ADVERTISEMENT

ಬಿಸಿಯೂಟ ನೌಕರರ ಧರಣಿ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2011, 8:50 IST
Last Updated 4 ಫೆಬ್ರುವರಿ 2011, 8:50 IST

ಮಂಗಳೂರು/ಉಡುಪಿ:  ಬಿಸಿಯೂಟ ನೌಕರಿ ಕಾಯಂ ಮಾಡಬೇಕು, ಮಾಸಿಕ ಕನಿಷ್ಠ ವೇತನ ರೂ. 6000ಕ್ಕೆ ಏರಿಸಬೇಕು ಎಂಬುದೂ ಸೇರಿದಂತೆ 10 ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ದಕ್ಷಿಣ ಕನ್ನಡ(ಮಂಗಳೂರಿನಲ್ಲಿ) ಮತ್ತು ಉಡುಪಿ ಜಿಲ್ಲಾ ಸಮಿತಿ ಗುರುವಾರ ಪ್ರತ್ಯೇಕ ಪ್ರತಿಭಟನೆ ನಡೆಸಿದವು.

ಮಂಗಳೂರು ವರದಿ: ರಾಜ್ಯಾದ್ಯಂತ ಹೋರಾಟ ಕರೆಯನ್ವಯ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ ಜಿಲ್ಲಾ ಪಂಚಾಯಿತಿ ಎದುರು ನಡೆದ ಪ್ರತಿಭಟನೆಯಲ್ಲಿ ಸರ್ಕಾರದ ವಿರುದ್ಧ ಘೋಷಣೆಗಳು ಮೊಳಗಿದವು. ನಂತರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಮನವಿ ಪತ್ರ ಸಲ್ಲಿಸಲಾಯಿತು.

‘ಈ ಯೋಜನೆಯಲ್ಲಿ ಒಂದು ಲಕ್ಷ ಮಹಿಳೆಯರು ಕನಿಷ್ಠ ವೇತನ, ಸೇವಾ ಸೌಲಭ್ಯಗಳು ಇಲ್ಲದೇ ದಿನಕ್ಕೆ 6-7 ಗಂಟೆ ದುಡಿಯುತ್ತಿದ್ದಾರೆ. ಇತ್ತೀಚೆಗೆ ಮಕ್ಕಳ ಹಾಜರಾತಿ ನೆಪವೊಡ್ಡಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಅಡುಗೆ ಸಿಬ್ಬಂದಿಯನ್ನು ಕೈಬಿಡುವ ಪ್ರಕ್ರಿಯೆಯೂ ನಡೆದಿದೆ. ಬೇರೆ ಸಮಸ್ಯೆ ಉಂಟಾದರೆ ಅದಕ್ಕೆ ನೇರವಾಗಿ ಅಡುಗೆಯವರನ್ನು ಹೊಣೆ ಮಾಡಲಾಗುತ್ತಿದೆ’ ಎಂದು ಮನವಿಪತ್ರದಲ್ಲಿ ದೂರಲಾಗಿದೆ.

‘ಇಲಾಖೆಯ ಕಳೆದ ವರ್ಷದ ಸುತ್ತೋಲೆ ಪ್ರಕಾರ, 25 ವಿದ್ಯಾರ್ಥಿಗಳಿಗೆ ಒಬ್ಬರು, 26ರಿಂದ 100ವರೆಗೆ ಇಬ್ಬರು ಅಡುಗೆ ಸಿಬ್ಬಂದಿ ಇರಬೇಕು ಎಂದು ತಿಳಿಸಲಾಗಿದೆ. ಆದರೆ ಯೋಜನೆ ಆರಂಭವಾದ ದಿನದಿಂದ 26ರಿಂದ 70 ವಿದ್ಯಾರ್ಥಿಗಳಿಗೆ ಇಬ್ಬರು, 70ಕ್ಕಿಂತ ಮೇಲಿದ್ದರೆ ಮೂವರು ಎಂದು ಆಯ್ಕೆ ಮಾಡಿ ಕೆಲಸ ಮಾಡಿಲಾಗುತ್ತಿದೆ. ರಾಜ್ಯದಲ್ಲಿ ಹೆಚ್ಜಿನ ಶಾಲೆಗಳಲ್ಲಿ 26ರಿಂದ 100ರವರೆಗೆ ವಿದ್ಯಾರ್ಥಿಗಳಿರುತ್ತಾರೆ. ಹೀಗಾಗಿ ಹೆಚ್ಚಿನವರು ಕೆಲಸ ಕಳೆದುಕೊಳ್ಳುವ ಆತಂಕ ಎದುರಿಸುತ್ತಿದ್ದಾರೆ’ ಎಂದು ಮನವಿಯಲ್ಲಿ ಗಮನ ಸೆಳೆಯಲಾಗಿದೆ.
ಇಸ್ಕಾನ್, ಅಧಮ್ಯ ಚೇತನ ಇತರೆ ಸ್ವಯಂಸೇವಾ ಸಂಸ್ಥೆಗಳಿಗೆ ಈಗಾಗಲೇ ಕೆಲವು ಶಾಲೆಗಳಿಗೆ ಬಿಸಿಯೂಟ ಪೂರೈಸುವ ಹೊಣೆ ಹೊಂದಿದೆ. ಅವುಗಳಿಗೆ ಇನ್ನಷ್ಟು ಶಾಲೆಗಳನ್ನು ನೀಡಬಾರದು ಎಂದೂ ಪ್ರತಿಭಟನಾಕಾರರು ಆಗ್ರಹಿಸಿದರು.

