ADVERTISEMENT

ಬಿಹಾರ ಶಾಸಕರ ದ.ಕ. ಅಧ್ಯಯನ ಯಾತ್ರೆ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2011, 8:30 IST
Last Updated 9 ಸೆಪ್ಟೆಂಬರ್ 2011, 8:30 IST

ಮಂಗಳೂರು: ಒಂಬತ್ತು ಶಾಸಕರನ್ನೊಳಗೊಂಡ ಬಿಹಾರದ ಜಿಲ್ಲಾ ಪರಿಷತ್ ಹಾಗೂ ಪಂಚಾಯತ್ ರಾಜ್ ಸಮಿತಿಯ 20 ಸದಸ್ಯರ ತಂಡ ದಕ್ಷಿಣ ಕನ್ನಡ  ಜಿಲ್ಲೆಯಲ್ಲಿ ಗುರುವಾರ ಪಂಚಾಯತ್ ರಾಜ್ ವ್ಯವಸ್ಥೆಯ ಅಧ್ಯಯನ `ಯಾತ್ರೆ~ ನಡೆಸಿತು.

ಶಾಸಕ ಆನಂದಿ ಪ್ರಸಾದ್ ಯಾಡ್ನೆ ನೇತೃತ್ವದ ತಂಡ ಮೈಸೂರಿನಿಂದ ರೈಲಿನ ಮೂಲಕ ನಗರಕ್ಕೆ ಬಂದಿಳಿಯಿತು. ನಗರದ ಸರ್ಕಿಟ್ ಹೌಸ್‌ನಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎನ್.ವಿಜಯಪ್ರಕಾಶ್ ಅವರೊಂದಿಗೆ ಒಂದು ಗಂಟೆ ಕಾಲ ಸಂವಾದ ನಡೆಸಿತು.

ಆನಂದಿ ಪ್ರಸಾದ್ ಯಾಡ್ನೆ ಮಾತನಾಡಿ, ಕರ್ನಾಟಕ, ಗೋವಾ, ಕೇರಳದಲ್ಲಿ ತಂಡ ಪ್ರವಾಸ ಕೈಗೊಳ್ಳುತ್ತಿದೆ. ತಂಡದಲ್ಲಿ ಬಿಜೆಪಿ, ಆರ್‌ಜೆಡಿ, ಕಾಂಗ್ರೆಸ್ ಶಾಸಕರು ಇದ್ದಾರೆ. ಬೆಂಗಳೂರು ಹಾಗೂ ಮೈಸೂರಿನಲ್ಲಿ ಅಧ್ಯಯನ ನಡೆಸಿದ್ದು, ಇಲ್ಲಿಂದ ತಿರುವನಂತಪುರಕ್ಕೆ ತೆರಳುತ್ತೇವೆ. ಬೇರೆ ಬೇರೆ ಸಮಿತಿಗಳು ಇತರ ರಾಜ್ಯಗಳಿಗೂ ಪ್ರವಾಸ ಕೈಗೊಂಡಿವೆ ಎಂದರು.

`ಪಂಚಾಯತ್ ರಾಜ್ ವ್ಯವಸ್ಥೆ ಬಗ್ಗೆ ಅಧ್ಯಯನ ನಡೆಸಲಾಗುತ್ತಿದೆ. ಇಲ್ಲಿನ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳ ಸಾಧನೆ, ಯಶಸ್ಸನ್ನು ಅಧ್ಯಯನ ನಡೆಸಲಾಗುತ್ತಿದೆ. ಬಳಿಕ ಬಿಹಾರದ ಮುಖ್ಯಮಂತ್ರಿ ಅವರಿಗೆ ವರದಿ ಸಲ್ಲಿಸಲಾಗುವುದು. ಈ ಮಾದರಿ ಅನುಸರಿಸಲು ವಿಧಾನಸಭೆಯಲ್ಲೂ ಚರ್ಚಿಸಲಾಗುವುದು ಎಂದರು.

