ADVERTISEMENT

ಬಡವರಿಗೆ ಮನೆ ಕಟ್ಟುವುದು ಕಷ್ಟ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2011, 8:40 IST
Last Updated 15 ಮಾರ್ಚ್ 2011, 8:40 IST

ಉಳ್ಳಾಲ: ಕೋಟ್ಯಧಿಪತಿಗಳ ಪರವಾಗಿರುವ ಸರ್ಕಾರದ ಆರ್ಥಿಕ ಧೋರಣೆಯಿಂದ ಬಡತನ ಹೆಚ್ಚುತ್ತಲೇ ಇದ್ದು, ಬಡಕುಟುಂಬಗಳಿಗೆ ನಿವೇಶನ ಖರೀದಿಸುವುದು ಅಸಾಧ್ಯವಾಗಿದೆ ಎಂದು ಡಿವೈಎಫ್‌ಐ ಜಿಲ್ಲಾ ಘಟಕದ ಅಧ್ಯಕ್ಷ ಮುನೀರ್ ಕಾಟಿಪಳ್ಳ ಆಕ್ರೋಶ ವ್ಯಕ್ತಪಡಿಸಿದರು.

ಮಂಗಳವಾರ ಮಾಸ್ತಿಕಟ್ಟೆಯಿಂದ ಉಳ್ಳಾಲ ಪುರಸಭೆಯವರೆಗೆ ಉಳ್ಳಾಲ ಪುರಸಭೆ ಚಲೊ ಹಾಗೂ ಸಾಮೂಹಿಕ ಅರ್ಜಿ ಸಲ್ಲಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಡಿವೈಎಫ್‌ಐ ಉಳ್ಳಾಲ ವಲಯ ವತಿಯಿಂದ ನಿವೇಶನರಹಿತರಿಗೆ ಮನೆ ನಿವೇಶನ, ಮನೆ ಬಾಡಿಗೆ ನಿಯಂತ್ರಣ ಕಾಯ್ದೆ ಜಾರಿಗೆ ಆಗ್ರಹಿಸಿ ಮತ್ತು ಸರ್ಕಾರಿ ಸ್ಥಳಗಳಲ್ಲಿ ಮನೆಕಟ್ಟಿ ವಾಸಿಸುವವರಿಗೆ ಹಕ್ಕು ಪತ್ರ ನೀಡುವಂತೆ ಒತ್ತಾಯಿಸಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ಸಂವಿಧಾನದ ಆಶಯದ ಪ್ರಕಾರ ಬಡವರಿಗೆ ಮನೆ, ನಿವೇಶನ ಒದಗಿಸಿಕೊಡುವುದು ಸರ್ಕಾರದ ಕರ್ತವ್ಯವಾಗಿದೆ. ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಸರ್ಕಾರಿ ಭೂಮಿಯನ್ನು ಬಡವರಿಗೆ ಹಂಚುವ ಬದಲು ತಾವೇ ಕಬಳಿಸುತ್ತಿರುವುದು ಖಂಡನೀಯ. ಉದ್ಯಮದ ಹೆಸರಿನಿಂದ ಉದ್ಯಮಿಗಳಿಗೆ ಸಾವಿರಾರು ಎಕರೆ ಭೂಮಿಯನ್ನು ತಮಗೆ ಸಿಕ್ಕ ಅಲ್ಪಸ್ವಲ್ಪ ಹಣಕ್ಕಾಗಿ ಮಾರಾಟ ಮಾಡುತ್ತಿದ್ದಾರೆ. ಇದರಿಂದಾಗಿ ಉಳ್ಳಾಲ ವಲಯದಲ್ಲಿ 4-5 ಕುಟುಂಬಗಳು ಒಂದೇ ಮನೆಯಲ್ಲಿ ವಾಸಿಸಬೇಕಾದ ಅನಿವಾರ್ಯತೆ ಇದೆ ಎಂದು ವಿವರಿಸಿದರು.

