ADVERTISEMENT

ಮಡಪ್ಪಾಡಿ: ಮನೆಗೆ ಬಂದ ಶಂಕಿತ ನಕ್ಸಲ್‌ ತಂಡ

ಸುಳ್ಯ ಕೃಷಿ ಉತ್ಪನ್ನ ಸಮಿತಿ ಮಾಜಿ ಅಧ್ಯಕ್ಷರ ರಬ್ಬರ್‌ ತೋಟದ ಶೆಡ್‌: ಐದು ಪಿಸ್ತೂಲ್‌, ಒಂದು ಬಂದೂಕು ಹೊಂದಿದ್ದರು

​ಪ್ರಜಾವಾಣಿ ವಾರ್ತೆ
Published 16 ಜೂನ್ 2018, 10:12 IST
Last Updated 16 ಜೂನ್ 2018, 10:12 IST

ಸುಳ್ಯ: ತಾಲ್ಲೂಕಿನ ಮಡಪ್ಪಾಡಿ ಗ್ರಾಮದ ಹಾಡಿಕಲ್ಲಿ ಎಂಬಲ್ಲಿ ನಕ್ಸಲರೆಂದು ಹೇಳಲಾದ ಮೂವರು ಗುರುವಾರ ರಾತ್ರಿ ಮನೆಯೊಂದಕ್ಕೆ ಬಂದು ಊಟ ಮಾಡಿ ತೆರಳಿದ್ದಾರೆ ಎಂಬ ಮಾಹಿತಿ ಲಭಿಸಿದೆ.

ಈ ಬೆಳವಣಿಗೆಯಿಂದ ಇಲ್ಲಿನ ಜನ ಆತಂಕಗೊಂಡಿದ್ದಾರೆ. ಎಎನ್‌ಎಫ್ ಮತ್ತು ಪೊಲೀಸ್ ತಂಡ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಶೋಧಕಾರ್ಯ ಆರಂಭಿಸಿದೆ.

ರಬ್ಬರ್‌ ಶೆಡ್‌: ಸುಳ್ಯ ಕೃಷಿ ಉತ್ಪನ್ನ ಸಮಿತಿ ಮಾಜಿ ಅಧ್ಯಕ್ಷ, ಬಿಜೆಪಿ ನಾಯಕ ಜಯರಾಮ ಹಾಡಿಕಲ್ಲು ಅವರಿಗೆ ಸೇರಿದ ರಬ್ಬರ್ ತೋಟದ ಶೆಡ್ಡಿನಲ್ಲಿ ಈ ಘಟನೆ ನಡೆದಿದೆ. ಜಯರಾಮ ಅವರು ತನ್ನ ರಬ್ಬರ್ ಮರಗಳ ಟ್ಯಾಪಿಂಗ್‌ ಅನ್ನು 6 ತಿಂಗಳ ಹಿಂದೆ ಕಾಸರಗೋಡು ಜಿಲ್ಲೆಯ ಚಿತ್ತಾರಿಕಲ್ ಎಂಬಲ್ಲಿನ ಥೋಮಸ್ ಎಂಬವರಿಗೆ ಲೀಸ್‌ಗೆ ನೀಡಿದ್ದರು. ಜಯರಾಮ ಅವರ ಮನೆಯ ಒಂದು ಫರ್ಲಾಂಗ್ ದೂರದಲ್ಲಿರುವ ಶೆಡ್‌ನಲ್ಲಿ ಥೋಮಸ್ ವಾಸ್ತವ್ಯವಿದ್ದರು. ಅಲ್ಲಿಯೇ ಅಡುಗೆ ತಯಾರಿಸುತ್ತಿದ್ದರು.

