ADVERTISEMENT

ರಂಜಿಸಿದ ಕಂಬಳ, ಹಗ್ಗಜಗ್ಗಾಟ, ಕೆಸರುಗದ್ದೆ ಓಟ

ಕದ್ರಿ ಮಂಜುನಾಥ ದೇವರ ಕಂಬಳ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2012, 8:39 IST
Last Updated 3 ಡಿಸೆಂಬರ್ 2012, 8:39 IST

ಮಂಗಳೂರು: ಮೊಣಕಾಲಿನವರೆಗೆ ನಿಂತ ನೀರು. ಜಾರುವ ಕೆಸರು. ಮೈಗಂಟಿದ ಮಣ್ಣಿನ ವಾಸನೆ. ಮೇಲೆ ಸುಡುವ ಬಿಸಿಲು. ಇವು ಯಾವುದೂ ಅವರ ಉತ್ಸಾಹಕ್ಕೆ ಅಡ್ಡಿ ಬರಲಿಲ್ಲ. ನಿರೂಪಕರ ಪ್ರೋತ್ಸಾಹದ ನುಡಿ, ನೋಡುಗರ ಖುಷಿಯ ಕೇಕೆ. ಹಿನ್ನೆಲೆಯಲ್ಲಿ ವಾದ್ಯದವರ ಕೊಲವರಿ ಡಿ ಹಾಡು ಅವರ ಉತ್ಸಾಹವನ್ನು ದುಪ್ಪಟ್ಟುಗೊಳಿಸಿತ್ತು. ಚಲ್ಲಣ ಬಿಗಿದು, ಅವುಡು ಕಚ್ಚಿ, ಕೊಸರಾಡುತ್ತ ಕೈಯಲ್ಲಿ ಮಣ ಭಾರದ ಹಗ್ಗವನ್ನು ಹಿಡಿದು ಜಗ್ಗಿದ್ದೇ ಜಗ್ಗಿದ್ದು..

- ಇದು ಭಾನುವಾರ ನಗರದ ಕದ್ರಿ ಕಂಬಳದ ಕೆಸರು ಗದ್ದೆಯಲ್ಲಿ ನಡೆದ ಹಗ್ಗ ಜಗ್ಗಾಟದ ಒಂದು ನೋಟ ಅಷ್ಟೆ. ಹಗ್ಗ ಜಗ್ಗಾಟದ ಸ್ಪರ್ಧೆಗಾಗಿ ಪುರುಷರ ಹಾಗೂ ಮಹಿಳೆಯರ ಹಲವು ತಂಡಗಳು ಗದ್ದೆಗೆ ಇಳಿದಿತ್ತು. ಹತ್ತು ಮಂದಿಯ ತಂಡದ ಸದಸ್ಯರಿಗೆ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳು ಸಾಥ್ ನೀಡುವ ಮೂಲಕ ಹುರಿದುಂಬಿಸಿದರು. ಎಲ್ಲರಲ್ಲೂ ಪುಟಿದೇಳುವ ಉತ್ಸಾಹ. ಜಗ್ಗಾಟದಲ್ಲಿ ಕೆಲವು ತಂಡಗಳು ಸಮ ಬಲ ಸಾಧಿಸಿ ಕೂತೂಹಲ ಇಮ್ಮಡಿಗೊಳಿಸಿದವು.

ಕಂಬಳ ಗದ್ದೆಯ ಸುತ್ತ ಮುತ್ತಿಕೊಂಡು ಇಣುಕುತ್ತಿದ್ದ ಪ್ರೇಕ್ಷಕರು ಬಿಸಿಲನ್ನು ಲೆಕ್ಕಿಸದೆ ಹಗ್ಗ ಜಗ್ಗಾಟದ ಕಟ್ಟಾಳುಗಳನ್ನು  ಪ್ರೋತ್ಸಾಹಿಸಿದರು. ಆರಂಭದಲ್ಲಿ ತೆಂಗಿನ ಹಿಂಗಾರವನ್ನು ಬಿಡಿಸಿ ಅದರ ಹೂವನ್ನು ಅರಳಿಸುವ ಮೂಲಕ ಹಗ್ಗಜಗ್ಗಾಟದ ಸ್ಪರ್ಧೆಗೆ ಚಾಲನೆ ನೀಡಲಾಯಿತು.

