ADVERTISEMENT

ಬಾಬರಿ ಮಸೀದಿ ಮರುನಿರ್ಮಾಣಕ್ಕೆ ಆಗ್ರಹ

ಪುತ್ತೂರಿನಲ್ಲಿ ಇಮಾಮ್ ಕೌನ್ಸಿಲ್‌ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2013, 8:17 IST
Last Updated 7 ಡಿಸೆಂಬರ್ 2013, 8:17 IST

ಪುತ್ತೂರು: ಬಾಬರಿ ಮಸೀದಿಯ ಪುನರ್ ನಿರ್ಮಾಣಕ್ಕೆ ಆಗ್ರಹಿಸಿ ಆಲ್‌ ಇಂಡಿಯಾ ಇಮಾಮ್ ಕೌನ್ಸಿಲ್ ಸಂಘಟನೆಯ ನೇತೃತ್ವದಲ್ಲಿ ಶುಕ್ರವಾರ ಪುತ್ತೂರಿನ ಉಪ ವಿಭಾಗಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.

ಪ್ರತಿಭಟನೆಯನ್ನುದ್ದೇಶಿಸಿ ಇಮಾಮ್‌ ಕೌನ್ಸಿಲ್‌ ಜಿಲ್ಲಾಧ್ಯಕ್ಷ ನಿಜಾಮುದ್ದೀನ್‌ ಬಾಖವಿ ಮಾತನಾಡಿ, ಈ ದೇಶದ ಮುಸ್ಲಿಮರ ಅಭಿಮಾನದ ಪ್ರತೀಕವಾದ ಬಾಬರಿ ಮಸೀದಿಯನ್ನು ಒಂದಲ್ಲ ಒಂದು ದಿನ ಅದೇ ಸ್ಥಳದಲ್ಲಿ ನಿರ್ಮಿಸಿಯೇ ಸಿದ್ಧ ಎಂದರು.

ಪಿಎಫ್‍ಐ ಪುತ್ತೂರು ಜಿಲ್ಲಾಧ್ಯಕ್ಷ ಶಾಫಿ ಬೆಳ್ಳಾರೆ ಅವರು ಮಾತನಾಡಿ ಬಾಬರಿ ಮಸೀದಿ ಧ್ವಂಸ ಕೇವಲ ಮಸೀದಿಯ ನಾಶವಲ್ಲ. ಇದು ಜಾತ್ಯತೀತ ಮೌಲ್ಯಗಳ ಪ್ರಜಾ­ಪ್ರಭುತ್ವವನ್ನೇ ನಾಶಗೊಳಿಸಿದ ದಿನವಾಗಿದೆ ಎಂದರು.

ಖಲೀಲ್ ಅಝ್ಹರಿ  ಅವರು ಮಾತನಾಡಿ ಪವಿತ್ರ ಬಾಬರಿ ಮಸೀದಿಯನ್ನು ಧ್ವಂಸ­ಗೊಳಿಸಿರುವ ಫ್ಯಾಸಿಸ್ಟ್ ವರ್ಗ ರಾಮ ಜನ್ಮ­ಭೂಮಿ ಹೆಸರೆತ್ತಿ ಕಟ್ಟು ಕಥೆ ಹೆಣೆಯುತ್ತಿದ್ದು, ಮುಂದಿನ ದಿನಗಳಲ್ಲಿ ಮಸೀದಿಯನ್ನು ಅದೇ ಸ್ಥಳದಲ್ಲಿ ನಿರ್ಮಿಸಿಯೇ ಸಿದ್ಧ ಎಂದರು.

ಇಮಾಮ್ ಕೌನ್ಸಿಲ್‌ ರಾಜ್ಯ ಕಾರ್ಯದರ್ಶಿ ನಝೀಝ್ ಮರವೂರು, ಜಿಲ್ಲಾ ಕಾರ್ಯದರ್ಶಿ ಸಿರಾಜುದ್ದೀನ್ ಮುಸ್ಲಿಯಾರ್, ಎಸ್.ಡಿ.ಪಿ.ಡಿ ನಗರಾಧ್ಯಕ್ಷ ಉಮ್ಮರ್ ಕೂರ್ನಡ್ಕ, ಕಾರ್ಯ­ದರ್ಶಿ ಹಂಝ ಅಫ್ನಾನ್, ಪಿ.ಎಫ್.ಐ ಮುಖಂಡರಾದ ರಿಝ್ವಾನ್ ಕೌಡಿಚ್ಚಾರ್, ಖಾಸಿಂಹಾಜಿ, ಶಾಕಿರ್ ಕಟ್ಟತ್ತಾರ್, ಬಾವು ಪಡೀಲ್, ಶಮೀರ್ ಕೂರ್ನಡ್ಕ, ಬಾತಿಷ ಬಡಕ್ಕೋಡಿ, ಫೈಝಲ್ ಬೆಳ್ಳಾರೆ, ಮುಸ್ತಫ ಸುಳ್ಯ, ಕ್ಯಾಂಪಸ್ ಫ್ರಂಟ್ ಪುತ್ತೂರು ಜಿಲ್ಲಾಧ್ಯಕ್ಷ ಝಕರಿಯಾ, ಎಸ್.ಡಿ.ಪಿ.ಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಮತ್ತು ಇಮಾಮ್ ಕೌನ್ಸಿಲ್ ಜಿಲ್ಲಾ ಸಮಿತಿ ಸದಸ್ಯ ಅಬ್ದುಲ್ಲ ಮದನಿ ಮತ್ತಿತರರು ಪ್ರತಿಭಟನೆ­ಯಲ್ಲಿದ್ದರು.

ಬಾಬರಿ ಮಸೀದಿಯನ್ನು ಅದೇ ಸ್ಥಳದಲ್ಲಿ ಪುನರ್ ನಿರ್ಮಿಸಬೇಕು, ಮಸೀದಿ ಧ್ವಂಸ ಮಾಡಿದ ಆರೋಪಿಗಳಿಗೆ ಶಿಕ್ಷೆಯಾಗಬೇಕು ಮತ್ತು ಲಿಬರ್ಹಾನ್ ವರದಿಯ ಶಿಫಾರಸು­ಗಳನ್ನು ಜಾರಿಗೊಳಿಸಬೇಕೆಂದು ಒತ್ತಾಯಿಸಿ ಉಪ ವಿಭಾಗಾಧಿಕಾರಿ ಮೂಲಕ ರಾಷ್ಟ್ರಪತಿ­ಗಳಿಗೆ ಮನವಿ ಸಲ್ಲಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.