ADVERTISEMENT

ಗುರುವಾರ ಸಂಜೆ 7.45ರ ಸುಮಾರಿಗೆ ಇಬ್ಬರು ಯುವತಿಯರು ಮತ್ತು ಒಬ್ಬ ಪುರುಷ ಶೆಡ್‌ ಪ್ರವೇಶಿಸಿದರು.  22ರಿಂದ 24 ವರ್ಷ ವಯಸ್ಸಿನ ಯುವತಿ ಮತ್ತು 35 ರಿಂದ 37 ವರ್ಷ ಅಂದಾಜಿನ ಮತ್ತೊಬ್ಬ ಮಹಿಳೆ ಒಳಗಡೆ ಬಂದಿದ್ದಾರೆ. ಯುವಕ ಹೊರಗಡೆ ನಿಂತುಕೊಂಡಿದ್ದ. ಒಳಗೆ ಊಟ ಮಾಡುತ್ತಿದ್ದ ಥೋಮಸ್ ಅವರಿಗೆ ಇದ್ದಕ್ಕಿದ್ದಂತೆಯೇ ಅಪರಿಚಿತರು ಶೆಡ್ ಪ್ರವೇಶಿಸಿದ್ದುದರಿಂದ ಭಯ ಆಯಿತು.  ಇಬ್ಬರೂ ತಮ್ಮಲ್ಲಿದ್ದ ಕೋವಿಯಿಂದ ಗದ್ದಲ ಮಾಡದಂತೆ ಸೂಚಿಸಿದರೆನ್ನಲಾಗಿದೆ. ಬಳಿಕ ಅನ್ನ ಮತ್ತು ಮೊಟ್ಟೆ ಪದಾರ್ಥದ ಪಾತ್ರೆಗಳನ್ನು ಹೊರಗೆ ಕೊಂಡೊಯ್ದರು. ಥೋಮಸ್ ಒಳಗಡೆಯೇ ನಿಂತಿದ್ದರು. 10 ನಿಮಿಷದಲ್ಲಿ ಊಟ ಮುಗಿಸಿದ ಆಗಂತುಕರು  ತಟ್ಟೆಗಳನ್ನು ಅಲ್ಲೇ ಬಿಟ್ಟು ಕೈ ತೊಳೆದುಕೊಂಡು ಒಳಗೆ ಬಂದು ತಮ್ಮ ಚೀಲ ಮತ್ತು ಥೋಮಸ್ ಅವರಿಂದ ಗುಟ್ಕಾ ಪ್ಯಾಕೆಟ್‌ಗಳನ್ನು ತೆಗೆದುಕೊಂಡು ಹೋದರೆನ್ನಲಾಗಿದೆ.

ನೀವು ಯಾರು?:
ಅವರು ಮನೆಯಂಗಳದಿಂದ ಹೊರ ಹೋಗುತ್ತಿದ್ದಂತೆ ಥೋಮಸ್ ಅವರು ನೀವು ಯಾರು?, ಎಲ್ಲಿಗೆ ಹೋಗುತ್ತಿದ್ದೀರಿ? ಎಂದು ಪ್ರಶ್ನಿಸಿದರು. ಆದರೆ ಅವರು ಅದನ್ನು ಲೆಕ್ಕಿಸದೇ ಅವರ ಪಾಡಿಗೆ ಅವರು ತೆರಳಿದರೆಂದು ತಿಳಿದುಬಂದಿದೆ. ಅವರು ಹೋಗಿರುವುದನ್ನು ಖಾತ್ರಿ ಮಾಡಿಕೊಂಡ ಥೋಮಸ್ ಅವರು ಜಯರಾಮರ ಮನೆಗೆ ಹೋಗಿ ವಿಷಯ ತಿಳಿಸಿದರು. ರಾತ್ರಿಯಿಡಿ ಥೋಮಸ್ ಜಯರಾಮರ ಮನೆಯಲ್ಲಿಯೇ ಉಳಿದಕೊಂಡರು. ರಾತ್ರಿಯೇ ಜಯರಾಮ ಅವರು ಸ್ಥಳೀಯ ಅಜಯ್ ವಾಲ್ತಾಜೆ ಸೇರಿದಂತೆ ಹಲವರಿಗೆ ವಿಷಯ ತಿಳಿಸಿದರು. ಅಜಯ್ ವಾಲ್ತಜೆ ಮತ್ತು ಜಯರಾಮರು ಸಮೀಪದ ಮನೆಗಳಿಗೆ ಕರೆ ಮಾಡಿ ವಿಷಯ ವಿವರಿಸಿ ಜಾಗೃತೆ ವಹಿಸುವಂತೆ ಸೂಚಿಸಿದರು.

