ADVERTISEMENT

ಮತಯಾಚನೆ ವೇಳೆ ಘರ್ಷಣೆ: ಅಂಗಾರ ವಿರುದ್ಧ ಪೊಲೀಸ್ ದೂರು

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2013, 6:34 IST
Last Updated 25 ಏಪ್ರಿಲ್ 2013, 6:34 IST

ಸುಳ್ಯ: ಬಿಜೆಪಿ ಅಭ್ಯರ್ಥಿ ಹಾಗೂ ಶಾಸಕ ಎಸ್. ಅಂಗಾರ ಮತ ಯಾಚನೆಗಾಗಿ ಬೇಂಗಮಲೆ ಕಾಲೊನಿಗೆ ತೆರಳಿದ ಸಂದರ್ಭ ಘರ್ಷಣೆ ನಡೆದು ಇತ್ತಂಡದಿಂದ ಪೊಲೀಸ್ ದೂರು ನೀಡಲ್ಪಟ್ಟ ಘಟನೆ ಮಂಗಳವಾರ ಸಂಜೆ ನಡೆದಿದೆ.

ಶಾಸಕ ಅಂಗಾರ, ಜಿ.ಪಂ. ಸದಸ್ಯ ನವೀನ್ ಕುಮಾರ್ ಮೇನಾಲ ಮೊದಲಾದ ನಾಯಕರು ಸ್ಥಳೀಯ ಮುಖಂಡರೊಂದಿಗೆ ಬೇಂಗಮಲೆ ಕಾಲೊನಿಗೆ ಮತ ಯಾಚನೆಗೆ ತೆರಳಿದ್ದರು. ಈ ಸಂದರ್ಭ ಅವರನ್ನು ತರಾಟೆಗೆ ತೆಗೆದುಕೊಂಡ ಕಾಲೊನಿ ನಿವಾಸಿಗಳು, `ನಮ್ಮ ಬೇಡಿಕೆಗಳಿಗಾಗಿ ತಾಲ್ಲೂಕು ಕಚೇರಿ ಎದುರು ಹೋರಾಟ ಮಾಡುತ್ತಿದ್ದಾಗ ನೀವು ಬಂದು ಕೇಳುವ ಸೌಜನ್ಯವನ್ನೂ ತೋರಿಲ್ಲ.

ನಮ್ಮ ಮತಗಳಿಂದ ಗೆದ್ದದ್ದಲ್ಲ ಎಂದು ಹೇಳಿದ್ದೀರಿ. ಈಗ ಮತ ಕೇಳಲು ಬಂದದ್ದು ಯಾಕೆ?'ಎಂದು ಕೇಳಿದರೆನ್ನಲಾಗಿದೆ. `ನಾನು ಆ ರೀತಿ ಹೇಳಿಲ್ಲ. ತಮಿಳು ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸಿದ್ದೇನೆ' ಎಂದು ಶಾಸಕರು ಸ್ಪಷ್ಟನೆ ನೀಡಿದಾಗ, ನೀವು ಹೇಳಿರುವುದಕ್ಕೆ ನಾವು ಸಾಕ್ಷಿ ಎಂದು ಕೆಲವರು ಹೇಳಿದರೆಂದೂ, ಇತ್ತಂಡಗಳೊಳಗೆ ಮಾತಿನ ಚಕಮಕಿ ಘರ್ಷಣೆಯ ಹಂತ ತಲುಪಿ ಬಳಿಕ ಮತ ಯಾಚನೆಗೆ ಹೋದವರು ಹಿಂತೆರಳಿದರೆಂದೂ ತಿಳಿದುಬಂದಿದೆ.

ತಂಡದಲ್ಲಿದ್ದ ಚನಿಯಪ್ಪ ಎಂಬವರು ಸುಳ್ಯ ಪೊಲೀಸರಿಗೆ ದೂರು ನೀಡಿ ಮತ ಯಾಚನೆಗೆ ತೆರಳಿದ ಸಂದರ್ಭ ಅಡ್ಡಿಪಡಿಸಿರುವುದಾಗಿ ತಿಳಿಸಿದ್ದಾರೆ. ಮತ ಯಾಚನೆಗೆ ಬಂದವರು ನಮ್ಮ ಮೇಲೆ ಹಲ್ಲೆ ನಡೆಸಿ ಬೆದರಿಕೆ ಒಡ್ಡಿದ್ದಾರೆ. ಇದಕ್ಕೆ ಶಾಸಕರು ಪ್ರೇರಣೆ ನೀಡಿದ್ದಾರೆ ಎಂದು ಕಾಲೊನಿಯ ಮಹಿಳೆಯರಾದ ದಿವ್ಯ, ಚಂದ್ರಕಾಂತಿ, ವಿಜಯಕುಮಾರಿ, ವಿಜಯಲಕ್ಷ್ಮಿ ಎಂಬವರು ಎಸ್.ಅಂಗಾರ, ನವೀನ್ ಕುಮಾರ್ ಮೇನಾಲ, ನವೀನ್ ಸಾರಕೆರೆ, ಗಣೇಶ್ ಕೊಚ್ಚಿ, ಕಿಶನ್ ಜಬಳೆ, ಮಹೇಶ್ ಜಬಳೆ ಎಂಬವರ ಮೇಲೆ ದೂರು ನೀಡಿದ್ದಾರೆ.

ಮಹಿಳೆಯರ ಮೇಲೆ ಹಲ್ಲೆ ಯತ್ನ (323ನೇ ಸೆಕ್ಷನ್) ಸೇರಿದಂತೆ ವಿವಿಧ ಎಂಟು ಪ್ರಕರಣಗಳು ಶಾಸಕರ ವಿರುದ್ಧ ದಾಖಲಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT