ ಅವುಗಳು ನಮ್ಮದೇಶದ ನೈಸರ್ಗಿಕ ಸಂಪತ್ತನ್ನು ಕೊಳ್ಳೆಹೊಡೆದು ಲಾಭಗಳಿಸಲು ಅವಕಾಶ ಮಾಡಿಕೊಟ್ಟಿದೆ~ ಎಂದು ಅವರು ಆರೋಪಿಸಿದರು.

ಸಿಐಟಿಯು ಜಿಲ್ಲಾ ಘಟಕದ ಕಾರ್ಯದರ್ಶಿ ವಿಶ್ವನಾಥ ರೈ, ಎಐಟಿಯುಸಿಯ ಕೆ.ಎ.ವಿ.ಭಟ್, ರಮೇಶ್ ಮೆಂಡನ್ ಹಾಗೂ  ಕಾರ್ಮಿಕ ಸಂಘಟನೆಗಳಾದ ಎಚ್.ಎಂ.ಎಸ್, ಬಿ.ಎಂ.ಎಸ್, ಇಂಟಕ್‌ನ ಪ್ರತಿನಿಧಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.