ADVERTISEMENT

ಮತ್ತಾವು ಇನ್ನೂ ಬೆಳಕು ಕಾಣಲೇ ಇಲ್ಲ!

​ಪ್ರಜಾವಾಣಿ ವಾರ್ತೆ
Published 17 ಜೂನ್ 2011, 10:50 IST
Last Updated 17 ಜೂನ್ 2011, 10:50 IST

ಹೆಬ್ರಿ: ಸುತ್ತ ಮುತ್ತಲ ಹಳ್ಳಿಗಳು ಹತ್ತು ಹಲವು ಯೋಜನೆಗಳ ಮೂಲಕ ಅಭಿವೃದ್ಧಿ ಕಾಣುತ್ತಿದ್ದರೂ, ಕಾರ್ಕಳ ತಾಲ್ಲೂಕಿನ ಮುದ್ರಾಡಿ ಗ್ರಾಮದ ಮತ್ತಾವ ಸ್ಥಿತಿ ಮಾತ್ರ ಇನ್ನೂ ಶೋಚನೀಯವಾಗಿದೆ.

ವಿಶೇಷವೆಂದರೆ, 2011ನೇ ಇಸವಿಯಲ್ಲೂ ಈ ಗ್ರಾಮದ ಮಲೆಕುಡಿಯ ಜನಾಂಗದವರ ಮನೆಗಳು ವಿದ್ಯುತ್ ಸಂಪರ್ಕದಿಂದ ವಂಚಿತ! ಹಾಗೆಂದ ಮಾತ್ರ ಇಲ್ಲಿನ ಜನತೆಯ ಸಮಸ್ಯೆ ನೀಗಿಸುವ ನಿಟ್ಟಿನಲ್ಲಿ ಸರ್ಕಾರ ಪ್ರಯತ್ನ ನಡೆಸಿಲ್ಲ ಎಂದೇನಿಲ್ಲ. ಸುಮಾರು 7 ತಿಂಗಳ ಹಿಂದೆ ಹ್ಯಾಮ್ಲೆಟ್ ಯೋಜನೆ ಅಡಿ ಇಲ್ಲಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಅನುದಾನ ಮಂಜೂರಾಗಿತ್ತು.

`ಅಧಿಕಾರಿಗಳ ಅಸಡ್ಡೆಯೋ, ಗುತ್ತಿಗೆದಾರರ ನಿರ್ಲಕ್ಷ್ಯವೋ ಗೊತ್ತಿಲ್ಲ. ನಮ್ಮ ಮನೆಗಳಲ್ಲಿ ವಿದ್ಯುತ್ ಬೆಳಕು ಕಾಣುವ ಸೌಭಾಗ್ಯ ಇನ್ನೂ ಕೂಡಿಬಂದಿಲ್ಲ~ ಎಂದು ಬೇಸರ ತೋಡಿಕೊಳ್ಳುತ್ತಾರೆ ಮತ್ತಾವು ಜನತೆ.

ನಕ್ಸಲ್ ಪೀಡಿತ ಪ್ರದೇಶ: ಮೂಲಸೌಕರ್ಯ ದೃಷ್ಟಿಯಿಂದ  ಮುದ್ರಾಡಿ ಗ್ರಾಮ ಪಂಚಾಯಿತಿಯ ಕಬ್ಬಿನಾಲೆಯ `ಮತ್ತಾವು~ ತೀರಾ ಹಿಂದುಳಿದ ಪ್ರದೇಶ. ಅದನ್ನೇ ದಾಳವಾಗಿ ಬಳಸಿಕೊಂಡ ನಕ್ಸಲರು ಏಳೆಂಟು ವರ್ಷ ಹಿಂದೆಯೇ ಇಲ್ಲಿನ ಸೌಕರ್ಯ ಕೊರತೆಯನ್ನೇ ಎತ್ತಿ ತೋರಿಸಿ ಗ್ರಾಮಸ್ಥರ ಒಲವು ಗಳಿಸುವ ಯತ್ನ ನಡೆಸಿದ್ದರು. ನಕ್ಸಲರು ಕರಾವಳಿಯಲ್ಲಿ ಮೊದಲ ಬಾರಿ ನೆಲಬಾಂಬ್ ಸಿಡಿಸಿ ಪೊಲೀಸ್ ಸಿಬ್ಬಂದಿಯನ್ನು ಬಲಿ ಪಡೆವ ವಿಫಲ ಯತ್ನ ನಡೆಸಿದ್ದು ಇದೇ ಊರಿನಲ್ಲಿ. 2005ರಲ್ಲಿ ನಡೆದ ಈ ಕೃತ್ಯ ರಾಜ್ಯದಾದ್ಯಂತ ಗಮನ ಸೆಳೆದಿತ್ತು. ಜತೆಗೆ ಇಲ್ಲಿನ ಮೂಲಸೌಕರ್ಯ ಕೊರತೆಯೂ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.