ಕರ್ನಾಟಕ ರಾಜ್ಯ ಪ್ರಾಂತ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಯಾದವ ಶೆಟ್ಟಿ, ಸಿಐಟಿಯು ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಸಂತ ಆಚಾರಿ, ಜಿಲ್ಲಾ ಮುಖಂಡ ಬಿ.ಎಂ.ಭಟ್, ಜಿಲ್ಲಾ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್, ಎಲ್.ಟಿ.ಸುವರ್ಣ, ಅಕ್ಷರ ದಾಸೋಹ ನೌಕರರ ಸಂಘದ ಜಿಲ್ಲಾ ಸಮಿತಿಯ ಗಿರಿಜಾ ವಾಮಂಜೂರು ಮತ್ತಿತರರು ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದರು. ಶಶಿಕಲಾ ಎಡಪದವು, ವಸಂತಿ ಕುಪ್ಪೆಪದವು, ಕಾರ್ಯದರ್ಶಿ ಯಶೋಧಾ,  ಶಾಂತಾ ಮುತ್ತೂರು ಇದ್ದರು.

ಉಡುಪಿ ವರದಿ: ಬಿಸಿಯೂಟದ ನೌಕರರನ್ನು ಕಾಯಂಗೊಳಿಸಬೇಕು, ಅಗತ್ಯ ಸೇವಾ ಸೌಲಭ್ಯ ನೀಡಬೇಕು, ಪ್ರತಿ ತಿಂಗಳ ಮೊದಲ ವಾರ ವೇತನ ನೀಡಬೇಕು, ಇಸ್ಕಾನ್, ಅದಮ್ಯಚೇತನ ಮತ್ತು ಖಾಸಗಿ ಸ್ವಯಂ ಸೇವಾ ಸಂಸ್ಥೆಗಳಿಗೆ ಈ ಯೋಜನೆ ನೀಡುವುದಕ್ಕೆ ವಿರೋಧ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯ ಅಕ್ಷರದಾಸೋಹ ನೌಕರರ ಸಂಘದ ಸದಸ್ಯರು ಉಡುಪಿ ಜಿ.ಪಂ.ಎದುರು ಗುರುವಾರ ಪ್ರತಿಭಟನೆ ನಡೆಸಿದರು.

