ADVERTISEMENT

ಮಹಿಳೆಯರಿಗೆ ಉದ್ಯೋಗ ನೀಡಿದ ‘ಸಿರಿ’

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2017, 4:30 IST
Last Updated 22 ಡಿಸೆಂಬರ್ 2017, 4:30 IST
ಬೆಳ್ತಂಗಡಿ ತಾಲೂಕು ಕಚೇರಿ ಬಳಿಯ ಸಿರಿ ಉತ್ಪನ್ನ ಕಟ್ಟಡದಲ್ಲಿ ಸಿರಿ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಬೆಳ್ತಂಗಡಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಮುಗುಳಿ ನಾರಾಯಣ ರಾವ್ ಉದ್ಘಾಟಿಸಿದರು.
ಬೆಳ್ತಂಗಡಿ ತಾಲೂಕು ಕಚೇರಿ ಬಳಿಯ ಸಿರಿ ಉತ್ಪನ್ನ ಕಟ್ಟಡದಲ್ಲಿ ಸಿರಿ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಬೆಳ್ತಂಗಡಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಮುಗುಳಿ ನಾರಾಯಣ ರಾವ್ ಉದ್ಘಾಟಿಸಿದರು.   

ಬೆಳ್ತಂಗಡಿ: ಮಹಿಳೆಯರಿಗೆ ಉದ್ಯೋಗ ಸೃಷ್ಟಿಸುವ ನಿಟ್ಟಿನಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಹಾಗೂ ಹೇಮಾವತಿ ವಿ.ಹೆಗ್ಗಡೆ ಅವರ ಕನಸಿನ ಕೂಸಾಗಿರುವ ‘ಸಿರಿ’ ಗ್ರಾಮೋದ್ಯೋಗ ಸಂಸ್ಥೆಯು ಹೆಮ್ಮರವಾಗಿ ಬೆಳೆದಿದ್ದು, ಸಾವಿರಾರು ಮಹಿಳೆಯರಿಗೆ ಉದ್ಯೋಗ ಕಲ್ಪಿಸಿದೆ. ಮುಂದೆ ಇನ್ನಷ್ಟು ಉದ್ಯೋಗ ದೊರಕಬೇಕಾದರೆ ಸಿರಿ ಉತ್ಪನ್ನಗಳನ್ನು ಖರೀದಿಸಬೇಕು ಎಂದು ಬೆಳ್ತಂಗಡಿ ಪಟ್ಟಣ ಪಂಚಾಯತಿ ಅಧ್ಯಕ್ಷ ಮುಗುಳಿ ನಾರಾಯಣ ರಾವ್ ಹೇಳಿದ್ದಾರೆ.

ಗುರುವಾರ ಬೆಳ್ತಂಗಡಿ ತಾಲ್ಲೂಕು ಕಚೇರಿ ಬಳಿ ಇರುವ ಸಿರಿ ಉತ್ಪನ್ನ ಕಟ್ಟಡದಲ್ಲಿ ಕ್ರಿಸ್‍ಮಸ್ ಹಾಗೂ ಹೊಸ ವರ್ಷದ ಪ್ರಯುಕ್ತ 15 ದಿನಗಳ ಸಿರಿ ಗ್ರಾಮೋದ್ಯೋಗ ಸಂಸ್ಥೆ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಇಂದು ಸ್ಪರ್ಧೆ ನೀಡವುದು ಬಹಳ ಕಷ್ಟ.  ಮಾಧ್ಯಮಗಳ ಮೂಲಕ ಜಾಹೀರಾತು ನೀಡಿ ಹಲವಾರು ಕಂಪೆನಿಗಳು ವ್ಯವಹಾರ ಮಾಡಲು ಪ್ರಯತ್ನಿಸುತ್ತಿವೆ. ಆದರೆ ಸಿರಿ ಗ್ರಾಮೋದ್ಯೋಗ ಸಂಸ್ಥೆ ಮಹಿಳೆಯರಿಂದಲೇ ಉತ್ಪಾದನೆಗೊಳ್ಳುವಂತಹ ವಸ್ತುಗಳನ್ನು ಮಾರಾಟ ಮಾಡಿ ಹೆಸರುವಾಸಿಯಾಗಿರುವುದು ಹೆಮ್ಮಯ ವಿಷಯ ಎಂದರು.

