ಸುಬ್ರಹ್ಮಣ್ಯ: ನಗರ ಕೇಂದ್ರೀಕೃತವಾದ ಯುವಜನಾಂಗದ ಮನಸ್ಸನ್ನು ಗ್ರಾಮೀಣ ಸುಖದ ಕಡೆಗೆ ತಿರುಗಿಸಿ. ಈ ನೆಲದಲ್ಲೂ ಕೂಡಾ ಸುಖವಿದೆ, ಉತ್ತಮ ಆರೋಗ್ಯ, ಸ್ವಚ್ಚ ಗಾಳಿ, ನೀರು, ಆಹಾರವಿದೆ. ಇದು ಬೇರೆಲ್ಲಿಯೂ ಸಿಗಲಾರದು ಎಂಬುದನ್ನು ಹಿರಿಯರು ತಿಳಿ ಹೇಳಬೇಕು ಎಂದು ಬೆಳ್ಳಾರೆ ಶಿವರಾಮಕಾರಂತ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಡಾ.ನರೇಂದ್ರ ರೈ ದೇರ್ಲ ಹೇಳಿದರು.
ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದಲ್ಲಿ ಭಾನುವಾರ ನಡೆದ ಪೋಷಕರ ಸಹಮಿಲನದಲ್ಲಿ ‘ಕೃಷಿ ಮತ್ತು ಶಿಕ್ಷಣ’ ಎಂಬ ವಿಷಯದ ಕುರಿತಾಗಿ ಉಪನ್ಯಾಸ ನೀಡಿದ ಅವರು ಹಚ್ಚಹಸಿರಿನ ಅರಣ್ಯ ನಮಗೆ ಜೀವಿತವನ್ನು ನೀಡುವ ಅತ್ಯಮೂಲ್ಯ ಸಂಪತ್ತು. ಅದ್ದರಿಂದ ನಾವು ಪ್ರಕೃತಿಯನ್ನು ಮೀರಿ ನಡೆಯಬಾರದು ಎಂದರು.
ವಿದ್ಯಾಸಂಸ್ಥೆಯಲ್ಲಿ ಕೃಷಿಯ ಬಗ್ಗೆ ತಿಳಿವಳಿಕೆ ನೀಡುತ್ತಿರುವುದು ಸಾಂಸ್ಕೃತಿಕ ಜೀವಂತಿಕೆಗೆ ಸಾಕ್ಷಿ. ಆಧುನಿಕ ಯುಗದಲ್ಲಿ ಮಾಹಿತಿ ಕೇಳುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಅದರಲ್ಲೂ ಯುವಪೀಳಿಗೆ ನಗರ ಮೋಹಕ್ಕೆ ಬಲಿಯಾಗಿ ಪಟ್ಟಣದ ವಿಷಪೂರಿತ ವಾತಾವರಣದಲ್ಲಿ ಬೆರೆಯುತ್ತಿದ್ದಾರೆ. ಗ್ರಾಮೀಣ ಯುವ ಪ್ರತಿಭೆಗಳನ್ನು ಪಾರಂಪರಿಕ ಕೃಷಿ ವ್ಯವಸ್ಥೆಗೆ ಪ್ರೇರೇಪಿಸುವಂತೆ ತಂದೆ ತಾಯಿ ಮಾಡಬೇಕು ಎಂದರು.
ವಿದ್ಯಾಲಯದ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಹಾಗೂ ಜಿ.ಪಂ.ಸದಸ್ಯ ಕೆ.ಎಸ್. ದೇವರಾಜ್ ಅಧ್ಯಕ್ಷತೆ ವಹಿಸಿದ್ದರು.ನಿವೃತ್ತ ಕನ್ನಡ ಉಪನ್ಯಾಸಕ ವಿದ್ವಾನ್ ಕೇಶವ ಭಟ್ ಸಹಮಿಲನ ಉದ್ಘಾಟಿಸಿದರು. ವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷ ಗಣೇಶ್‌ಪ್ರಸಾದ್ ಸಂಚಾಲಕ ಚಂದ್ರಶೇಖರ್ ನಾಯರ್, ಸದಸ್ಯರಾದ ಟಿ.ವೆಂಕಟರಮಣ ಭಟ್, ಗೋಪಾಲ್‌ರಾವ್ ಬಿಳಿನೆಲೆ, ಶಿವರಾಮ್ ಏನೆಕಲ್, ಮುಖ್ಯೋಪಾಧ್ಯಾಯಿನಿ ವಿದ್ಯಾರತ್ನ, ಶಿಕ್ಷಕಿ ಪ್ರಮೀಳಾ.ಎ, ಪ್ರಮೀಳಾ ಎಂ.ಇದ್ದರು. ವಿದ್ಯಾಲಯದ ವತಿಯಿಂದ ದೇವರಾಜ್ ಕೆ.ಎಸ್. ಮತ್ತು ಗೋಪಾಲ್‌ರಾವ್ ಅವರನ್ನು ಸನ್ಮಾನಿಸಲಾಯಿತು. ಬಳಿಕ ಹೆತ್ತವರಿಗಾಗಿ ವಿವಿಧ ಸ್ಪರ್ಧೆ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.