ಸಂಘದ ಅಧ್ಯಕ್ಷ ದಾಸ –ಭಂಡಾರಿ ಮಾತನಾಡಿ, ರಾಜ್ಯದಲ್ಲಿ 20 ಸಾವಿರಕ್ಕೂ ಮಿಕ್ಕಿ ಮಹಿಳೆಯರ ಉದ್ಯೋಗಕ್ಕೆ ಧಕ್ಕೆ ತಂದಿರುವ –ಇಸ್ಕಾನ್ ಸಂಸ್ಥೆಗೆ ವಿಧಾನ–ಸಭೆಯ ಜಂಟಿ ಅಧಿವೇಶನ ಸಮಿತಿ ಏಕಮುಖವಾಗಿ ಶುದ್ಧಹಸ್ತ–ವಾಗಿದೆ ಎಂದು ವರದಿ ನೀಡಿದ್ದನ್ನು ನಾವು ವಿರೋಧಿಸುತ್ತೇವೆ, ಇದರಿಂದಾಗಿ ರಾಜ್ಯದ ಇನ್ನಷ್ಟು ಶಾಲೆಗಳಿಗೆ ಇಸ್ಕಾನ್ ಊಟ ವಿಸ್ತರಿಸುವ ಅಪಾಯವಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಇಸ್ಕಾನ್ ಅಥವಾ ಇತರ ಖಾಸಗಿ ಸಂಸ್ಥೆಗಳಿಗೆ ಊಟ ನೀಡುವ ವ್ಯವಸ್ಥೆ ನೀಡಬಾರದು ಎಂದು ಆಗ್ರಹಿಸಿದರು.
ಅಕ್ಷರ ದಾಸೋಹ ಯೋಜನೆಯಡಿಯಲ್ಲಿ ರಾಜ್ಯದಲ್ಲಿ ಸುಮಾರು ಒಂದು ಲಕ್ಷ ಮಹಿಳೆಯರು ಕನಿಷ್ಠ ವೇತನ, ಬೇರೆ ಯಾವುದೇ ಸೇವಾ ಸೌಲಭ್ಯಗಳು ಇಲ್ಲದೇ ದಿನದ 6-7 ಗಂಟೆ ದುಡಿಯುತ್ತಿದ್ದಾರೆ. ಅಡುಗೆ ಮಾಡುವಾಗ ಬೆಂಕಿ ಹೊತ್ತಿಕೊಂಡು, ಇತ್ಯಾದಿ ಘಟನೆಗಳು ನಡೆದು ಸಾವಿಗೀಡಾಗಿದ್ದಾರೆ. ಆದರೆ ಇಂತಹ ಸಮಸ್ಯೆಗಳಲ್ಲಿ ಅವರಿಗೆ ಸೂಕ್ತ ಪರಿಹಾರ ಸಿಕ್ಕಿಲ್ಲ ಎಂದು ದೂರಿದರು. 

ಮಕ್ಕಳ ಹಾಜರಾತಿ ನೆಪವೊಡ್ಡಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಅಡುಗೆ ಸಿಬ್ಬಂದಿ ಕೈಬಿಡುವ ಪ್ರಕ್ರಿಯೆ ನಡೆದಿದೆ. ಬಿಸಿಯೂಟದಲ್ಲಿ ಬೇರೆ ಬೇರೆ ಯಾವುದೇ ತೊಂದರೆಗಳು ಉಂಟಾದರೆ ನೇರವಾಗಿ ಅಡುಗೆಯವರ ಮೇಲೆ ಆರೋಪ ಹೊರಿಸಿ ಏಕಾಏಕಿ ಕೆಲಸದಿಂದ ತೆಗೆಯುವ ಪ್ರವೃತ್ತಿ ಹೆಚ್ಚಿದೆ. ಅಲ್ಲದೇ ಕೆಲವೆಡೆ ಇಲ್ಲಸಲ್ಲದ ಆರೋಪ ಹೊರಿಸಲಾಗುತ್ತಿದೆ. ಏಡ್ಸ್ ಇದೆ ಎನ್ನುವುದು, ಹಾವು ಕಚ್ಚಿ ವಿಷ–ವಾಗಿದೆ ಎಂದು ಕೆಲಸದಿಂದ ತೆಗೆಯುವುದು, ಕಡಿಮೆ ಗುಣಮಟ್ಟದ ಅಕ್ಕಿ ನೀಡಿ ಅಡುಗೆ ಮಾಡಿ ಹಾಕು ಎಂದು ಸೂಚಿಸುವುದು, ಹೀಗೆ ಹತ್ತಾರು ಕಿರುಕುಳವನ್ನು ಮಹಿಳೆಯರಿಗೆ ನೀಡಲಾಗುತ್ತದೆ. ಇವೆಲ್ಲವುಗಳ ವಿರುದ್ಧ ಸಂಘ ಹೋರಾಟ ಮಾಡುತ್ತಿದ್ದು ಕೂಡಲೇ ಅಗತ್ಯ ಸೇವಾ ಸೌಲಭ್ಯ ಕಲ್ಪಿಸಿ ಹಾಜರಾತಿ ಆಧಾರದಲ್ಲಿ ಕೆಲಸದಿಂದ ತೆಗೆಯುವ ಪ್ರಕ್ರಿಯೆ ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಕಾರ್ಯದರ್ಶಿ ರಮೇಶ್ ಭಂಡಾರಿ, ಅಕ್ಷರ ದಾಸೋಹದ ಜಯಂತಿ, ಶಶಿಕಲಾ, ಶಾರದಾ, ಲಕ್ಷ್ಮಿ ನಂದಕುಮಾರ್, ಉಷಾ, ಮಾಲತಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.