ಬಿಹಾರದಲ್ಲಿ ಈಗ ಸಾಕ್ಷರತೆ ಪ್ರಮಾಣ ಶೇ. 43 ಇದ್ದು, ನಿತೀಶ್ ಕುಮಾರ್ ಮುಖ್ಯಮಂತ್ರಿಯಾದ ಬಳಿಕ ಅಪರಾಧ ಪ್ರಮಾಣ ಗಣನೀಯವಾಗಿ ತಗ್ಗಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸಿಇಒ ವಿಜಯಪ್ರಕಾಶ್ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ, ಪಂಚತಂತ್ರ, ಸರ್ವ ಶಿಕ್ಷಣ ಅಭಿಯಾನ, ನೀರು ಪೂರೈಕೆ, ಸ್ವಚ್ಛತೆಯಲ್ಲಿ ಜಿಲ್ಲೆಯ ಸಾಧನೆ ವಿವರಿಸಿ, ಶಿಕ್ಷಣ ಹಾಗೂ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಜಿಲ್ಲೆ ಪ್ರಸಿದ್ಧ. ಜಿಲ್ಲೆಯ ಸಾಕ್ಷರತೆ ಪ್ರಮಾಣ ಶೇ. 89. ಮಾನವ ಸಂಪನ್ಮೂಲ ಅಭಿವೃದ್ಧಿ ಸೂಚ್ಯಂಕದಲ್ಲಿ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ ಸ್ಥಾನದಲ್ಲಿದೆ ಎಂದರು.

ಜಿಲ್ಲೆಯ 203 ಗ್ರಾಮ ಪಂಚಾಯಿತಿಗಳು ನಿರ್ಮಲ ಗ್ರಾಮ ಪುರಸ್ಕಾರ ಗಳಿಸಿವೆ. ಐದು ತಾಲ್ಲೂಕುಗಳಲ್ಲಿ ಮೂರು ತಾಲ್ಲೂಕುಗಳು ಪ್ರಶಸ್ತಿ ಗಳಿಸಿವೆ. ಜಿಲ್ಲೆಗೂ ಪ್ರಶಸ್ತಿ ದೊರಕಿದೆ ಎಂದು ವಿವರಿಸಿದ ಅವರು, ಪ್ಲಾಸ್ಟಿಕ್ ನಿಷೇಧಕ್ಕೂ ಕ್ರಮ ಕೈಗೊಳ್ಳಲಾಗುತ್ತಿದೆ. ಕೆಲವು ಗ್ರಾಮಗಳ `ಪ್ಲಾಸ್ಟಿಕ್ ಸೌಧ~ ಯಶಸ್ವಿ ಪ್ರಯೋಗ ಎಂದರು.

ತಂಡದಲ್ಲಿ ಶಾಸಕರಾದ ಮೋತಿಲಾಲ್ ಪ್ರಸಾದ್, ರಾಮ್‌ಸೂರತ್ ಪ್ರಸಾದ್ ಯಾಡ್ನೆ,  ವಿಜಯ ಕುಮಾರ್ ಸಿಂಹ, ಮಂಜೂ ವರ್ಮ, ಅನಿರುದ್ಧ್ ಕುಮಾರ್ ಯಾಡ್ನೆ, ಆಫಕ್ ಆಲಂ, ಭೂಮೇಂದ್ರ ನಾರಾಯಣ ಸಿಂಗ್, ಮನೋಜ್ ಕುಮಾರ್ ಸಿಂಹ ಇದ್ದರು.

ದ.ಕ. ಜಿ.ಪಂ. ಉಪ ಕಾರ್ಯದರ್ಶಿ ಶಿವರಾಮೇಗೌಡ, ಮುಖ್ಯ ಯೋಜನಾಧಿಕಾರಿ ಮೊಹಮ್ಮದ್ ನಜೀರ್ ಇದ್ದರು. ಬಳಿಕ ತಂಡ ಕಟೀಲು, ಕಲ್ಲಮುಂಡ್ಕೂರಿಗೆ ಭೇಟಿ ನೀಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.