ADVERTISEMENT

ಬೆಂಗಳೂರಿನಲ್ಲಿ ಇಸ್ರೇಲ್ ರಾಯಭಾರ ಕಚೇರಿಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2012, 7:55 IST
Last Updated 3 ಮಾರ್ಚ್ 2012, 7:55 IST

ಮಂಗಳೂರು: ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಶೋಷಿತರ, ದೀನ ದಲಿತರ ಉದ್ಧಾರಕ್ಕೆಂದೇ ಜನ್ಮತಳೆದ ಪಕ್ಷ. ಪಕ್ಷವನ್ನು ಹುಟ್ಟುಹಾಕಿದ್ದು ಮುಸ್ಲಿಂ ನಾಯಕರಾಗಿದ್ದರೂ, ಪಕ್ಷದ ಸಿದ್ಧಾಂತ, ಅದು ಹಾಕಿಕೊಂಡಿರುವ ಕಾರ್ಯಸೂಚಿಗಳನ್ನು ನೋಡಿಕೊಂಡು ಜನರು ಈ ಪಕ್ಷ ಬೆಂಬಲಿಸಬೇಕು ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಇ.ಅಬೂಬಕ್ಕರ್ ಮನವಿ ಮಾಡಿದರು.

ಪಕ್ಷದ ಜಿಲ್ಲಾ ಘಟಕದ ವತಿಯಿಂದ ಶುಕ್ರವಾರ ನಗರದ ನೆಹರೂ ಮೈದಾನದಲ್ಲಿ ನಡೆದ `ಅಧಿಕಾರದೆಡೆಗೆ ಜನರ ನಡಿಗೆ~ ಹೆಸರಿನ ರಾಜಕೀಯ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ದೇಶದಲ್ಲಿ ಇದುವರೆಗೆ ವಂಶಪಾರಂಪರ್ಯ ಆಡಳಿತ ಬೆಳೆದು ಬಂದಿದೆ. ಬಿಜೆಪಿಯ ಬ್ರಾಹ್ಮಣ್ಯ ಆಡಳಿತ, ಇತರ ಪಕ್ಷಗಳ ಏಕಾಧಿಪತ್ಯ ಇವೆಲ್ಲವೂ ದೇಶದಲ್ಲಿ ಸಾಮಾಜಿಕ ನ್ಯಾಯ ಸ್ಥಾಪನೆಗೆ ಮುಳುವಾಗಿದೆ. ಎಸ್‌ಡಿಪಿಐ ಎಲ್ಲ ಜನಸಮುದಾಯವನ್ನು ಒಳಗೊಂಡ ಪಕ್ಷವಾಗಿದೆ. ಜನರ ಕೈಗೆ ಅಧಿಕಾರ ತಲುಪಿಸುವ ಹೊಣೆಗಾರಿಕೆಯನ್ನು ಪಕ್ಷ ಹೊತ್ತುಕೊಂಡಿದೆ ಎಂದರು.

ಬಾಬರಿ ಮಸೀದಿ ಧ್ವಂಸ ಮಾಡಿದ್ದು ಆರ್‌ಎಸ್‌ಎಸ್, ಅದಕ್ಕೆ ಬೆಂಬಲ ನೀಡಿದ್ದು ಕಾಂಗ್ರೆಸ್. ಭಯೋತ್ಪಾದನೆ ವಿಚಾರದಲ್ಲೂ ಇಂತಹದೇ ಪ್ರಸಂಗಗಳು ನಡೆಯುತ್ತಿವೆ. ಇಂತಹ ಕಪಟ ರಾಜಕೀಯಕ್ಕೆ ಅಂತ್ಯ ಹಾಡಬೇಕಾಗಿದೆ. ಈ ದೇಶದಲ್ಲಿ  ಖಾಕಿ, ಖಾದಿ, ಖಾವಿಗಳು ಸಂಯೋಜನೆಗೊಂಡು ಅಧಿಕಾರ ಚಲಾಯಿಸುತ್ತಿವೆ.

ಇದರಿಂದ ಜನಸಾಮಾನ್ಯರನ್ನು ವಿಮೋಚನೆಗೊಳಿಸಿ ಹಸಿವು ಮುಕ್ತ, ಭಯಮುಕ್ತ ಸಮಾಜವನ್ನು  ಸ್ಥಾಪಿಸಬೇಕಾಗಿದೆ ಎಂದು ಅಬೂಬಕ್ಕರ್ ಹೇಳಿದರು.