ADVERTISEMENT

ಸಿರಿ ಗ್ರಾಮೋದ್ಯೋಗ ಸಂಸ್ಥೆಯ ನಿರ್ದೇಶಕಿ ಮನೋರಮಾ ಮಾತನಾಡಿ ‘ಇಂದಿನ ಪರಿಸ್ಥಿತಿಯಲ್ಲಿ ಮಾರುಕಟ್ಟೆ ಸ್ಥಿತಿ ಕಠಿಣವಾಗಿದ್ದು, ಎಲ್ಲ ಮಾರಾಟಗಾರರು ಬೇರೆ ಬೇರೆ ತಂತ್ರಜ್ಞಾನಗಳನ್ನು ಬಳಸಿ ವ್ಯಾಪಾರದಲ್ಲಿ ಸ್ಪರ್ಧೆ ನಡೆಸುತ್ತಿವೆ. ಆದರೆ ‘ಸಿರಿ’ಯ ವ್ಯವಹಾರ ಭಿನ್ನವಾಗಿದ್ದು ಮಾರುಕಟ್ಟೆ ಪ್ರವೇಶದಲ್ಲಿ ಮುಂಚೂಣಿಯಲ್ಲಿದೆ’ ಎಂದರು.

‘ವ್ಯವಹಾರಕ್ಕೆ ಸೀಮಿತವಾಗಿದ್ದ ಸಿರಿ ಉತ್ಪನ್ನಗಳು ಇಂದು ಕೃಷಿಕರಿಗೆ ಅದರಲ್ಲೂ ವಿಶೇಷವಾಗಿ ಸಣ್ಣ ಹಾಗೂ ಅತಿ ಸಣ್ಣ ರೈತರ ಜತೆಯಾಗಿರುವುದು ಹೆಮ್ಮೆ ತಂದಿದೆ. ಇಂದು ಸುಮಾರು 20 ಸಾವಿರಕ್ಕೂ ಹೆಚ್ಚು ರೈತರಿಗೆ ಪ್ರಯೋಜನವಾಗುವಂತೆ ಧಾನ್ಯಗಳನ್ನು ಬೆಳೆಸಲು ಸಂಸ್ಥೆ ಪ್ರೇರಣೆ ನೀಡಿದ್ದು, ರೈತರ  ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುತ್ತಿದೆ’ ಎಂದರು.

ಪ್ರಸ್ತುತ ಧಾರವಾಡದಲ್ಲಿ ಹೆಚ್ಚುವರಿಯಾಗಿ ಕೃಷಿ ಸಂಸ್ಕರಣ ಘಟಕವನ್ನು ಪ್ರಾರಂಭಿಸಿದ್ದು, ಇದೀಗ  ಉತ್ಪನ್ನಗಳಿಗೆ ಹೆಚ್ಚು ಬೇಡಿಕೆ ಬರಲು ಮತ್ತು ಸಾರ್ವಜನಿಕರಿಗೆ ಆರೋಗ್ಯಯುತ ಆಹಾರ ಸುಲಭದಲ್ಲಿ ಸಿಗುವಂತೆ ಬೆಳ್ತಂಗಡಿಯಲ್ಲಿ ಕ್ರಿಸ್‍ಮಸ್ ಹಾಗೂ ಹೊಸ ವರ್ಷದ ಪ್ರಯುಕ್ತ ಸಿರಿ ಉತ್ಪನ್ನಗಳ ಮಾರಾಟ ಹಾಗೂ ಪ್ರದರ್ಶನಗಳನ್ನು ಆಯೋಜಿಸಿದೆ ಎಂದರು.

ಕಾರ್ಯಕ್ರಮದಲ್ಲಿ ಬೆಳ್ತಂಗಡಿ ತಾಲೂಕು ಪರ್ತಕರ್ತರ ಸಂಘದ ಅಧ್ಯಕ್ಷ ಮನೋಹರ್ ಬಳಂಜ, ಬೆಳ್ತಂಗಡಿ ಪಟ್ಟಣ ಪಂಚಾಯಿತಿ ಸದಸ್ಯ ಸಂತೋಷ್ ಕುಮಾರ್ ಜೈನ್, ಸಿರಿ ಯೋಜನಾಧಿಕಾರಿ ರೋಹಿತಾಕ್ಷ ಉಪಸ್ಥಿತರಿದ್ದರು. ಸಿರಿ ಅಧಿಕಾರಿ ವಿನ್ಸೆಂಟ್ ಸ್ವಾಗತಿಸಿ ಸುದಾಕರ್ ವಂದಿಸಿರು. ಸತೀಶ್ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.