ADVERTISEMENT

ಮಾಣಿ ಪೆರಾಜೆ: ಗೋಸ್ವರ್ಗ ಕಾರ್ಯಾಗಾರ

ಶ್ರೀರಾಮಚಂದ್ರಾಪುರ ಮಠದಲ್ಲಿ ಯೋಜನೆ 27ರಂದು ಲೋಕಾರ್ಪಣೆ

​ಪ್ರಜಾವಾಣಿ ವಾರ್ತೆ
Published 17 ಮೇ 2018, 5:56 IST
Last Updated 17 ಮೇ 2018, 5:56 IST

ವಿಟ್ಲ: ಮಾಣಿ ಪೆರಾಜೆಯ ಶ್ರೀರಾಮಚಂದ್ರಾಪುರ ಮಠದ ಜನಭವನದಲ್ಲಿ ಗೋಸ್ವರ್ಗ ಯೋಜನೆ ಬಗ್ಗೆ ಮಾಹಿತಿ ಕಾರ್ಯಾಗಾರ, ಸಂವಾದ ಮಂಗಳವಾರ ನಡೆಯಿತು.

ಮಹಾಮಂಡಲ ಅಧ್ಯಕ್ಷೆ ಈಶ್ವರಿ ಶ್ಯಾಮ್ ಭಟ್ ಬೇರ್ಕಡವು ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಯೋಜನೆಯನ್ನು ಯಶಸ್ವಿಗೊಳಿಸುವುದಕ್ಕಾಗಿ ಸಾವಿರದ ಸುರಭಿ ಅಭಿಯಾನ ಆರಂಭಿಸಲಾಗಿದೆ. ಸಾವಿರಾರು ಸುರಭಿ ಸೇವಿಕೆಯರು ಈ ಮಹಾ ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ. ರಾಜ್ಯದಾದ್ಯಂತ ಗೋಪ್ರೇಮಿಗಳು ಈ ಯೋಜನೆಗೆ ಸ್ಪಂದಿಸುತ್ತಿದ್ದಾರೆ’ ಎಂದು ತಿಳಿಸಿದರು.

ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಹರಿಪ್ರಸಾದ್ ಪೆರಿಯಾಪ್ಪು  ಮಾತನಾಡಿ, ‘ಗೋಸಂರಕ್ಷಣೆಯ ಇಂತಹ ಪರಿಪೂರ್ಣ ಯೋಜನೆ ದೇಶದಲ್ಲಿಲ್ಲ. ದೇಸೀ ತಳಿಗಳನ್ನು ಸಂರಕ್ಷಿಸುವ ಶ್ರೀಗಳ ಈ ಯೋಜನೆಗೆ ಸುಮಾರು ₹10 ಕೋಟಿ ಮೊತ್ತದ ಸಂಪನ್ಮೂಲದ ಆವಶ್ಯಕತೆಯಿದೆ. ಇದಕ್ಕೆ ಹಲವಾರು ದಾನಿಗಳು ಮುಂದೆ ಬಂದಿದ್ದು, ಈ ಯೋಜನೆಯ ಮಾಹಿತಿ ಪಡೆದುಕೊಂಡ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ಜೀ ಅವರು ಸಂತಸ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.

ADVERTISEMENT

ಮಹಾಮಂಡಲ ಮುಷ್ಟಿ ಭಿಕ್ಷೆ ಪ್ರಧಾನ ಮಲ್ಲಿಕಾ ಜಿ.ಕೆ.ಭಟ್, ಗೋಸ್ವರ್ಗ ಸಮಿತಿಯ ಸದಸ್ಯರಾದ ಪದ್ಮನಾಭ ಕೊಂಕೋಡಿ, ಪಡೀಲು ಮಹಾಬಲೇಶ್ವರ ಭಟ್, ಮುಳ್ಳೇರಿಯ ಹವ್ಯಕ ಮಂಡಲ ಅಧ್ಯಕ್ಷ ಪ್ರೊ.ಟಿ. ಶ್ರೀಕೃಷ್ಣ ಭಟ್, ಉಪ್ಪಿನಂಗಡಿ ಹವ್ಯಕ ಮಂಡಲ ಅಧ್ಯಕ್ಷ ಅಶೋಕ್ ಕೆದ್ಲ, ಪೆದಮಲೆ ನಾಗರಾಜ ಭಟ್ ಇದ್ದರು. ದೇವಿಕಾ ಶಾಸ್ತ್ರಿ  ನಿರೂಪಿಸಿದರು.

‘ಗೋವುಗಳ ಸಂರಕ್ಷಣೆ ಯೋಜನೆ’

ಮಾಣಿ ಮಠದ ಸೇವಾ ಸಮಿತಿ ಅಧ್ಯಕ್ಷ ಹಾಗೂ ಗೋಸ್ವರ್ಗ ಲೋಕಾರ್ಪಣೆ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಹಾರಕರೆ ನಾರಾಯಣ ಭಟ್ ಮಾತನಾಡಿ ‘ಗೋಸ್ವರ್ಗವು ಗೋವುಗಳ ಸಂರಕ್ಷಣೆ ಯೋಜನೆಯಾಗಿದ್ದು, ಸಾವಿರಕ್ಕೂ ಅಧಿಕ ಗೋವುಗಳ ಆಶ್ರಯತಾಣವಾಗಲಿದೆ. ಶ್ರೀರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ಭಾನ್ಕುಳಿ ಮಠದಲ್ಲಿ ಸಹಸ್ರ ಗೋವುಗಳ ಸಹಜ, ಸ್ವಚ್ಛಂದ ಬದುಕಿಗಾಗಿ ಈ ಅಪೂರ್ವ ಯೋಜನೆಯನ್ನು ಹಮ್ಮಿಕೊಂಡಿದ್ದಾರೆ. ಈ ಯೋಜನೆಯು ಇದೇ 27ರಂದು ಲೋಕಾರ್ಪಣೆಗೊಳ್ಳಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.