ಬೆಂಗಳೂರಿನಲ್ಲಿ ಇಸ್ರೇಲ್ ರಾಯಭಾರ ಕಚೇರಿ ಸ್ಥಾಪಿಸುವ ಪ್ರಸ್ತಾವವನ್ನು ತೀವ್ರವಾಗಿ ವಿರೋಧಿಸಿದ ಅವರು, ಸೌದಿ ಅರೇಬಿಯಾದ ರಾಯಭಾರ ಕಚೇರಿಯನ್ನಾದರೂ ಬೆಂಗಳೂರಿನಲ್ಲಿ ತೆರೆಯುತ್ತಿದ್ದರೆ ರಾಜ್ಯದ ಜನರಿಗೆ ಪ್ರಯೋಜನವಾಗುತ್ತಿತ್ತು ಎಂದರು.

ಸಿಂದಗಿಯಲ್ಲಿ ಪಾಕಿಸ್ತಾನ ಧ್ವಜ ಹಾರಿಸಿದ ಸಂಘ ಪರಿವಾರದ ಕೃತ್ಯ ಉಲ್ಲೇಖಿಸಿದ ಅವರು, ಎಲ್.ಕೆ.ಅಡ್ವಾಣಿ ಅವರು ಮೂಲತಃ ಪಾಕಿಸ್ತಾನದವರು. ಅವರು ಪಾಕಿಸ್ತಾನದ ಧ್ವಜವಲ್ಲದೆ, ಭಾರತದ ಧ್ವಜ ಹಾರಿಸಲು ಸಾಧ್ಯವೇ ಎಂದು ಕುಟುಕಿದರು.

ದಿಕ್ಸೂಚಿ ಭಾಷಣ ಮಾಡಿದ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಅಬ್ದುಲ್ ಮಜೀದ್ ಕೊಡ್ಲಿಪೇಟೆ, ಈ ದೇಶದ ಪ್ರತಿಯೊಬ್ಬ ನಾಗರಿಕನಿಗೆ ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯವನ್ನು ಖಾತರಿಪಡಿಸಬೇಕು ಎಂದು ಸಂವಿಧಾನವು ಸಾರುತ್ತದೆ. ಪ್ರಜೆಗಳೇ ಸರ್ವವನ್ನೂ ನಿರ್ಧರಿಸುವ, ನಿಯಂತ್ರಿಸುವ ಪ್ರಜಾಪ್ರಭುತ್ವ ವ್ಯವಸ್ಥೆ ಇರುವ ಭಾರತದಲ್ಲಿ ಜನಸಾಮಾನ್ಯನ ಪರಿಸ್ಥಿತಿ ಶೋಚನೀಯವಾಗಿದೆ ಎಂದರು.

ಪೌಷ್ಠಿಕ ಆಹಾರ ಕೊರತೆ, ಶಿಶುಮರಣದಂತಹ ವಿಚಾರಗಳಲ್ಲಿ ಪ್ರಧಾನಿ ಅವರು ಇತ್ತೀಚೆಗೆ ವರದಿಯೊಂದನ್ನು ಬಿಡುಗಡೆಗೊಳಿಸಿ ಇದು ದೇಶದ ಅವಮಾನ ಎಂದಿದ್ದರು. ಇದು ಕಾಂಗ್ರೆಸ್‌ಗೆ ಅವಮಾನ. ಈ ದೇಶದಲ್ಲಿ 60 ವರ್ಷಗಳ ಕಾಲ ಆಡಳಿತ ನಡೆಸಿರುವುದು ಕಾಂಗ್ರೆಸ್. ಇಂತಹ ಅವಮಾನಕಾರಿ ವರದಿಗಳ ಹೊಣೆಯನ್ನು ಕಾಂಗ್ರೆಸ್ ಪಕ್ಷ ಹೊತ್ತುಕೊಳ್ಳಬೇಕಾಗಿದೆ ಎಂದರು.

ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಅಬ್ದುಲ್ ಜಲೀಲ್ ಅಧ್ಯಕ್ಷತೆ ವಹಿಸಿದ್ದರು. ಎಸ್‌ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಫಿಜ್ ಮನ್ಸೂರ್ ಅಲಿ ಖಾನ್, ತಮಿಳುನಾಡಿನ ಸಂಸದ ತೋಳ್ ತಿರುಮವಲವನ್, ಪಾಪ್ಯುಲರ್ ಫ್ರಂಟ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಎಂ.ಶರೀಫ್, ಪಿಎಫ್‌ಐನ ರಿಯಾಝ್ ಪಾಶ, ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ಹೇಮಲತಾ, ರಾಜ್ಯ ಉಪಾಧ್ಯಕ್ಷ ಅಬ್ದುಲ್ ಲತೀಫ್, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಅಫ್ಸರ್ ಪಾಶ, ಅಬ್ದುಲ್ ಹನ್ನಾನ್ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.