ADVERTISEMENT

‘ಮೇಸ್ತ ಕೊಲೆ ಪ್ರಕರಣ ಎನ್‌ಐಎಗೆ ವಹಿಸಿ’

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2017, 5:22 IST
Last Updated 27 ಡಿಸೆಂಬರ್ 2017, 5:22 IST

ಮಂಗಳೂರು: ವಿಜಯಪುರದ ದಲಿತ ಬಾಲಕಿ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಿರುವುದು ಹಾಗೂ ಹೊನ್ನಾವರದ ಪರೇಶ್‌ ಮೇಸ್ತ ಕೊಲೆಯನ್ನು ಖಂಡಿಸಿ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ರಾಷ್ಟ್ರೀಯ ಹಿಂದೂ ಆಂದೋಲನ ನಡೆಸಲಾಯಿತು.

ವಿಜಯಪುರದಲ್ಲಿ ಶಾಲಾ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ, ಆಕೆಯನ್ನು ಹತ್ಯೆ ಮಾಡಲಾಗಿದ್ದು, ಇದು ಅತ್ಯಂತ ಹೇಯ ಮತ್ತು ಬರ್ಬರ ಕೃತ್ಯವಾಗಿದೆ. ಈ ಪ್ರಕರಣದ ಆರೋಪಿಗಳಿಗೆ ಕಠೋರ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.

ಹೊನ್ನಾವರದ ಕೋಮುಗಲಭೆಯಲ್ಲಿ ಕಾಣೆಯಾದ ಪರೇಶ ಮೆಸ್ತಾ ಶವ ಕೆರೆಯಲ್ಲಿ ಪತ್ತೆಯಾಗಿದ್ದು. ಅವರ ದೇಹದ ಮೇಲೆ ಅನೇಕ ಗಾಯಗಳಾಗಿರುವುದು ಪತ್ತೆಯಾಗಿದೆ. ಈ ಪ್ರಕರಣವನ್ನು ಗಮನಿಸಿದಾಗ ಇದೊಂದು ಜಿಹಾದಿಗಳ ಕೃತ್ಯದಂತೆ ಕಾಣುತ್ತಿದ್ದು, ಈ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಬೇಕೆಂದು ಒತ್ತಾಯಿಸಿದರು.

ADVERTISEMENT

ರಾಣಿ ಪದ್ಮಾವತಿ ಕುಣಿಯುತ್ತಿರುವುದನ್ನು ತೋರಿಸಿರುವ ‘ಘೂಮರ’ ಹಾಡನ್ನು ಪದ್ಮಾವತಿ ಚಲನಚಿತ್ರದಿಂದ ತೆಗೆಯಬೇಕು. ಹಿಂದುತ್ವವಾದಿ ಸಂಘಟನೆಗಳ ಸದಸ್ಯರಿಗೆ ಈ ಚಲನಚಿತ್ರವನ್ನು ತೋರಿಸಿ, ಅವರ ಸಂಶಯವನ್ನು ನಿವಾರಣೆಗೊಳಿಸಿದ ನಂತರವೇ ಚಲನಚಿತ್ರಕ್ಕೆ ಪ್ರಮಾಣ ಪತ್ರ ನೀಡಬೇಕು ಎಂದು ಮನವಿ ಮಾಡಿದರು.

ವಾಯುಮಾಲಿನ್ಯಕ್ಕೆ ಕಾರಣವಾಗಿರುವ ಪಟಾಕಿಗಳ ಮೇಲೆ ಕೇವಲ ದೀಪಾವಳಿಯ ಸಮಯದಲ್ಲಷ್ಟೇ ಅಲ್ಲ, ಡಿಸೆಂಬರ 31ರ ಸಂದರ್ಭದಲ್ಲಿಯೂ ನಿಷೇಧಿಸಬೇಕು ಎಂದು ಆಗ್ರಹಿಸಿದರು.

ಕಾಶ್ಮೀರ ಕಣಿವೆಯಲ್ಲಿ ಸೈನಿಕರ ಮೇಲೆ ಕಲ್ಲೆಸೆಯುವುದು, ಭಾರತದ ರಾಷ್ಟ್ರಧ್ವಜವನ್ನು ಸುಡುವುದು, ಭಾರತ ವಿರೋಧಿ ಘೋಷಣೆಯನ್ನು ಕೂಗುವುದು ಮುಂತಾದ ದೇಶವಿರೋಧಿ ಕೃತ್ಯಗಳನ್ನು ಮಾಡಲಾಗುತ್ತಿದೆ. ಆ ಸಮಯದಲ್ಲಿ ನಡೆದ ಹಿಂಸಾಚಾರದಲ್ಲಿ ಸುರಕ್ಷಾ ದಳದ 4,515 ಸೈನಿಕರು ಹಾಗೂ 3,356 ನಾಗರಿಕರು ಗಾಯಾಳುಗಳಾಗಿದ್ದಾರೆ. ಹೀಗಿರುವಾಗ ಕಲ್ಲೆಸೆತೆದಲ್ಲಿ ಮೊದಲ ಬಾರಿಗೆ ಭಾಗವಹಿಸಿದ್ದ ಸುಮಾರು 4,500 ಕ್ಕಿಂತ ಅಧಿಕ ಯುವಕರ ಮೇಲೆ ದಾಖಲಿಸಲಾಗಿದ್ದ ದೂರನ್ನು ಹಿಂತೆಗೆದುಕೊಳ್ಳುವ ನಿರ್ಣಯ ತೆಗೆದುಕೊಳ್ಳಬಾರದು ಎಂದೂ ಮನವಿ ಮಾಡಲಾಯಿತು.

ಹಿಂದೂ ಜನಜಾಗೃತಿ ಸಮಿತಿಯ ಉಪೇಂದ್ರ ಆಚಾರ್ಯ, ಹಿಂದೂ ಮಹಾಸಭಾದ ಧರ್ಮೇಂದ್ರ, ಮಧುಸೂದನ ಅಯಾರ, ಹಿಂದೂ ಜನಜಾಗೃತಿ ಸಮಿತಿ, ಹಿಂದೂ ಮಹಾಸಭಾ ಮುಂತಾದ ಸಂಘಟನೆಗಳು ಸದಸ್ಯರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.