ADVERTISEMENT

ಯಕ್ಷಗಾನ ಕಾರ್ಯಾಗಾರ ನಾಳೆಯಿಂದ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2011, 9:50 IST
Last Updated 18 ಫೆಬ್ರುವರಿ 2011, 9:50 IST

ಸುಳ್ಯ: ಇಲ್ಲಿನ ತೆಂಕುತಿಟ್ಟು ಯಕ್ಷಗಾನ ಹಿತರಕ್ಷಣಾ ವೇದಿಕೆ  ವತಿಯಿಂದ ಇದೇ 19 ಮತ್ತು 20 ರಂದು ಬೆಳಗ್ಗೆ 10 ರಿಂದ ಸಂಜೆ 5ರ ವರೆಗೆ ಸುಳ್ಯದ ನೆಹರೂ ಸ್ಮಾರಕ ಕಾಲೇಜಿನಲ್ಲಿ ಯಕ್ಷಗಾನ ರಂಗಭಾಷೆಯ ಅಧ್ಯಯನ ಕಾರ್ಯಾಗಾರ  ನಡೆಯಲಿದೆ. ಬಲಿಪ ನಾರಾಯಣ ಭಾಗವತರ ನಿರ್ದೇಶನದಲ್ಲಿ ನಡೆಯಲಿರುವ ಈ ಕಾರ್ಯಾಗಾರದಲ್ಲಿ ನಾಟ್ಯಾಭಿನಯದ ನಿರ್ದೇಶನವನ್ನು ಕೇರಳ ಯಕ್ಷಗಾನ ಅಕಾಡೆಮಿ ಸದಸ್ಯ ಕಲ್ಲುಗುಂಡಿ ಶೀನಪ್ಪ ರೈ ಮತ್ತು ಸುಬ್ಬಣಕೋಡಿ ರಾಮ ಭಟ್ ಮಾಡಲಿದ್ದಾರೆ.
 
ಸಂಪನ್ಮೂಲ ವ್ಯಕ್ತಿಗಳಾಗಿ ಪೆರುವೋಡಿ, ಪಾತಾಳ, ದೇವಕಾನ, ಗುಂಡ್ಯಡ್ಕ, ಮಹಾಬಲ ಕಲ್ಮಡ್ಕ ಮುಂತಾದವರು ಸಹಕರಿಸಲಿದ್ದಾರೆ.ಮಂಗಳೂರು ವಿಶ್ವವಿದ್ಯಾಲಯದ ಡಾ.ಪಿ.ದಯಾನಂದ ಪೈ ಮತ್ತು ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಹಾಗೂ ನೆಹರೂ ಸ್ಮಾರಕ  ಕಾಲೇಜುಗಳ ಸಹಯೋಗದಲ್ಲಿ ನಡೆಯಲಿರುವ ಈ ಕಾರ್ಯಾಗಾರದಲ್ಲಿ ಯಕ್ಷಗಾನದ ವ್ಯವಸಾಯಿ ಹಾಗೂ ಹವ್ಯಾಸಿ ಕಲಾವಿದರು ಮುಕ್ತ ಚರ್ಚೆಯಲ್ಲಿ ಹಾಗೂ ಪ್ರಯೋಗದಲ್ಲಿ ಭಾಗವಹಿಸಲಿದ್ದಾರೆ.

ಮಂಗಳೂರು ವಿಶ್ವವಿದ್ಯಾಲಯದ ಕುಲಸಚಿವ ಡಾ.ಕೆ.ಚಿನ್ನಪ್ಪಗೌಡ ಕಮ್ಮಟವನ್ನು ಉದ್ಘಾಟಿಸಲಿದ್ದಾರೆ. ಯಕ್ಷಗಾನ ತಜ್ಞ ಡಾ.ಎಂ.ಪ್ರಭಾಕರ ಜೋಷಿ ಆಶಯ ಭಾಷಣ ಮಾಡಲಿದ್ದಾರೆ. ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಉಪಾಧ್ಯಕ್ಷ ಡಾ.ಕೆ.ವಿ.ಚಿದಾನಂದ ಅಧ್ಯಕ್ಷತೆ ವಹಿಸಲಿದ್ದಾರೆ. ಪಡ್ಡಂಬೈಲು ವೆಂಕಟರಮಣ ಗೌಡ ಮುಖ್ಯ ಅತಿಥಿಗಳಾಗಿರುತ್ತಾರೆ.

ಸಮಾರೋಪ ಸಮಾರಂಭದಲ್ಲಿ ಬಲಿಪ ನಾರಾಯಣ ಭಾಗವತರು ಸಮಾರೋಪ ಭಾಷಣ ಮಾಡಲಿದ್ದಾರೆ. ಶಾಸಕ ಎಸ್.ಅಂಗಾರ ಅಧ್ಯಕ್ಷತೆ ವಹಿಸಲಿದ್ದು, ಶೋಭಾ ಚಿದಾನಂದ ಮತ್ತು ಕೆ.ವಿ.ಹೇಮನಾಥ್ ಮುಖ್ಯ ಅತಿಥಿಗಳಾಗಿರುತ್ತಾರೆ. ಈ ಕಮ್ಮಟದಲ್ಲಿ ಭಾಗವಹಿಸಲು ಕಲಾಸಕ್ತರಿಗೆ ಮುಕ್ತ ಆಹ್ವಾನವಿದೆ ಎಂಬುದಾಗಿ ತೆಂಕುತಿಟ್ಟು ಯಕ್ಷಗಾನ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಡಾ.ಚಂದ್ರಶೇಖರ ದಾಮ್ಲೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.