ADVERTISEMENT

ಬಿಪಿಎಲ್ ಕಾರ್ಡ್ ದುರುಪಯೋಗ ವಿರುದ್ಧ ಮೊಕದ್ದಮೆ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2013, 10:05 IST
Last Updated 19 ಡಿಸೆಂಬರ್ 2013, 10:05 IST

ಪುತ್ತೂರು: ತಾಲ್ಲೂಕಿನಲ್ಲಿ ಬಡತನದಲ್ಲಿರುವ ಸುಮಾರು 30,333  ಮಂದಿ ಫಲಾನುಭವಿಗಳು ಬಿಪಿಎಲ್ ಪಡಿತರ ಚೀಟಿಯ ಸದುಪಯೋಗ ಪಡೆದುಕೊಂಡಿದ್ದಾರೆ. ಅರ್ಹತೆ ಇಲ್ಲದವರು ಬಿಪಿಎಲ್ ಪಡಿತರ ಚೀಟಿ ಸೌಲಭ್ಯವನ್ನು ಪಡೆದುಕೊಂಡಲ್ಲಿ ಅಂಥವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಾಗುತ್ತದೆ. 1 ರೂಪಾಯಿಗೆ ಸಿಗುವ ಅಕ್ಕಿಯನ್ನು ಕಾಳಸಂತೆಯಲ್ಲಿ  ಮಾರಾಟ ಮಾಡಿದರೆ ಅಂತಹ ಗ್ರಾಹಕರ ಬಿಪಿಎಲ್ ಪಡಿತರ ಚೀಟಿಯನ್ನು ರದ್ದುಗೊಳಿಸಲಾಗುವುದು ಎಂದು ಶಾಸಕಿ ಶಕುಂತಳಾ ಶೆಟ್ಟಿ ಅವರು ಎಚ್ಚರಿಸಿದರು.

ಪುತ್ತೂರಿನ ಪುರಭವನದಲ್ಲಿ ಬುಧವಾರ ನಡೆದ ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಪಡಿತರ ಚೀಟಿ ವಿತರಣೆ ಹಾಗೂ ಅಡಿಕೆ ಕೊಳೆರೋಗ sಸಂತ್ರಸ್ತರಿಗೆ ಪರಿಹಾರ ಧನದ ಚೆಕ್ ವಿತರಣಾ ಕಾರ್ಯಕ್ರಮದಲ್ಲಿ ಪಡಿತರ ಚೀಟಿ ಮತ್ತು ಅಡಿಕೆ ಕೊಳೆರೋಗದಿಂದ ನಷ್ಟಕ್ಕೊಳಗಾದ ಸಂತ್ರಸ್ತರಿಗೆ ಚೆಕ್ ವಿತರಿಸಿ ಅವರು ಮಾತನಾಡಿದರು. ದೊಡ್ಡ ರೈತರಿಗೆ ಹಾಗೂ ಸಣ್ಣ ರೈತರಿಗೆ ಪರಿಹಾರ ಚೆಕ್ ವಿತರಿಸಲು ಬಾಕಿ ಇದ್ದು ,ಇದಕ್ಕಾಗಿ ₨ 10 ಕೋಟಿ ಬಿಡುಗಡೆ ಮಾಡುವಂತೆ ಸರ್ಕಾರವನ್ನು ಕೇಳಿಕೊಳ್ಳಲಾಗಿದೆ ಎಂದರು.

ತಾಲ್ಲೂಕು ಪಂಚಾಯಿತಿ  ಅಧ್ಯಕ್ಷೆ ಶಶಿಪ್ರಭಾ ಸಂಪ್ಯ ಅವರು ಮಾತನಾಡಿ ಇಂದು ಕೇಂದ್ರ ಸರ್ಕಾರ ಅಡಿಕೆ ಹಾನಿಕಾರಕ ಎಂದು ನಿಷೇಧ ಕಾಯಿದೆ ಜಾರಿಗೆ ತಂದಿರುವುದು ಜನಸಾಮಾನ್ಯರಿಗೆ ಆಘಾತ ಉಂಟು­ಮಾಡಿದೆ. ಸರ್ಕಾರ ಇದರ ಬಗ್ಗೆ ಸ್ಪಷ್ಟ ಮಾಹಿತಿ ನೀಡಿ ಅಡಿಕೆ ಕೃಷಿಕರ ಭಯವನ್ನು ದೂರ ಮಾಡಬೇಕಾಗಿದೆ ಎಂದರು.

ತಹಶೀಲ್ದಾರ್ ಎಂ.ಟಿ ಕುಳ್ಳೇಗೌಡ ಅವರು ಪ್ರಾಸ್ತಾ­ವಿಕವಾಗಿ ಮಾತನಾಡಿ, ತಾಲ್ಲೂಕಿನ 20 ಗ್ರಾಮ­ಗಳಲ್ಲಿರುವ ಅಡಿಕೆ ಕೊಳೆರೋಗದಿಂದ ನಷ್ಟಕ್ಕೊಳಗಾಗಿದ್ದ 363 ಸಂತ್ರಸ್ತರಿಗೆ ಸುಮಾರು 17,38,761ರಷ್ಟು ಪರಿಹಾರ ಧನದ ಚೆಕ್ಕನ್ನು ನೀಡಲಾಗುತ್ತಿದೆ ಎಂದರು. ರಾಷ್ಟ್ರೀಯ ಕುಟುಂಬ ಯೋಜನೆ­ಯಡಿ 9 ಮಂದಿಗೆ ಧನ ಸಹಾಯ ಚೆಕ್ ಮತ್ತು ಕ್ಯಾನ್ಸರ್ ರೋಗದಿಂದ ಬಳಲುತ್ತಿರುವ ಉಪ್ಪಿ­ನಂಗಡಿಯ ಹೈದರ್ ಎಂಬವರಿಗೆ ಮುಖ್ಯಮಂತ್ರಿ ನಿಧಿಯಿಂದ ರೂ 50 ಮೊತ್ತದ ಚೆಕ್ ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.