ಬೆಳಿಗ್ಗೆ 8.30ಕ್ಕೆ  ಕ್ರೀಡೋತ್ಸವಕ್ಕೆ ಚಾಲನೆ ದೊರೆತು ಮೊದಲಿಗೆ ಕೆಸರು ಗದ್ದೆ ಓಟದ ಸ್ಪರ್ಧೆ ನಡೆಯಿತು. ಗದ್ದೆಯಲ್ಲಿ ಎದ್ದು ಬಿದ್ದು ಓಡಿದ ಕ್ರೀಡಾಪಟುಗಳು ಪ್ರೇಕ್ಷಕರಿಗೆ ಮುದ ನೀಡಿದರು.

ಪ್ರಧಾನ ವೇದಿಕೆಯ ಮುಂಭಾಗದಲ್ಲಿ ನಡೆದ `ನಿಧಿ ಶೋಧ' ಸ್ಪರ್ಧೆಯಂತೂ ಮಕ್ಕಳನ್ನು ಬಹುವಾಗಿ ರಂಜಿಸಿತು. ರಾಶಿ ಹಾಕಿದ ಮರಳಿನ ನಡುವೆ ಹುದುಗಿಸಿಟ್ಟ ಚಾಕೊಲೆಟ್ ಡಬ್ಬ, ಮೂಸಂಬಿ ಸೇರಿದಂತೆ ಆಕರ್ಷಕ ಇನಾಮುಗಳಿಗಾಗಿ ಪುಟಾಣಿ ಮಕ್ಕಳು ಮರಳಿನ ರಾಶಿ ಮೇಲೆ ಮುಗಿಬಿದ್ದು ತಡಕಾಡಿದರು. ಇನಾಮು ಸಿಕ್ಕಿದವರು ಖುಷಿಯಿಂದ ಬೀಗಿದರು. ಇನಾಮು ಗಿಟ್ಟಿಸಲು ಕುತೂಹಲಿಗಳು ನಿಯಮ ಮೀರಿ ಮುಗಿ ಬಿದ್ದಿದ್ದರಿಂದ ಸ್ಪರ್ಧೆಯಲ್ಲಿ ಸ್ವಲ್ಪ ಗೊಂದಲ ಉಂಟಾಯಿತು.

ಬಳಿಕ ನಡೆದ `ತುಳುನಾಡ ತಪ್ಪಂಗಾಯಿ' ಸ್ಪರ್ಧೆ ರೋಚಕವಾಗಿತ್ತು. ಸುಲಿದ ತೆಂಗಿನಕಾಯಿಯನ್ನು ನಯವಾಗಿಸಿ, ನುಣ್ಣಗೆ ಮಾಡಿ ಎಣ್ಣೆ ಬಳಿದಿದ್ದರಿಂದ ಕೈ ಹಿಡಿತಕ್ಕೆ ಸಿಗದೆ ಜಾರುತ್ತಿತ್ತು. ನಿರ್ದಿಷ್ಟ ಗುರಿಗೆ ಕಾಯಿಯನ್ನು ಒಯ್ಯಲು ನಡೆದ ಪೈಪೋಟಿ ನೋಡುಗರನ್ನು ರೋಮಾಂಚನಗೊಳಿಸಿತು.

ಬೈಲುಮೇಗಿನಮನೆ ನಾಗರಾಜ್ ಶೆಟ್ಟಿ, ಕದ್ರಿ ನವನೀತ ಶೆಟ್ಟಿ, ಭಾಸ್ಕರ ಶೆಟ್ಟಿ, ಎಸ್.ಪ್ರದೀಪ ಕುಮಾರ ಕಲ್ಕೂರ, ಡಾ. ಕೆ.ಎನ್. ವಿಜಯಪ್ರಕಾಶ್, ಡಾ.ಪಿ.ಎಸ್.ಯಡಪಡಿತ್ತಾಯ ಮೊದಲಾದವರು ಭಾಗವಹಿಸಿದ್ದರು.

ಕೋಣ ಓಡಿಸುವ ಸ್ಟ್ರಾಂಗ್ ಇಂಡಿಯನ್ಸ್ ಕಂಡೆ: ಇಸ್ರೇಲ್ ಅತಿಥಿ ಗೊಲನ್

ADVERTISEMENT

ಆ ವಿದೇಶಿ ಯುವಕನ ಹೆಸರು ಗಾಯ್ ಗೊಲನ್. ಇಸ್ರೇಲ್ ದೇಶದ ಪ್ರಜೆ. ಒಂದಷ್ಟು ವರ್ಷ ಇಸ್ರೇಲ್ ಸೇನೆಯಲ್ಲಿ ದುಡಿದ ಗೊಲನ್‌ಗೆ ಪ್ರಪಂಚ ಸುತ್ತುವ ಹುಚ್ಚು. ಒಬ್ಬಂಟಿಯಾಗಿ ಮೂರು ತಿಂಗಳ ಅವಧಿಗೆ ಭಾರತಕ್ಕೆ ಪ್ರವಾಸ ಬಂದಿದ್ದಾರೆ. ವಾರಣಾಸಿ, ದಾರ್ಜಿಲಿಂಗ್, ಸಿಕ್ಕಿಂ, ಸಿಲಿಗುರಿ, ಕೊಲ್ಕೊತ್ತ, ಪುರಿ ಸೇರಿದಂತೆ ಭಾರತದ ಪೂರ್ವದ ಕಡಲ ತೀರದಲ್ಲಿ ಪ್ರವಾಸ ಮುಗಿಸಿದ್ದಾರೆ.

