ವಿಟ್ಲ: ಕನ್ಯಾನ ಗ್ರಾಮದ ತೋಟದಮೂಲೆ ಎಂಬಲ್ಲಿ ಬಂಡೆಕಲ್ಲಿನೊಳಗೆ ಸುಂದರವಾದ ಗುಹೆವೊಂದು ಮಂಗಳವಾರ ಪತ್ತೆಯಾಗಿದೆ. ಇದು ಆಶ್ಚರ್ಯವನ್ನು ಹುಟ್ಟಿಸಿರುವ ಹಿನ್ನೆಲೆಯಲ್ಲಿ ಕನ್ಯಾನ ಸುತ್ತಮುತ್ತಲಿನ ಹಲವು ಮಂದಿ ಈ ಗುಹೆಯನ್ನು ವೀಕ್ಷಿಸಿದರು.
ಗುಡ್ಡವೊಂದರ ತುತ್ತತುದಿಯಲ್ಲಿ ದೊಡ್ಡ ಬಂಡೆಕಲ್ಲು ಇದ್ದು ಸೋಮವಾರ ರಾತ್ರಿ ವೇಳೆ ಇದರ ಮೇಲೆ ಮಕ್ಕಳು ಆಡುತ್ತಿದ್ದರು. ಆಗ ಭಾರಿ ಶಬ್ದ ಕೇಳಿ ಬಂತು. ಮಕ್ಕಳೇ ಆಟ ಆಡುತ್ತ ಆಡುತ್ತ ಸುತ್ತಲೂ ಇರುವ ಮಣ್ಣನ್ನು ಅಗೆದು ತೆಗೆದಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ. ಅಲ್ಲಿ ಕಲ್ಲಿನ ಕೆಳಭಾಗದಲ್ಲಿ ದ್ವಾರ ಕಂಡುಬಂತು. ದ್ವಾರಕ್ಕೆ ಅನೇಕ ಕಲ್ಲುಗಳನ್ನೇ ಮುಚ್ಚಿ, ಒಳಗೆ ಪ್ರವೇಶಿಸಲು ಸಾಧ್ಯವಿಲ್ಲದಂತೆ ಮಾಡಲಾಗಿತ್ತು ಎಂದು ಸ್ಥಳೀಯರು ಹೇಳುತ್ತಾರೆ.
ಯುವಕನೊಬ್ಬ ಇದರೊಳಗೆ ಪ್ರವೇಶಿಸಿ, ಇಡಿ ಬಂಡೆಕಲ್ಲಿನ ಅಡಿಭಾಗವನ್ನು ಕೊರೆದು ಈ ಗುಹೆಯನ್ನು ನಿರ್ಮಿಸಿರುವ ಸಾಧ್ಯತೆಯಿದೆ. ದ್ವಾರದಲ್ಲಿ ಕುಳಿತು ಒಳಗೆ ಪ್ರವೇಶಿಸುವುದಕ್ಕೆ ಸಾಧ್ಯವಾಗುತ್ತದೆ. ಒಳಗೆ 4.5 ಅಡಿಯ ವೃತ್ತಾಕಾರದ ಗುಹೆ ಗೋಚರವಾಗುತ್ತದೆ. ಮಧ್ಯದಲ್ಲಿ ಒಂದು ಅಡಿ ಆಳದ ಹೊಂಡವನ್ನು ನಿರ್ಮಿಸಲಾಗಿದೆ. ಇದು ಸುಮಾರು 50ರಿಂದ 100 ವರ್ಷದ ಹಿಂದಿನ ಗುಹೆ ಆಗಿರಬಹುದೆಂದು ಸ್ಥಳೀಯರು ಹೇಳುತ್ತಾರೆ. ಇದೇ ಗುಡ್ಡದ ಇತರ ಬಂಡೆಕಲ್ಲುಗಳಲ್ಲೂ ಇಂಥ ಗುಹೆಗಳಿವೆ ಎಂದೂ ಅವರು ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.