ಇಲ್ಲಿ ನೆಲೆಸಿರುವ ಕುಟುಂಬಗಳ ಪೈಕಿ ಹೆಚ್ಚಿನವು ಪರಿಶಿಷ್ಟ ವರ್ಗಕ್ಕೆ ಸೇರಿದ ಮಲೆಕುಡಿಯ ಜನಾಂಗದವರದು. ವಿದ್ಯುತ್ ಸಂಪರ್ಕ ಬೇಕೆಂಬ ಅವರ ಬೇಡಿಕೆಗೆ ಸ್ಪಂದಿಸಿ ಸ್ಥಳೀಯ ಜನಪ್ರತಿನಿಧಿಗಳು ಒತ್ತಡ ಹೇರಿದ ಪರಿಣಾಮ ಏಳು ತಿಂಗಳ ಹಿಂದೆ ಮತ್ತಾವಿನ ಮಲೆಕುಡಿಯರ 10 ಮನೆಗಳಿಗೆ ಹ್ಯಾಮ್ಲೆಟ್ ಯೋಜನೆಯಡಿ ವಿದ್ಯುತ್ ಸಂಪರ್ಕ ಮಂಜೂರಾಯಿತು. ಮನೆಗಳಿಗೆ ತಕ್ಷಣವೇ ವಯರಿಂಗ್ ಕೂಡಾ ನಡೆಸಲಾಯಿತು. ಹಲವಾರು ವರ್ಷದ ಕನಸು ನನಸಾಗುತ್ತಿರುವ ಬಗ್ಗೆ ಜನತೆ ಸಂತಸಪಟ್ಟರು.

`ಇನ್ನೇನು ಮನೆಗೆ ವಿದ್ಯುತ್ ಬಂದೇ ಬಿಟ್ಟಿತು~ ಎಂದು ಖುಷಿಯಲ್ಲಿ ತೇಲುತ್ತಿದ್ದವರಿಗೆ ಈಗ ಭ್ರಮ ನಿರಸನ ಕಾಡತೊಡಗಿದೆ. ಮಂಜೂರಾದ ವಿದ್ಯುತ್ ಸಂಪರ್ಕ ಇನ್ನೂ ಗ್ರಾಮವನ್ನು ತಲುಪಿಲ್ಲ. ಈಗ ತಮಗೆ ವಿದ್ಯುತ್ ಸಂಪರ್ಕ ಬರುತ್ತದೋ ಇಲ್ಲವೋ ಎಂಬ ಬಗ್ಗೆ ಸ್ಥಳೀಯರಿಗೆ ಆತಂಕ ಶುರುವಾಗಿದೆ.
 

ಮಲೆಕುಡಿಯ ಮುಂದಾಳುಗಳು ಇತ್ತೀಚೆಗೆ ಶಾಸಕ ಗೋಪಾಲ ಭಂಡಾರಿಯವರನ್ನು ಭೇಟಿ ಮಾಡಿ ಅಳಲು ತೋಡಿಕೊಂಡಿದ್ದಾರೆ. ಶಾಸಕರಿಂದ ಶೀಘ್ರ ವಿದ್ಯುತ್ ಸಂಪರ್ಕ ಒದಗಿಸುವ ಭರವಸೆ ಮತ್ತೆ ದೊರಕಿದೆ.
ಬೆಳಕು ಕಾಣಲು ಇನ್ನೇಷ್ಟು ದಿನ ಕಾಯಬೇಕೋ ಎಂಬ ನಿಟ್ಟುಸಿರು ಬಿಡುತ್ತಿದ್ದಾರೆ ಇಲ್ಲಿನ ಜನತೆ. 
 

`ಗುತ್ತಿಗೆದಾರರ ನಿರ್ಲಕ್ಷ್ಯ ಕಾರಣ~

ADVERTISEMENT

ಕಬ್ಬಿನಾಲೆಯ ಮತ್ತಾವಿಗೆ ಹ್ಯಾಮ್ಲೆಟ್ ಯೋಜನೆಯಡಿ ವಿದ್ಯುತ್ ಸಂಪರ್ಕ ಒದಗಿಸಲಾಗಿತ್ತು. ಮೆಸ್ಕಾಂ ಕೂಡಾ ಯೋಜನೆ ಅನುಷ್ಠಾನಕ್ಕೆ ವಿಶೇಷ ಸಹಕಾರ ನೀಡಿದೆ. ಆದರೆ, ಗುತ್ತಿಗೆದಾರರ ವಿಳಂಬ ನೀತಿಯಿಂದ ಮನೆಗಳಿಗೆ ಇನ್ನೂ ವಿದ್ಯುತ್ ಸಂಪರ್ಕ ದೊರೆತಿಲ್ಲ. ಗುತ್ತಿಗೆದಾರರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಒತ್ತಡ ತರುತ್ತೇವೆ~ ಎಂದು  ಜಿಲ್ಲಾ ಪಂಚಾಯಿತಿ ಸದಸ್ಯ ಮುದ್ರಾಡಿ ಮಂಜುನಾಥ ಪೂಜಾರಿ `ಪ್ರಜಾವಾಣಿ~ಗೆ ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.