ADVERTISEMENT

‘ಬಿಜೆಪಿ ಮುಗ್ಧ ಹಿಂದೂಗಳನ್ನು ಎತ್ತಿ ಕಟ್ಟುತ್ತಿದೆ’

ಬಹುಭಾಷಾ ನಟ ಪ್ರಕಾಶ್‌ ರೈ ಆರೋಪ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2018, 13:25 IST
Last Updated 29 ಏಪ್ರಿಲ್ 2018, 13:25 IST

ಮಂಗಳೂರು: ‘ಸಂವಿಧಾನ ವಿರೋಧಿ ಕ್ರಿಯೆಗಳನ್ನು ಪ್ರಶ್ನಿಸುತ್ತಿರುವ ನನ್ನ ವಿರುದ್ಧ ಮುಗ್ಧ ಹಿಂದೂಗಳನ್ನು ಎತ್ತಿ ಕಟ್ಟುತ್ತಿರುವ ಬಿಜೆಪಿ, ಭಿನ್ನಾಭಿಪ್ರಾಯ ವ್ಯಕ್ತಪಡಿಸುವ ಪ್ರಕ್ರಿಯೆಯನ್ನು ಅಸಹ್ಯ ಗೊಳಿಸುತ್ತಿದೆ’ ಎಂದು ಬಹುಭಾಷಾ ನಟ ಪ್ರಕಾಶ್ ರೈ ಆರೋಪಿಸಿದರು.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿಜೆಪಿಯ ಸಂವಿಧಾನಬಾಹಿರ ನಡೆಗಳ ಬಗ್ಗೆ ಪ್ರಶ್ನಿಸುತ್ತಿದ್ದಂತೆಯೇ ವೈಯಕ್ತಿಕ ಜೀವನದ ಮೇಲೆ ದಾಳಿ ನಡೆಸಲಾಗುತ್ತಿದೆ. ಬಿಜೆಪಿಯ ‘ಟ್ರಾಲ್‌ ಸೇನೆ’ಯ ಮೂಲಕ ಚಾರಿತ್ರ್ಯವಧೆಗೆ ಯತ್ನಿಸಲಾಗುತ್ತಿದೆ. ನಾನು ಹಿಂದೂ ಧರ್ಮದ ವಿರೋಧಿ ಎಂಬ ಹಣೆಪಟ್ಟಿ ಕಟ್ಟಿ, ಮುಗ್ಧ ಹಿಂದೂಗಳನ್ನು ನನ್ನ ವಿರುದ್ಧ ಎತ್ತಿ ಕಟ್ಟಲಾಗುತ್ತಿದೆ’ ಎಂದರು.

‘ಮಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ.ವೇದವ್ಯಾಸ ಕಾಮತ್‌ ಪತ್ನಿ ಇತ್ತೀಚೆಗೆ ಹಿಂದೂ ಧರ್ಮದ ಹೆಸರಿನಲ್ಲಿ ಮತ ಕೇಳಿದ್ದರು. ಅದಕ್ಕೆ ಸಂಬಂಧಿಸಿದ ವಿಡಿಯೊ ತುಣುಕನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದೆ. ಅದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ಕಾರ್ಯಕರ್ತರು ಕೀಳುಮಟ್ಟದಲ್ಲಿ ಟೀಕಿಸಿದರು. ರಾಜಕೀಯ ಬಿಟ್ಟು ನನ್ನ ವೈಯಕ್ತಿಕ ಜೀವನದ ಕುರಿತು ಯಾರೋ ಹಬ್ಬಿಸಿದ್ದ ವದಂತಿ ಆಧರಿಸಿ ಟ್ವೀಟ್‌ ಮಾಡಿದ್ದಾರೆ. ಹೆಣ್ಣು ಮಕ್ಕಳು ಕೂಡ ಈ ಕೆಲಸದಲ್ಲಿ ಭಾಗಿಯಾಗಿದ್ದಾರೆ’ ಎಂದು ದೂರಿದರು.

ADVERTISEMENT

‘ಬಿಜೆಪಿ ಯುವ ಮೋರ್ಚಾ ನಾಯಕಿಯೊಬ್ಬರು ಸೊಂಟದ ಕೆಳಗಿನ ಭಾಷೆ ಬಳಸಿದರು. ನಾನು ಅದನ್ನು ಮಾಡುವುದಿಲ್ಲ. ಆಕೆಯಂತೆಯೇ ನನಗೂ ತಾಯಿ, ಪತ್ನಿ, ಹೆಣ್ಣು ಮಕ್ಕಳು ಇದ್ದಾರೆ. ನನ್ನ ವೈಯಕ್ತಿಕ ಜೀವನ ನನ್ನದು. ನಾನು ಪತ್ನಿಗೆ ವಿಚ್ಛೇದನ ನೀಡಿ ಮತ್ತೊಂದು ಮದುವೆ ಆಗಿರುವುದು ನಿಜ. ಆದರೆ, ನನ್ನ ತಾಯಿಗೆ ಈಗಲೂ ಇಬ್ಬರು ಸೊಸೆಯಂದಿರು. ನನ್ನ ಮಕ್ಕಳಿಗೆ ಆಕೆ ಇನ್ನೂ ತಾಯಿ. ನನ್ನ ಮಗನ ಸಾವಿನ ವಿಚಾರವನ್ನೂ ಎಳೆದು ತಂದರು. ನಿಮ್ಮ ಮನೆಯಲ್ಲಿ ಮಕ್ಕಳು ಸತ್ತಿದ್ದಾರೆಯೇ? ಆ ನೋವು ನಿಮಗೆ ಗೊತ್ತಿದೆಯೇ’ ಎಂದು ಪ್ರಶ್ನಿಸಿದರು.

‘ರಾಜಕೀಯ ಭಿನ್ನಾಭಿಪ್ರಾಯಗಳ ಕುರಿತು ಮಾತನಾಡುವಾಗ ತಾಯಿ, ಹೆಂಡತಿ, ಮಕ್ಕಳ ವಿಚಾರ ಎಳೆದು ತರಬೇಡಿ. ಮಗನ ಸಾವಿನ ವಿಚಾರ ಪ್ರಸ್ತಾಪಿಸಿ ಆನಂದ ಅನುಭವಿಸಬೇಡಿ. ಎಲ್ಲರ ತಾಳ್ಮೆಗೂ ಒಂದು ಮಿತಿ ಇರುತ್ತದೆ ಎಂಬುದು ನೆನಪಿರಲಿ. ಭಿನ್ನಾಭಿಪ್ರಾಯಗಳನ್ನು ಹಂಚಿಕೊಳ್ಳುವ ಪ್ರಕ್ರಿಯೆಯನ್ನು ಅಸಹ್ಯಗೊಳಿಸಬೇಡಿ’ ಎಂದರು.

ಜನರನ್ನು ಎದುರಿಸಿ: ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಸೇರಿದಂತೆ ಬಿಜೆಪಿಯ ಘಟಾನುಘಟಿ ನಾಯಕರು ನೇರವಾಗಿ ಜನರನ್ನು ಎದುರಿಸುವ ಧೈರ್ಯ ಹೊಂದಿಲ್ಲ. ಏಕಮುಖವಾಗಿ ವಿರೋಧಿಗಳ ಚಾರಿತ್ರ್ಯವಧೆ ಮಾಡುವ ಬದಲಿಗೆ ಪತ್ರಿಕಾಗೋಷ್ಠಿ ನಡೆಸಿ ಜನರ ಪ್ರಶ್ನೆಗೆ ಉತ್ತರಿಸಲಿ ಎಂದು ಸವಾಲು ಹಾಕಿದರು.

‘ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿರುವ ಸ್ವಘೋಷಿತ ದೇವಮಾನವ ಅಸಾರಾಂ ಬಾಪು ಆಗ ಎಲ್ಲರಿಗೂ ಹತ್ತಿರವಿದ್ದ. ಮೋದಿ ಮಾತ್ರವಲ್ಲ ಕಾಂಗ್ರೆಸ್‌ ನಾಯಕರೂ ಮತಬ್ಯಾಂಕ್‌ ಮೇಲೆ ಕಣ್ಣಿಟ್ಟು ಆತನ ಬಳಿ ಹೋಗುತ್ತಿದ್ದರು. ಬಹುಜನ ಸಮಾಜ ಪಕ್ಷದ ಮಾಯಾವತಿ ಕೂಡ ಹೋಗುತ್ತಿದ್ದರು’ ಎಂದರು.

ಸಗಣಿ ಎರಚುವ ಬೆದರಿಕೆ

‘ಬಿಜೆಪಿ ಕಾರ್ಯಕರ್ತರು ನನ್ನ ಮೇಲೆ ಸಗಣಿ ಎರಚಲು ಹೊಂಚು ಹಾಕುತ್ತಿದ್ದಾರೆ ಎಂಬ ಮಾಹಿತಿ ಗುಪ್ತಚರ ಇಲಾಖೆಯಿಂದ ಬಂದಿದೆ. ಅವರ ತಲೆಯಲ್ಲಿ ಸಗಣಿ ಇದೆ. ಅದಕ್ಕಾಗಿ ಅವರು ಅದನ್ನು ಎಸೆಯಲು ಬಯಸುತ್ತಾರೆ. ಆಗುತ್ತೋ ಇಲ್ಲವೋ ನೋಡೋಣ’ ಎಂದು ಪ್ರಕಾಶ್ ರೈ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.