ADVERTISEMENT

ಮುಖ್ಯಮಂತ್ರಿ ವಿರುದ್ಧ ಪ್ರತಿಭಟನೆಗೆ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 24 ಜನವರಿ 2012, 11:10 IST
Last Updated 24 ಜನವರಿ 2012, 11:10 IST

ಬೆಳ್ತಂಗಡಿ: ಇದೇ 28 ರಂದು ವೇಣೂರಿನ ಭಗವಾನ್ ಬಾಹುಬಲಿ ಮಹಾ ಮಸ್ತಕಾಭಿಷೇಕ ಕಾರ್ಯಕ್ರಮ ಉದ್ಘಾಟಿಸಲು ವೇಣೂರಿಗೆ ಆಗಮಿಸಲಿರುವ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ವಿರುದ್ಧ ಕಾನೂನಿನ ಚೌಟ್ಟಿನೊಳಗೆ ಪ್ರತಿಭಟನೆ ನಡೆಸಲು ರಸ್ತೆ ಸಂತ್ರಸ್ತರು ನಿರ್ಧರಿಸಿದ್ದಾರೆ.

ಬೆಳ್ತಂಗಡಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂತ್ರಸ್ತರು, ಇದೇ 15ರೊಳಗೆ ಜಿಲ್ಲೆಯ ಎಲ್ಲ ಸಂಪರ್ಕ ರಸ್ತೆ ದುರಸ್ತಿಗೆ ಸರ್ಕಾರ ವ್ಯವಸ್ಥೆ ಮಾಡಿದೆ ಎಂದು ಮುಖ್ಯಮಂತ್ರಿ ನೀಡಿದ ಹೇಳಿಕೆ ಹುಸಿಯಾಗಿದೆ.

ಇದೇ 28ರೊಳಗೆ ತಾಲ್ಲೂಕಿನ ಎಲ್ಲ ರಸ್ತೆಗಳ ದುರಸ್ತಿ ಕಾರ್ಯ ಮಾಡುವಂತೆ ಇಲಾಖಾಧಿಕಾರಿಗಳಿಗೆ ಅವರು ಕಟ್ಟುನಿಟ್ಟಿನ ಆದೇಶ ನೀಡದೆ ಇದ್ದರೆ ವೇಣೂರಿಗೆ ಶನಿವಾರ ಅವರು ಆಗಮಿಸುವ ಸಂದರ್ಭ ಪ್ರತಿಭಟನೆ ನಡೆಸಲಾಗುವುದು ಎಂದರು.

ಮಹಾಮಸ್ತಕಾಭಿಷೇಕದ ಹಿನ್ನೆಲೆಯಲ್ಲಿ ವೇಣೂರನ್ನು ಸಂಪರ್ಕಿಸುವ ಎಲ್ಲ ರಸ್ತೆ ದುರಸ್ತಿಯಾಗಬೇಕು. ವೇಣೂರಿನಲ್ಲಿ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಮೂಲ ಸೌಕರ್ಯಒದಗಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.

ಹೋರಾಟ ಸಮಿತಿ ಸಂಚಾಲಕ ದೇವಿಪ್ರಸಾದ್, ಜಿ.ಪಂ. ಮಾಜಿ ಸದಸ್ಯ ಪಿ. ಧರಣೇಂದ್ರ ಕುಮಾರ್, ವೇಣೂರು ಗ್ರಾ.ಪಂ. ಅಧ್ಯಕ್ಷ ದೇಜಪ್ಪ ಶೇಟ್ಟಿ, ಉಪಾಧ್ಯಕ್ಷೆ ವಿಮಲಾ, ಸತೀಶ್ ಹೆಗ್ಡೆ, ಕೇಶವ ಪೂಜಾರಿ , ಜನಾರ್ದನ, ವಿಕ್ಟರ್ ಮಿನೇಜಸ್, ಶ್ರೀಪತಿ ಉಪಾಧ್ಯಾಯ ಸುದ್ದಿಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.