ನಕ್ಸಲರು ಖಾತ್ರಿಯೇ: ಇಲ್ಲಿಗೆ ಬಂದ ನಕ್ಸಲರದ್ದೇ ಎಂಬ ಬಗ್ಗೆ ಸ್ಥಳೀಯರಲ್ಲಿ ಮತ್ತು ಭದ್ರತಾ ಪಡೆಗೆ ಸಂಶಯ ಇದೆ. ಈ ಬಗ್ಗೆ ಅವರು ಮಾಹಿತಿ ಪಡೆಯುತ್ತಿದ್ದಾರೆ. ಬಂದಿರುವ ತಂಡ ಮಾಡಿದ ಕೆಲಸ ಮತ್ತು ಅವರ ಚಹರೆ ಮೂಲಕ ನಕ್ಸಲರು ಎಂದು ಖಾತ್ರಿ ಮಾಡಬಹುದಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಮೂರು ಮಂದಿಯ ಕೈಯಲ್ಲೂ ಕೋವಿ ಮತ್ತು ಪಿಸ್ತೂಲ್ ಇತ್ತೆಂದು  ಥಾಮೋಸ್ ಹೇಳುತ್ತಾರೆ. ಯುವತಿಯರು ಚೂಡಿದಾರ ಹಾಗೂ ಯುವಕ ಪ್ಯಾಂಟ್ ಶರ್ಟ್ ಧರಿಸಿದ್ದರು. ಹಸಿರು ಬಣ್ಣದ ಡ್ರೆಸ್ ಧರಿಸಿದ್ದ ಇವರ ತಲೆಯಲ್ಲಿ ಪಟ್ಟಿಕಟ್ಟಿಕೊಂಡಿದ್ದರೆಂದೂ, ಸೊಂಟದಿಂದ ಭುಜಕ್ಕೆ ಬಂದೂಕಿನ ಮದ್ದಿನ ರೀತಿಯ ಸ್ಕ್ರಾಪ್ ಧರಿಸಿದ್ದರೆಂದೂ ಹೇಳಿದ್ದಾರೆ. ಯುವಕ ಗಡ್ಡ ಮತ್ತು ಕೂದಲು ಬಿಟ್ಟಿದ್ದು, ಯುವತಿಯರ ಪೈಕಿ ಒಬ್ಬಳು ಸುಂದರವಾಗಿದ್ದಳು, ಮತ್ತೊಬ್ಬರು ಕಪ್ಪು ಬಣ್ಣ ಹೊಂದಿದ್ದಳು. ಎಲ್ಲರೂ ತೆಲುಗು ಭಾಷೆಯಲ್ಲಿ ಪರಸ್ಪರ ಮಾತನಾಡುತ್ತಿದ್ದರು ’  ಎಂದು ಥೋಮಸ್ ಹೇಳುತ್ತಾರೆ.

