ADVERTISEMENT

ಪ್ರತಿಭಟನೆ ಮುಂದಾದ ಗ್ರಾಮಸ್ಥರು:ಮಣಿಹಳ್ಳ-ಸರಪಾಡಿ ಹದಗೆಟ್ಟ ರಸ್ತೆ

​ಪ್ರಜಾವಾಣಿ ವಾರ್ತೆ
Published 17 ಮೇ 2012, 9:00 IST
Last Updated 17 ಮೇ 2012, 9:00 IST

ಬಂಟ್ವಾಳ: ಬಂಟ್ವಾಳ-ಕಡೂರು ರಾಷ್ಟ್ರೀಯ ಹೆದ್ದಾರಿ ಸಂಪರ್ಕಿಸುವ ಮಣಿಹಳ್ಳ-ಸರಪಾಡಿ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಈ ಬಗ್ಗೆ ಅಹವಾಲು ನೀಡಿದರೂ ಯಾವುದೇ ಜನಪ್ರತಿನಿಧಿಗಳು ಗಮನ ಹರಿಸುತ್ತಿಲ್ಲ ಎಂಬ ಆರೋಪ ವ್ಯಾಪಕವಾಗಿ ಕೇಳಿ ಬಂದಿದೆ.

ತಾಲ್ಲೂಕಿನ ಕೇಂದ್ರ ಸ್ಥಾನವಾದ ಬಂಟ್ವಾಳ ಮತ್ತು ಬಿ.ಸಿ.ರೋಡ್ ಸಂಪರ್ಕಿಸಲು ಸರಪಾಡಿ, ಮಣಿನಾಲ್ಕೂರು, ನಾವೂರು, ಮೈಂದಾಲ, ಪೆರಿಯಪಾದೆ, ಬೀಯಪಾದೆ ಮತ್ತಿತರ ಗ್ರಾಮೀಣ ಪ್ರದೇಶಗಳ ಜನತೆ ಇದೇ ರಸ್ತೆಯನ್ನು ಅವಲಂಬಿಸಿದ್ದಾರೆ.

ಇಲ್ಲಿನ ಪ್ರಸಿದ್ಧ ಧಾರ್ಮಿಕ ಕೇಂದ್ರವಾಗಿರುವ ಅಜಿಲಮೊಗರು ಜುಮ್ಮೋ ಮಸೀದಿ ಮತ್ತು ಶರಭೇಶ್ವರ ದೇವಸ್ಥಾನ ಹಾಗೂ ಉಪ್ಪಿನಂಗಡಿಗೆ ತೆರಳುವ ಅಸಂಖ್ಯಾತರೂ ಈ ರಸ್ತೆಯನ್ನು ಅವಲಂಬಿಸಿದ್ದಾರೆ. ಇಲ್ಲಿನ ಸುತ್ತುಮುತ್ತಲ ಹಳ್ಳಿಗಳ ರಸ್ತೆಗಳು ಬಹುತೇಕ ದುರಸ್ತಿ ಕಂಡಿದ್ದರೂ ಕೇವಲ 15 ಕಿ.ಮೀ. ಉದ್ದದ ಮಣಿಹಳ್ಳ-ಸರಪಾಡಿ ರಸ್ತೆ ಕಡೆಗಣನೆ ಆಗುತ್ತಿದೆ ಎಂಬುದು ಸ್ಥಳೀಯರ ಆರೋಪ.

ಈ ರಸ್ತೆಯುದ್ದಕ್ಕೂ ಜೆಲ್ಲಿ ಚೆಲ್ಲಾಪಿಲ್ಲಿಯಾಗಿ ರಸ್ತೆ ಬದಿ ಹರಡಿಕೊಂಡಿದೆ.  ಪಾದಚಾರಿಗಳು ಮತ್ತು ದ್ವಿಚಕ್ರ ವಾಹನ ಸವಾರರು ಇಲ್ಲಿ ಸಾಗುವಾಗ ದೂಳಿನ ಅಭಿಷೇಕ ಅಭಿಷೇಕ ಮಾಮೂಲಿ. ಜತೆಗೆ ಮೈಮೇಲೆ ಜೆಲ್ಲಿ ಹಾರುವ ಭೀತಿಯಲ್ಲೇ ಸಾಗಬೇಕಾದ ಸ್ಥಿತಿ ಇದೆ. ಈ ರಸ್ತೆಯಲ್ಲಿ ಆಗಾಗ್ಗೆ ಸಂಚರಿಸುವ ಬಹುತೇಕ ವಾಹನಗಳು ಹದಗೆಟ್ಟಿವೆ. ಈ ರಸ್ತೆಯಲ್ಲಿ ಸಾಗಲು ರಿಕ್ಷಾ ಚಾಲಕರು ಹಿಂದೇಟು ಹಾಕುತ್ತಾರೆ. ಈ ಮಾರ್ಗದಲ್ಲಿ ಸಾಗುವ ಬಸ್‌ಗಳೂ ಸಂಚಾರ ಸ್ಥಗಿತಗೊಳಿಸಲು ಮುಂದಾಗಿದ್ದಾರೆ.

`ಈ ರಸ್ತೆ ದುಸ್ಥಿತಿ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿ ಡಾ.ಚನ್ನಪ್ಪ ಗೌಡ ಅವರಿಗೆ , ಸ್ಥಳೀಯ ಶಾಸಕರು, ಸಂಸದರು, ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಹಾಗೂ ಗ್ರಾ.ಪಂ.ಅಧ್ಯಕ್ಷರಿಗೆ ಮನವಿ ಸಲ್ಲಿಸಲಾಗಿದೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ~ ಎಂಬ ಆರೋಪ ಸ್ಥಳೀಯರದ್ದು.

ಬಂಟ್ವಾಳ ಬಡ್ಡಕಟ್ಟೆ ರಿಕ್ಷಾ ಚಾಲಕ- ಮಾಲೀಕರ ಸಂಘದ ವತಿಯಿಂದ ಇದೇ 17ರಂದು (ಗುರುವಾರ) ಬೆಳಿಗ್ಗೆ ಮಣಿಹಳ್ಳದಲ್ಲಿ ರಸ್ತೆತಡೆ ಆಯೋಜಿಸಲಾಗಿದೆ. ಇನ್ನೊಂದೆಡೆ, ಇದೇ 27ರಂದು ಸ್ಥಳೀಯ ರೈತ ಸಂಘ ಮತ್ತು ನಾಗರಿಕರ ವೇದಿಕೆ ವತಿಯಿಂದ ಮತ್ತೆ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ.ಮಳೆಗಾಲಕ್ಕೆ ಮುಂಚಿತವಾಗಿ ಈ ರಸ್ತೆಯನ್ನು ವಿಸ್ತರಿಸುವ ಜೊತೆಗೆ ಸಂಪೂರ್ಣ ಡಾಂಬರೀಕರಣಗೊಳಿಸಬೇಕು ಎಂಬ ಆಗ್ರಹ ಇಲ್ಲಿನ ನಾಗರಿಕರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.