ADVERTISEMENT

ಬುರ್ಖಾ ವಿವಾದ: ಆಡಳಿತ ಮಂಡಳಿ ಕ್ರಮ ಸರಿಯಲ್ಲ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2012, 6:20 IST
Last Updated 1 ಅಕ್ಟೋಬರ್ 2012, 6:20 IST

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತದಲ್ಲಿರುವ ವಿದ್ಯಾಸಂಸ್ಥೆಗಳ ಆವರಣದ ಒಳಗೆ ಬುರ್ಖಾ ಧಾರಣೆ ನಿಷೇಧ ಎಂಬ ಆದೇಶವನ್ನು ಆಡಳಿತ ಮಂಡಳಿಯು ಹೊರಡಿಸಿದ್ದುದರಿಂದ ಬುರ್ಖಾಧಾರಿ ವಿದ್ಯಾರ್ಥಿನಿಯರು ಮಾರ್ಗದ ಬದಿಯಲ್ಲಿಯೇ ಬುರ್ಖಾ ಕಳಚಿ ಹೋಗುವ ದಯನೀಯ ಸ್ಥಿತಿ ಉಂಟಾಗಿದೆ ಎಂದು ಜಿ.ಪಂ. ಮಾಜಿ ಸದಸ್ಯ ಭರತ್ ಮುಂಡೋಡಿ ಹೇಳಿದರು.

ಸುಬ್ರಹ್ಮಣ್ಯದ ವೆಲಂಕಣಿ ಸಭಾಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಲೇಜಿನ ಪ್ರವೇಶ ಪ್ರಕ್ರಿಯೆಯಲ್ಲಿ ಆಡಳಿತ ಮಂಡಳಿಯ ಹಸ್ತಕ್ಷೇಪ, ಸಂಘ ಪರಿವಾರದವರಿಗೆ ಆದ್ಯತೆ, ವಿದ್ಯಾಸಂಸ್ಥೆಯ ಆವರಣದೊಳಗೆ ಬುರ್ಖಾ ನಿಷೇಧ ಇವು ದೇಶದ ಸಾರ್ವತ್ರಿಕ ಶಿಕ್ಷಣ ನೀತಿಗೆ ವಿರುದ್ಧವಾಗಿದೆ ಎಂದರು.

ವಿದ್ಯಾರ್ಥಿಗಳು ಹಾಗೂ ಪೋಷಕರನ್ನು ಕರೆಸಿ ಮಕ್ಕಳಿಗೆ ಸಂಘ ಪರಿವಾರದ ಮಾನ್ಯತೆ ಇದ್ದರೆ ಮಾತ್ರ ಪ್ರವೇಶ ನೀಡಲಾಗುವುದು ಎಂದಿರುವುದು ಖಂಡನೀಯ. ಅಲ್ಲದೆ ಇದೀಗ ಪದವಿ ಕಾಲೇಜಿಗೆ ಸೇರ್ಪಡೆಗೊಂಡಿರುವ ಸುಮಾರು ಹದಿನೈದರಷ್ಟು ವಿದ್ಯಾರ್ಥಿನಿಯರು ಈ ಹಿಂದೆ ಸಾಂಪ್ರದಾಯಿಕ ಬುರ್ಕಾವನ್ನು ಕಾಲೇಜಿನ ಮಹಿಳಾ ವಿಶ್ರಾಂತಿ ಕೊಠಡಿಯಲ್ಲಿ ಬದಲಾಯಿಸಿ ಉಳಿದ ವಿದ್ಯಾರ್ಥಿನಿಯರಂತೆ ಸಮವಸ್ತ್ರ ಧರಿಸಿ ಕಾಲೇಜಿನ ಪಠ್ಯ ಹಾಗೂ ಪಠ್ಯೇತರ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದರು. ಆದರೆ ಇದೀಗ ಕಾಲೇಜಿನ ಆವರಣಕ್ಕೂ ಬುರ್ಖಾ ಧರಿಸಿ ಬರುವುದು ನಿಷೇಧ ಎಂಬ ಆದೇಶ ಹೊರಡಿಸಿರುವುದು ಅಮಾನವೀಯ ಎಂದು ಹೇಳಿದರು.

ಕ್ಷೇತ್ರದ ಜಾತ್ರಾ ಸಮಯದಲ್ಲಿ ಸಾಂಪ್ರದಾಯಿಕವಾಗಿ ನಡೆಯುತ್ತಾ ಬಂದಿರುವ ಕುಲ್ಕುಂದ ಜಾನುವಾರು ಜಾತ್ರೆಯನ್ನು ದೇವಸ್ಥಾನದ ವತಿಯಿಂದ ನಡೆಸಿ ಹಿಂದೂ ಸಂಸ್ಕೃತಿ ಮತ್ತು ದೇವಸ್ಥಾನದ ಪಾವಿತ್ರ್ಯತೆಯನ್ನು ಉಳಿಸುವಂತೆಯೂ ಅವರು ಆಗ್ರಹಿಸಿದರು.

ಈ ಮೇಲಿನ ಎಲ್ಲಾ ಬೇಡಿಕೆಗಳಿಗೆ 15 ದಿನದ ಒಳಗೆ ಸರ್ಕಾರ ಸ್ಪಂದಿಸದೇ ಇದ್ದರೆ ಪಕ್ಷಾತೀತವಾಗಿ ಪ್ರತಿಭಟನೆ ಮಾಡಲಿದ್ದೇವೆ ಎಂದು ಹೇಳಿದರು.

ಸುಳ್ಯ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಜಿ.ಪಂ.ಸದಸ್ಯ ಕೆ.ಎಸ್.ದೇವರಾಜ್, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಪಿ.ಸಿ. ಜಯರಾಂ,  ಇದ್ದರು.

ಆಡಳಿತ ಮಂಡಳಿ ಪ್ರತಿಕ್ರಿಯೆ: ದೇವಸ್ಥಾನದ ವಠಾರ ಹಾಗೂ ದೇವಳ ನಡೆಸುವ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ವಿಶೇಷವಾಗಿ ವಿದ್ಯಾರ್ಥಿಗಳೆಲ್ಲಾ ಒಂದೇ ಎನ್ನುವ ಭಾವನೆ ರೂಪಿಸುವ ದೃಷ್ಟಿಯಿಂದ ಈ ಸಮವಸ್ತ್ರ ಅಳವಡಿಸಲಾಗಿದೆ. ಅದನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸುವುದು ಒಳ್ಳೆಯದು. ಇದರಲ್ಲಿ ಈಗ ಕೆಲವೊಂದು ರಾಜಕೀಯ ಶಕ್ತಿಗಳು ಅನಗತ್ಯವಾಗಿ ಕ್ಷೇತ್ರದ ಶಾಂತಿಯನ್ನು ಹಾಳು ಮಾಡಲು ಯತ್ನಿಸುತ್ತಿದ್ದಾರೆ ಎಂದು ಕಾಲೇಜಿನ ಆಡಳಿತ ಮಂಡಳಿಯಕೃಷ್ಣಪ್ರಸಾದ್ ಮಡ್ತಿಲ ಪ್ರತಿಕ್ರಿಯೆ ನೀಡಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.