ADVERTISEMENT

ಬೈರಗುರಿ: ಪತ್ನಿ ಹಂತಕನಿಗೆ ಅಜೀವ ಕಾರಾಗೃಹ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2017, 6:52 IST
Last Updated 22 ಅಕ್ಟೋಬರ್ 2017, 6:52 IST

ಪುತ್ತೂರು: ಕುಡಿತಕ್ಕೆ ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ಪತ್ನಿಯ ಜತೆ ಜಗಳವಾಡಿ, ಆಕೆಯನ್ನು ಕೊಲೆ ಮಾಡಿದ್ದ ಅಪರಾಧಿಗೆ ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶನಿವಾರ ಅಜೀವ ಕಾರಾಗೃಹ ಶಿಕ್ಷೆ ವಿಧಿಸಿದೆ.

ಪುತ್ತೂರು ತಾಲ್ಲೂಕಿನ ಸರ್ವೆ ಗ್ರಾಮದ ಬೈರಗುರಿ ನಿವಾಸಿ ವಿಜಯ್ ಅಪರಾಧಿ. ಈತ 2016ರ ಏಪ್ರಿಲ್ 11ರಂದು ಹಣ ನೀಡಿದ ಕಾರಣಕ್ಕಾಗಿ ತನ್ನ ಪತ್ನಿ ಭಾಗ್ಯ ಯಾನೆ ಭಾಗೀರಥಿ (31) ಜತೆ ಜಗಳವಾಡಿ, ಆಕೆಯ ಕುತ್ತಿಗೆಗೆ ಕತ್ತಿಯಿಂದ ಕಡಿದು ಕೊಲೆ ಮಾಡಿರುವುದು ವಿಚಾರಣೆಯಿಂದ ಸಾಬೀತಾಗಿದ್ದು, ನ್ಯಾಯಾಧೀಶ ಎಂ.ರಾಮಚಂದ್ರ ಅವರು ಕಳೆದ ಸೋಮವಾರ ಆತನನ್ನು ತಪ್ಪಿತಸ್ಥ ಎಂದು ತೀರ್ಮಾನಿಸಿ ಆದೇಶ ನೀಡಿದ್ದರು. ಇದೀಗ ಅವರು ಶಿಕ್ಷೆಯ ಪ್ರಮಾಣವನ್ನು ಘೋಷಿಸಿದ್ದಾರೆ.

ವಿಜಯ್‌ಗೆ ಅಜೀವ ಕಾರಾಗೃಹ ಶಿಕ್ಷೆ ಮತ್ತು ₹10 ಸಾವಿರ ದಂಡ, ದಂಡ ತೆರಲು ತಪ್ಪಿದಲ್ಲಿ 6 ತಿಂಗಳ ಹೆಚ್ಚುವರಿ ಜೈಲು ಶಿಕ್ಷೆ ಅನುಭವಿಸುವಂತೆ, ಪಾವತಿಸಿದ ಹಣದಲ್ಲಿ ತಲಾ ₹3ಸಾವಿರದಂತೆ ಆತನ ಮೂವರು ಮಕ್ಕಳಿಗೆ ಪರಿಹಾರ ನೀಡುವಂತೆ ನ್ಯಾಯಾಧೀಶರು ಆದೇಶಿಸಿದ್ದಾರೆ.

ADVERTISEMENT

ಪ್ರಾಸಿಕ್ಯೂಷನ್ ಪರವಾಗಿ ಸರ್ಕಾರಿ ಅಭಿಯೋಜಕ ಉದಯ ಕುಮಾರ್ ಅವರು ಸಮರ್ಥವಾಗಿ ವಾದ ಮಂಡಿಸಿದ್ದರು. ಸಂಪ್ಯ ಠಾಣಾ ಪೊಲೀಸರು ಕೊಲೆ ಪ್ರಕರಣ ದಾಖಲಿಸಿದ್ದರು. ಗ್ರಾಮಾಂತರ ಸರ್ಕಲ್ ಇನ್‌ಸ್ಪೆಕ್ಟರ್‌ ಅನಿಲ್ ಕುಲಕರ್ಣಿ ಅವರು ವಿಜಯ್‌ನನ್ನು ಬಂಧಿಸಿ, ಆರೋಪಿಯ ವಿರುದ್ದ ಪುತ್ತೂರು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.