ADVERTISEMENT

ಪೇಜಾವರ ಸ್ವಾಮೀಜಿ ವಿರೋಧ

ಎತ್ತಿನಹೊಳೆ, ನಿಡ್ಡೋಡಿ ಯೋಜನೆ

​ಪ್ರಜಾವಾಣಿ ವಾರ್ತೆ
Published 16 ಜುಲೈ 2013, 11:16 IST
Last Updated 16 ಜುಲೈ 2013, 11:16 IST

ಮಂಗಳೂರು: ಬಯಲು ಸೀಮೆಗೆ ನೀರು ಹರಿಸುವ ಎತ್ತಿನಹೊಳೆ ತಿರುವು ಯೋಜನೆ ಅನುಷ್ಠಾನಕ್ಕೆ ಬಜೆಟ್‌ನಲ್ಲಿ ಹಣ ತೆಗೆದಿರಿಸಿರುವುದಕ್ಕೆ ಮತ್ತು ನಿಡ್ಡೋಡಿ ಉಷ್ಣ ವಿದ್ಯುತ್ ಸ್ಥಾವರ ನಿರ್ಮಾಣಕ್ಕೆ ಒಲವು ತೋರಿಸಿರುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ, ಸರ್ಕಾರ ಈ ವಿಷಯದಲ್ಲಿ ಸೂಕ್ಷ್ಮವಾಗಿ ವರ್ತಿಸದಿದ್ದರೆ ರಾಜ್ಯದೊಳಗೆ ಜನರು ಸಂಘರ್ಷಕ್ಕೆ ಇಳಿಯುವ ಅಪಾಯ ಇದೆ ಎಂದಿದ್ದಾರೆ.

`ಎತ್ತಿನಹೊಳೆಯಲ್ಲಿ (ನೇತ್ರಾವತಿ) ಹರಿಯುವ ನೀರು ವ್ಯರ್ಥವಾಗಿ ಸಮುದ್ರ ಸೇರುತ್ತದೆ ಎಂದು ಹೇಳುವುದರಲ್ಲಿ ಅರ್ಥವಿಲ್ಲ. ಘಟ್ಟ ಪ್ರದೇಶಗಳಿಂದ ಹರಿದು ಬರುವ ನೀರು ಸಮುದ್ರದ ಮೀನುಗಳಿಗೆ ಯಥೇಚ್ಛ ಪೌಷ್ಟಿಕ ಆಹಾರವನ್ನೂ ನೀಡುತ್ತದೆ. ಯೋಜನೆಗೆ ಪರಿಸರ ತಜ್ಞರು ವಿರೋಧ ವ್ಯಕ್ತಪಡಿಸಿರುವುದರಿಂದ ಸರ್ಕಾರ ಯೋಜನೆ ಅನುಷ್ಠಾನಕ್ಕೆ ಮೊದಲು ಯೋಜನೆಯಿಂದ ಆಗುವ ಸಾಧಕ-ಬಾಧಕಗಳ ಬಗ್ಗೆ ಇನ್ನೊಮ್ಮೆ ವಿವರವಾಗಿ ಪರಿಶೀಲನೆ ನಡೆಸಬೇಕು' ಎಂದು ಅವರು ಸೋಮವಾರ ಇಲ್ಲಿ ಪತ್ರಕರ್ತರಿಗೆ ತಿಳಿಸಿದರು.

`ನಿಡ್ಡೋಡಿಯಲ್ಲಿ ಬೃಹತ್ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪಿಸುವುದಕ್ಕೂ ಸರ್ಕಾರ ಮುಂದಾಗಿರುವ ಲಕ್ಷಣ ಇದೆ. ಉಷ್ಣ ವಿದ್ಯುತ್ ಸ್ಥಾವರದಿಂದ ಎಂತಹ ಅಪಾಯ ಇದೆ ಎಂಬುದು ಯುಪಿಸಿಎಲ್ ಉಷ್ಣ ವಿದ್ಯುತ್ ಸ್ಥಾವರದಿಂದ ಗೊತ್ತಾಗಿದೆ. ಕರಾವಳಿ ಭಾಗದಲ್ಲಿ ಇನ್ನೊಂದು ಇಂತಹ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪನೆಗೊಳ್ಳಲೇಬಾರದು. ಯೋಜನೆ ಆರಂಭವಾಗುವುದಕ್ಕೆ ಮೊದಲಾಗಿಯೇ ಜನರು ಒಗ್ಗಟ್ಟಿನಿಂದ ಈ ಯೋಜನೆಯನ್ನು ವಿರೋಧಿಸಬೇಕು' ಎಂದು ಶ್ರೀಗಳು ಕೇಳಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.