ADVERTISEMENT

ಪೇಟೆಗೆ ಹತ್ತಿರವಿದ್ದರೂ ಪರದಾಟ

​ಪ್ರಜಾವಾಣಿ ವಾರ್ತೆ
Published 3 ಜುಲೈ 2012, 9:45 IST
Last Updated 3 ಜುಲೈ 2012, 9:45 IST

ಉಳ್ಳಾಲ: ಈ ಪ್ರದೇಶ ಇರುವುದು ದೇರಳಕಟ್ಟೆ ಜಂಕ್ಷನ್‌ನಿಂದ ಕೇವಲ ಒಂದು ಕಿ.ಮೀ. ದೂರ. ಆದರೆ ಇಲ್ಲಿಂದ ವಿದ್ಯಾರ್ಥಿಗಳಿಗೆ ಶಾಲೆಗೆ ಹೋಗಲು, ಜನರಿಗೆ ಕೆಲಸ-ಕಾರ್ಯಗಳಿಗೆ ಪೇಟೆಗೆ ಹೋಗಲು ಕಷ್ಟ. ರೋಗಿಗಳನ್ನಂತೂ ಇಲ್ಲಿಂದ ಕರೆದೊಯ್ಯಲು ಸಾಧ್ಯವೇ ಇಲ್ಲ.

-ಇದು ಬೆಳ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಗಂದಡಿ ಬೈಲು ಜನರು ಮಳೆಗಾಲದಲ್ಲಿ ಅನುಭವಿಸುವ ತೊಂದರೆ. ಸುಮಾರು 30 ಮನೆಗಳಿರುವ ಮಾಗಂದಡಿ ಬೈಲಿನ ಜನರಿಗೆ ಹೋಗಲು ಸರಿಯಾದ ರಸ್ತೆಯಿಲ್ಲದಿದ್ದರೂ, ಕಾಲು ದಾರಿಯೊಂದಿದೆ. ಆ ಕಾಲುದಾರಿ ಬೇಸಿಗೆ ಮತ್ತು ಚಳಿಗಾಲಕ್ಕೆ ಮಾತ್ರ ಸೀಮಿತ.

ಮಳೆಗಾಲ ಬಂತೆಂದರೆ ಕಾಲುದಾರಿ ಸಂಪೂರ್ಣ ಜಲಾವೃತವಾಗುತ್ತದೆ. ಈ ಸಮಸ್ಯೆಯಿಂದ ವಿದ್ಯಾರ್ಥಿಗಳು ಶಾಲೆಗೆ ಹೋಗದೇ ರಜೆ ಮಾಡುವ ಪರಿಸ್ಥಿತಿ ಇಲ್ಲಿಯದ್ದು. ಕೆಲಸಕ್ಕೆ ಹೋಗುವವರಂತೂ ದೇರಳಕಟ್ಟೆ ಜಂಕ್ಷನ್ ತಲುಪುರ ವೇಳೆ ಪೂರ್ತಿ ಒದ್ದೆಯಾಗಿರುತ್ತಾರೆ. 

ಇಲ್ಲಿನ ನಿವಾಸಿಗಳು ಪಂಚಾಯಿತಿಗೆ ದೂರು ನೀಡಿದರೂ, ಪ್ರಯೋಜನವಾಗಿಲ್ಲ. ಈ ಪ್ರದೇಶ ಜಿ.ಪಂ. ಸದಸ್ಯರು ಅಸಹಾಯಕರು. ಜಿಲ್ಲಾ ಪಂಚಾಯಿತಿಗೆ ಸಮಸ್ಯೆ ತಿಳಿಸಿದ್ದರೂ, ಯಾವುದೇ ನಿರ್ಣಯ ಕೈಗೊಂಡಿಲ್ಲ ಎಂಬ ಅಳಲು ಅವರದು. ಹೆಚ್ಚಾಗಿ ದಲಿತರ ಮನೆಗಳೇ ಇಲ್ಲಿರುವುದರಿಂದ ಅವರನ್ನು ಮೂಲೆಗುಂಪು ಮಾಡಲಾಗಿದೆ ಎಂಬ ಆರೋಪ ಇಲ್ಲಿನ ನಿವಾಸಿಗಳದ್ದು.

ಈ ಬಗ್ಗೆ ಸಂಬಂಧಪಟ್ಟವರು ಶೀಘ್ರ ಪರಿಹಾರ ಕಂಡುಕೊಳ್ಳದಿದ್ದಲ್ಲಿ ಇಲ್ಲಿನ ನಿವಾಸಿಗಳು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.

ಜಂಕ್ಷನ್‌ಗೆ ಹೆಚ್ಚಿನ ಒಲವು
ವೈದ್ಯಕೀಯ ಕಾಲೇಜು, ಶಿಕ್ಷಣ ಇಲಾಖೆ ಹಾಗೂ ವಾಣಿಜ್ಯ ಸಂಕೀರ್ಣಗಳು ಬೆಳೆದು ನಿಂತಿರುವ ದೇರಳಕಟ್ಟೆ  ಜಂಕ್ಷನ್‌ಗೆ ಬೆಳ್ಮ ಪಂಚಾಯಿತಿ ಹೆಚ್ಚಿನ ಒತ್ತನ್ನು ನೀಡಬೇಕಾಗಿದೆ. ಆದರೆ ಕೇವಲ ಒಂದು ಕಿ.ಮೀ. ದೂರದಲ್ಲಿ  ಕೃಷಿಯೇತರ ಚಟವಟಿಕೆಗಳನ್ನು ಮಾಡಿ ಬದುಕುವ ತಮ್ಮ ಸಮಸ್ಯೆಗೆ ಪಂಚಾಯಿತಿ ಅಧಿಕಾರಿಗಳು ಸ್ಪಂದಿಸಿಲ್ಲ ಎಂಬುದು ಮಾಗಂದಡಿ ಬೈಲಿನ ಜನರ ಅಳಲು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.