ಶುಲ್ಕ ಹಾಗೂ ಬೆಲೆ ಏರಿಕೆಯಿಂದಾಗಿ ಕುಡಿಯುವ ನೀರು ಮತ್ತು ಶಿಕ್ಷಣದ ಹಕ್ಕು ಬಡವರಿಗಿಲ್ಲದಂತಾಗಿದೆ. ರಾ.ಹೆ. 17 ವಿಸ್ತರಣೆಗಾಗಿ 60 ಮೀಟರ್ ಜಾಗ ಕಬಳಿಸಲಾಗುತ್ತಿದೆ, ಕಾಮಗಾರಿಯನ್ನು ಖಾಸಗಿ ಕಂಪೆನಿಯವರಿಗೆ ವಹಿಸಿರುವುದರಿಂದ ಜಾಗ ಗುತ್ತಿಗೆದಾರರ ಪಾಲಾಗುತ್ತಿದೆ.   ವಹಿಸಿಕೊಟ್ಟ ರಾಜಕಾರಣಿಗಳು ಇಂತಿಷ್ಟು ಜಾಗಕ್ಕೆ ಕಮಿಷನ್ ಪಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ಪುರಸಭಾ ವ್ಯಾಪ್ತಿಯಲ್ಲಿ ಬಡವರಿಗಾಗಿ ಕಟ್ಟಿಕೊಡಲಾಗಿರುವ ಆಶ್ರಯ ಯೋಜನೆಗಳಾಗಲಿ, ವಸತಿ ಯೋಜನೆಗಳಾಗಲಿ ವಾಸಿಸಲು ಅಸಾಧ್ಯವಾಗಿ ಬಡಜನತೆ ಬೀದಿಯಲ್ಲಿ ಬೀಳುವಂತಾಗಿದೆ. ರಾಜಕಾರಣಿಗಳು ಮಾತ್ರ ವಿಧಾನಸಭೆಯಲ್ಲಿ ಕುಳಿತು ತಮ್ಮದೇ ಸ್ವಾರ್ಥ ಲೆಕ್ಕಾಚಾರದಲ್ಲಿ ತೊಡಗಿರುವುದು ಬಡ ವರ್ಗದ ಜನರಿಗೆ ಮಾಡುತ್ತಿರುವ ಶೋಷಣೆ ಎಂದರು.

ಉಳ್ಳಾಲ ಪುರಸಭೆ ಮುಖ್ಯಾಧಿಕಾರಿಗೆ ಸಾಮೂಹಿಕ ಮನವಿ ಸಲ್ಲಿಸಲಾಯಿತು. ಪುರಸಭೆಯಿಂದ ಬೇಡಿಕೆಗೆ ಬೆಲೆ ಸಿಗದಿದ್ದಲ್ಲಿ ಏಪ್ರಿಲ್ 21ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು.

ಸಿಪಿಎಂ ಉಳ್ಳಾಲ ವಲಯ ಕಾರ್ಯದರ್ಶಿ ಕೃಷ್ಣಪ್ಪ ಸಾಲಿಯಾನ್, ಡಿವೈಎಫ್‌ಐ ಉಳ್ಳಾಲ ವಲಯ ಅಧ್ಯಕ್ಷ ಮಹಾಬಲ ಟಿ.ದೆಪ್ಪೆಲಿಮಾರ್, ರೈತ ಸಂಘದ ಅಧ್ಯಕ್ಷ ಯಾದವ ಶೆಟ್ಟಿ, ಡಿವೈಎಫ್‌ಐ ಉಳ್ಳಾಲ ವಲಯ ಮಹಿಳಾ ಅಧ್ಯಕ್ಷೆ ವಾಣಿ ಎಲ್.ಕೊಂಡಾಣ, ಡಿವೈಎಫ್‌ಐ ಉಳ್ಳಾಲ ವಲಯ ಕಾರ್ಯದರ್ಶಿ ಅಶೋಕ್ ಶೆಟ್ಟಿ ಚೆಂಬುಗುಡ್ಡೆ, ಸಿಐಟಿಯು ಮುಖಂಡ ಜಯಂತ ನಾಯ್ಕೆ ಮೊದಲಾದವರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.