ಸುಳ್ಯ ತಾಲ್ಲೂಕಿನಲ್ಲಿ ನಕ್ಸಲರು:
ತಾಲ್ಲೂಕಿನ ವಿವಿಧ ಭಾಗಗಳಿಗೆ ನಕ್ಸಲರು ಈ ಹಿಂದಯೇ ಬಂದಿದ್ದರು. 2012 ಸಂದರ್ಭ ದ.ಕ.ಜಿಲ್ಲೆ ಮತ್ತು ಮಡಿಕೇರಿ ಭಾಗದಲ್ಲಿ ಬಂದು ಹೋಗಿದ್ದ ಇತಿಹಾಸ ಇದೆ. ಅನಂತರ 2 ವರ್ಷಗಳ ಹಿಂದೆ ಮತ್ತೆ ಸಂಪಾಜೆ ಭಾಗದಲ್ಲಿ ಕಂಡು ಬಂದಿದ್ದರು. ಆಗ ಆಗಿನ ಎಎನ್‌ಎಫ್ ಮುಖ್ಯಸ್ಥರೇ ಬಂದು ಅವರ ನೇತೃತ್ವದಲ್ಲಿ ಕೂಂಬಿಂಗ್ ಸಹ ಮಾಡಲಾಗಿತ್ತು. ಅಲ್ಲದೆ ಸುಳ್ಯ ಮೂಲಕವೇ ನಕ್ಸಲರ ನಾಯಕರು ಮಡಿಕೇರಿ ಕಡೆಗೆ ಹೋಗಿದ್ದಾರೆ ಎನ್ನುವ ಮಾಹಿತಿಯೂ ಈ ಹಿಂದೆಯೇ ಎಎನ್‌ಎಫ್ ತಂಡಕ್ಕೆ ಲಭಿಸಿತ್ತು. ಅನಂತರ ಶಿರಾಡಿ, ಕುಲ್ಕುಂದ, ಕೊಲ್ಲಮೊಗ್ರ ಕಡೆಗಳಲ್ಲಿ ಈ ತಂಡ ಬಂದು ಆಹಾರ ಸಾಮಗ್ರಿಗಳನ್ನು ಕೊಂಡು ಹೋಗಿತ್ತು. ಕುಲ್ಕಂದದ ಪಳ್ಳಿ ಗದ್ದೆಯಲ್ಲಿ ಕಾಣಿಸಿಕೊಂಡಾಗ ಅಲ್ಲಿಯೂ ದೊಡ್ಡ ಪ್ರಮಾಣದಲ್ಲಿ ಕೂಂಬಿಂಗ್ ಮಾಡಲಾಗಿತ್ತು. ಅಲ್ಲದೆ ತಮ್ಮ ಲ್ಯಾಪ್‌ಟಾಪ್ ಹಾಗೂ ಮೊಬೈಲ್‌ಗಳನ್ನು ಚಾರ್ಜ್ ಮಾಡಿ ಹೋದ ಘಟನೆಗಳೂ ಇದೆ. ಬಿಸಿಲೆ ಘಾಟಿಯಲ್ಲಿ ಕಂಡು ಬಂದಾಗ ಅಲ್ಲಿ ಶೂಟೌಟ್ ಕೂಡಾ ಆಗಿತ್ತು.

ಕಾಡಾನೆಗಳ ನಾಡು:
ಈ ಹಾಡಿಕಲ್ಲಿನ ರಕ್ಷಿತಾರಣ್ಯ ಕಾಡಾನೆಗಳ ನಾಡು. ಈ ಅರಣ್ಯ ಸಂಪಾಜೆ ಮತ್ತು ಕೊಯನಾಡು ಭಾಗದ ಅಂದರೆ ಈ ಹಿಂದೆ ಕಂಡು ಬಂದ ಸಂಪಾಜೆ ಪ್ರದೇಶಕ್ಕೆ ಸಂಪರ್ಕ ಇದೆ. ನಕ್ಸಲರು ಇರುವ ಬಗ್ಗೆ ಈ ಹಿಂದೆಯೇ ಮಾಹಿತಿಗಳಿದ್ದ ಕಾರಣ ಬಂದವರು ನಕ್ಸಲರೇ ಆಗಿರಬಹುದೆಂದು ಸಂಶಯ ಪಡಬಹುದಾಗಿದೆ. ತಂಡದಲ್ಲಿದ್ದ ಯಾರೂ ಕೂಡಾ ಥೋಮಸ್ ಅವರೊಂದಿಗೆ ತುಂಬಾ ಮಾತನಾಡಿಲ್ಲ.

ನಕ್ಸಲ್ ನಿಗ್ರಹ ಪಡೆಯ ಗುಪ್ತಚರ ಸಿಬ್ಬಂದಿ ರಮೇಶ್ ಅವರು ಶುಕ್ರವಾರ ಬೆಳಿಗ್ಗೆ ಹಾಡಿಕಲ್ಲಿಗೆ ಭೇಟಿ ನೀಡಿದ ವರಿಷ್ಠಾಧಿಕಾರಿಗಳಿಗೆ ಮಾಹಿತಿ ನೀಡಿದರು. ಸಿಐ ಸತೀಶ್‌ಕುಮಾರ್ ಮತ್ತು ಎಸ್‌ಐ ಮಂಜುನಾಥ್ ನೇತೃತ್ವದ ಸುಳ್ಯ ಪೊಲೀಸರ ತಂಡ ಕೂಡಾ ಸ್ಥಳಕ್ಕೆ ಭೇಟಿ ನೀಡಿದೆ. ಉನ್ನತ ಅಧಿಕಾರಿಗಳ ತಂಡ ಬರುವ ನಿರೀಕ್ಷೆ ಇದೆ. ಈ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದೇವೆ ಎಂದು ಸತೀಶ್‌ಕುಮಾರ್ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.