ಇದೀಗ ಪಶ್ಚಿಮ ಕಡಲ ತೀರದಲ್ಲಿ ಪ್ರವಾಸ ಬೆಳೆಸಿರುವ ಗೊಲನ್‌ಗೆ ನಮ್ಮ ಕರಾವಳಿಯ ಕೋಣಗಳ ಓಟದ ಸ್ಪರ್ಧೆ `ಕಂಬಳ' ಬಹಳ ಖುಷಿ ನೀಡಿದೆಯಂತೆ. ಇಂಟರ್‌ನೆಟ್ ಮೂಲಕ ಕಂಬಳದ ಬಗ್ಗೆ ಮಾಹಿತಿ ಪಡೆದ ಗೊಲನ್ ಶನಿವಾರ ಬೆಳ್ತಂಗಡಿ ಸಮೀಪದ ಕೊಲ್ಲಿಯಲ್ಲಿ ನಡೆದ ಕಂಬಳ ನೋಡಿ ರೋಮಾಂಚನಗೊಂಡರಂತೆ. `ನಾನಲ್ಲಿ ಕಂಬಳದ ಕೋಣಗಳನ್ನು ಓಡಿಸುವ ಸ್ಟ್ರಾಂಗ್ ಇಂಡಿಯನ್ಸ್ ಕಂಡೆ' ಎಂದು ಖುಷಿಯಿಂದ ಹೇಳಿದರು ಗೊಲನ್.

ಇವರು ಮಂಗಳೂರಿಗೆ ಬಂದು ಮಾಹಿತಿ ಪಡೆದು ಕದ್ರಿ ಕಂಬಳ ಜಾಗ ಹುಡುಕಿಕೊಂಡು ಬಂದಿದ್ದಾರೆ. ಕರಾವಳಿಯ ಜನ ತುಂಬ ಒಳ್ಳೆಯವರು. ಇಲ್ಲಿನ ಸಂಸ್ಕೃತಿ, ವಿವಿಧ ಭಾಷೆಗಳು ಬಹಳ ವಿಶಿಷ್ಟವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು ಗೊಲನ್.

ಕಂಬಳ ಸ್ಪರ್ಧೆಯ ವಿಜೇತರು
ಕನೆ ಹಲಗೆ ವಿಭಾಗ
ಪ್ರಥಮ:
ಗುರುಪುರ ಕೆದುಬರಿ ಗುರುವಪ್ಪ ಪೂಜಾರಿ (ಕೋಣ ಓಡಿಸಿದವರು ನಾರಾಯಣಪ್ಪ ಸಾಲ್ಯಾನ್)
ಹಗ್ಗ ಹಿರಿಯ
ಪ್ರಥಮ
: ಪಲಿಮಾರು ಅಗ್ಗದಕಳಿಯ ಗಣೇಶ ನಾರಾಯಣ ದೇವಾಡಿಗ (ಕೋಣ ಓಡಿಸಿದವರು ದಿನೇಶ ಕೋಟ್ಯಾನ್ ಪಲಿಮಾರು).
ದ್ವಿತೀಯ: ಮೋರ್ಲ ಗಿರೀಶ್ ಆಳ್ವ (ಕೋಣ ಓಡಿಸಿದವರು ರೆಂಜಾಳ ಸುರೇಶ)
ಹಗ್ಗ ಕಿರಿಯ
ಪ್ರಥಮ:
ಜಪ್ಪು ಮಂಕುತೋಟಗುತ್ತು ಅನಿಲ್ ಶೆಟ್ಟಿ (ಕೋಣ ಓಡಿಸಿದವರು ದಿನೇಶ್ ಕೋಟ್ಯಾನ್ ಪಲಿಮಾರು).
ದ್ವಿತೀಯ: ಕೊಂಡಾಣ ನಾರಾಯಣ ರೈ (ಕೋಣ ಓಡಿಸಿದವರು ರೋಹಿತ್ ಹಳೆಯಂಗಡಿ)
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.