ADVERTISEMENT

ಬೆಳ್ತಂಗಡಿ: ಜಿ.ಪಂ ಅಧ್ಯಕ್ಷೆಗೆ ಸನ್ಮಾನ.ಸರ್ಕಾರಿ ನೌಕರರಿಗೆ ಸಾಮಾಜಿಕ ಬದ್ಧತೆ ಇರಲಿ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2011, 11:10 IST
Last Updated 18 ಫೆಬ್ರುವರಿ 2011, 11:10 IST

ಬೆಳ್ತಂಗಡಿ: ಸರ್ಕಾರಿ ನೌಕರರು ಮತ್ತು ಜನಪ್ರತಿನಿಧಿಗಳು ಸಹಕಾರದೊಂದಿಗೆ ಮತ್ತು ಬದ್ಧತೆಯಿಂದ ಕರ್ತವ್ಯ ನಿರ್ವಹಿಸಬೇಕು’ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಕೆ.ಟಿ ಶೈಲಜಾ ಭಟ್ ಹೇಳಿದರು.ಬೆಳ್ತಂಗಡಿಯಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಗುರುವಾರ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಮೂಲ ಅವಶ್ಯಕತೆಗಳಾದ ಕುಡಿಯುವ ನೀರು, ರಸ್ತೆ, ವಿದ್ಯುತ್, ಆರೋಗ್ಯ, ಶಿಕ್ಷಣ ಮೊದಲಾದ ಸೌಲಭ್ಯಗಳನ್ನು ಒದಗಿಸಿ ದಕ್ಷಿಣ ಕನ್ನಡವನ್ನು ರಾಜ್ಯದ ಮಾದರಿ ಜಿಲ್ಲೆಯಾಗಿ ರೂಪಿಸಲಾಗುವುದು. ಆದರೆ ಇದರಲ್ಲಿ ಯಶಸ್ವಿಯಾಗಬೇಕಾದರೆ ಸರ್ಕಾರಿ ನೌಕರರು ಸಾಮಾಜಿಕ ಬದ್ಧತೆಯಿಂದ ಕೆಲಸ ಮಾಡಬೇಕು’ ಎಂದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಧನಲಕ್ಷ್ಮೀ ಜನಾರ್ದನ ಮತ್ತು  ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಮಮತಾ ಎಂ.ಶೆಟ್ಟಿ ಸನ್ಮಾನಕ್ಕೆ ಕೃತಜ್ಞತೆ ವ್ಯಕ್ತ ಪಡಿಸಿ ತಮಗೆ ಸಿಕ್ಕಿದ ಅವಕಾಶದ ಸದುಪಯೋಗ ಪಡೆದು ಜನಸೇವೆ ಮಾಡುವುದಾಗಿ ಭರವಸೆ ನೀಡಿದರು. ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿಆಯ್ಕೆಯಾದ ಎಲ್ಲಾ ಸದಸ್ಯರನ್ನು ಅಭಿನಂದಿಸಲಾಯಿತು.

ಶೇ.50ರಷ್ಟು ಹುದ್ದೆ ಖಾಲಿ: ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಡಾ. ಕೆ.ಜಯಕೀರ್ತಿ ಜೈನ್ ಮಾತನಾಡಿ ‘ತಾಲ್ಲೂಕಿನಲ್ಲಿ ಎಲ್ಲಾ ಇಲಾಖೆಗಳಲ್ಲಿ ಶೇ. 50 ರಷ್ಟು ಹುದ್ದೆಗಳು ಖಾಲಿ ಇದ್ದು ಸರ್ಕಾರಿ ಯೋಜನೆಗಳ ಅನುಷ್ಠಾನಕ್ಕೆ ಅಡಚಣೆಯಾಗುತ್ತಿದೆ. ಆದಷ್ಟು ಶೀಘ್ರ ಸರ್ಕಾರ ಸಿಬ್ಬಂದಿ ನೇಮಕಾತಿ ಮಾಡಬೇಕು’ ಎಂದು ಒತ್ತಾಯಿಸಿದರು.

ಜನಪ್ರತಿನಿಧಿಗಳನ್ನು ಸನ್ಮಾನಿಸಿ ಅಭಿನಂದಿಸಿದ ಪುತ್ತೂರಿನ ಸಹಾಯಕ ಕಮೀಶನರ್ ಡಾ.ಕೆ. ಹರೀಶ್ ಕುಮಾರ್ ಮಾತನಾಡಿ, ಅಧಿಕಾರ ವಿಕೇಂದ್ರೀಕರಣದ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಪೂರಕವಾಗಿ ಕೆಲಸ ಮಾಡಬೇಕು. ಸೌಜನ್ಯ ಮತ್ತು ಸರಳತೆಯಿಂದ ಜನರ ಸೇವೆ ಮಾಡಬೇಕು ಎಂದು ಅವರು ಸಲಹೆ ನೀಡಿದರು. ಪ್ರೊಬೇಶನರಿ ಎ.ಸಿ ವಿಜಯ್, ತಹಸೀಲ್ದಾರ್ ಎಂ.ಕೆ ಪ್ರಮೀಳಾ ಮತ್ತು ತಾಲ್ಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸದಾಶಿವ ರಾವ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.