ADVERTISEMENT

ಫಳ್ನೀರ್: ಅಂಗಡಿಯಿಂದ 7 ಲಕ್ಷ ಮೌಲ್ಯದ ಸ್ವತ್ತು ಕಳವು

​ಪ್ರಜಾವಾಣಿ ವಾರ್ತೆ
Published 20 ಜುಲೈ 2013, 11:11 IST
Last Updated 20 ಜುಲೈ 2013, 11:11 IST

ಮಂಗಳೂರು: ನಗರದ ಫಳ್ನೀರ್‌ನ `ಪಿ.ಸಿ. ಮಲ್ಲಪ್ಪ ಆಂಡ್ ಕಂಪೆನಿ' ಟೈಲ್ಸ್ ಮತ್ತು ಸ್ಯಾನಿಟರಿ ಪರಿಕರಗಳ ಅಂಗಡಿಯಿಂದ ರೂ 50 ಸಾವಿರ ನಗದು ಸಹಿತ 7 ಲಕ್ಷಕ್ಕೂ ಅಧಿಕ ಮೌಲ್ಯದ ಪರಿಕರಗಳು ಕಳವಾಗಿರುವುದು ಶುಕ್ರವಾರ ಬೆಳಕಿಗೆ ಬಂದಿದೆ.

ಫಳ್ನೀರ್‌ನ ಹೈಲ್ಯಾಂಡ್ ಆಸ್ಪತ್ರೆ ಸಮೀಪದ ಅಂಗಡಿಯ ಹಿಂಬದಿಯ ಷಟರ್ ಮುರಿದು ಒಳನುಗ್ಗಿದ ಕಳ್ಳರು, ಜಗ್ವಾರ್ ವಾಲ್ ಮಿಕ್ಸರ್‌ಗಳಿದ್ದ (ತಣ್ಣೀರು ಮತ್ತು ಬಿಸಿನೀರನ್ನು ಮಿಶ್ರಗೊಳಿಸುವ ಪರಿಕರ) ಪೆಟ್ಟಿಗೆಗಳನ್ನು ಕದ್ದೊಯ್ದಿದ್ದಾರೆ. ಪ್ರತಿ ವಾಲ್ ಮಿಕ್ಸರ್‌ನ ಬೆಲೆ 3 ಸಾವಿರ ರೂಪಾಯಿ.

ಶುಕ್ರವಾರ ಬೆಳಿಗ್ಗೆ ಸಿಬ್ಬಂದಿ ಅಂಗಡಿಯ ಬಾಗಿಲು ತೆರೆದಾಗ ಕೃತ್ಯ ಬೆಳಕಿಗೆ ಬಂದಿದೆ. ಕಳ್ಳರು ಸಲೀಸಾಗಿ ಷಟರ್ ಮುರಿದಿದ್ದುದರಿಂದ ಕಳವು ನಡೆದ ಬಗ್ಗೆ ಯಾವುದೇ ಕುರುಹಗಳು ಸ್ಥಳದಲ್ಲಿರಲಿಲ್ಲ. ಗುರುವಾರ ರಾತ್ರಿ ಕಳವು ನಡೆದಿರಬಹುದು ಎಂದು ಶಂಕಿಸಲಾಗಿದೆ.

ಸಿ.ಸಿ.ಟಿವಿ ವ್ಯರ್ಥ: ಅಂಗಡಿಯಲ್ಲಿ 15 ಕಡೆ ಸಿ.ಸಿ. ಟಿವಿ ಕ್ಯಾಮೆರಾಗಳನ್ನು ಅಳಡಿಸಿದ್ದರೂ ಅವು ಕಾರ್ಯನಿರ್ವಹಿಸುತ್ತಿರಲಿಲ್ಲ. `ನಾವು ವ್ಯಾಪಾರದ ಅವಧಿಯಲ್ಲಿ ಮಾತ್ರ ಸಿ.ಸಿ. ಟಿ.ವಿಯನ್ನು ಬಳಸುತ್ತೇವೆ. ರಾತ್ರಿ ಅಂಗಡಿಗೆ ಬಾಗಿಲು ಹಾಕುವಾಗ ವಿದ್ಯುತ್ ಸಂಪರ್ಕ ತೆಗೆಯುತ್ತೇವೆ. ಆಗ ಸಿ.ಸಿ. ಟಿ.ವಿ ವ್ಯವಸ್ಥೆಯ ವಿದ್ಯುತ್ ಸಂಪರ್ಕವೂ ಕಡಿತಗೊಳ್ಳುತ್ತದೆ' ಎಂದು ಅಂಗಡಿಯ ವ್ಯವಸ್ಥಾಪಕರು ಪೊಲೀಸರಿಗೆ ತಿಳಿಸಿದ್ದಾರೆ.

ಸಿ.ಸಿ.ಟಿ.ವಿ ಕ್ಯಾಮೆರಾಗಳಲ್ಲಿ ಗುರುವಾರ ರಾತ್ರಿ 8 ಗಂಟೆವರೆಗಿನ ದೃಶ್ಯಗಳು ಮಾತ್ರ ದಾಖಲಾಗಿದ್ದವು. ಅಂಗಡಿಯ ವ್ಯವಸ್ಥಾಪಕರಾದ ನಾಗುರಿಯ ನಿತ್ಯಾನಂದ ಅವರು ದೂರು ನೀಡಿದ್ದು, ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.