ADVERTISEMENT

`ರಾಮನ ನಾಯಕತ್ವ ಗುಣ ಆದರ್ಶವಾಗಲಿ'

ಹನುಮ ಜಯಂತಿ - ವಿಶೇಷ ಧಾರ್ಮಿಕ ಸಭೆ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2013, 9:56 IST
Last Updated 26 ಏಪ್ರಿಲ್ 2013, 9:56 IST
ವಿಟ್ಲದ ಒಡಿಯೂರು ಗುರುದೇವದತ್ತ ಕ್ಷೇತ್ರದಲ್ಲಿ ಹನುಮಜಯಂತಿ ಅಂಗವಾಗಿ ಗುರುವಾರ ನಡೆದ ವಿಶೇಷ ಧಾರ್ಮಿಕ ಸಭೆಯಲ್ಲಿ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು.
ವಿಟ್ಲದ ಒಡಿಯೂರು ಗುರುದೇವದತ್ತ ಕ್ಷೇತ್ರದಲ್ಲಿ ಹನುಮಜಯಂತಿ ಅಂಗವಾಗಿ ಗುರುವಾರ ನಡೆದ ವಿಶೇಷ ಧಾರ್ಮಿಕ ಸಭೆಯಲ್ಲಿ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು.   

ವಿಟ್ಲ: `ಕಪಿ ಸೈನ್ಯವನ್ನೂ ಒಗ್ಗೂಡಿಸಿ ಸೇತು ನಿರ್ಮಾಣ ಮಾಡಿಸಿದ ಶ್ರಿರಾಮನ ಮಹಾ ನಾಯಕತ್ವ ಗುಣ ನಮಗೆ ಆದರ್ಶವಾಗಬೇಕು. ಪಾರದರ್ಶಕ ಆಡಳಿತದಿಂದ ಮಾತ್ರ ರಾಮರಾಜ್ಯ ನಿರ್ಮಾಣವಾಗಬಹುದು' ಎಂದು ಒಡಿಯೂರು ಗುರುದೇವದತ್ತ ಕ್ಷೇತ್ರದ ಗುರುದೇವಾನಂದ ಸ್ವಾಮೀಜಿ ಹೇಳಿದರು. 

ಹನುಮ ಜಯಂತಿ ಅಂಗವಾಗಿ ಒಡಿಯೂರು ಗುರುದೇವದತ್ತ ಕ್ಷೇತ್ರದಲ್ಲಿ ಗುರುವಾರ ನಡೆದ ವಿಶೇಷ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
`ಧರ್ಮದ ಮೂಲಸತ್ವದ ಕಾರಣ ನಾವು ಅನ್ಯೋನ್ಯವಾಗಿ ಬದುಕುತ್ತಿದ್ದೇವೆ. ಬದುಕು ಕಲೆಯಾದಾಗ ಶ್ರೇಷ್ಠತೆ ಪಡೆಯಲು ಸಾಧ್ಯ' ಎಂದು ತಿಳಿಸಿದ ಅವರು, `ನಮ್ಮ ಬದುಕಿಗೂ ನೀತಿ ಸಂಹಿತೆಯಿದ್ದಾಗ ಸುಂದರವಾಗಿ ಬಾಳು ನಡೆಸಬಹುದು, ಸುಖ ಇರುವ ಕಡೆ ದುಃಖವೂ ಇದೆ. ಆಂಜನೇಯನ ಬದುಕು ನಮಗೆ ನಿತ್ಯ ಸಂದೇಶವಾಗಬೇಕು' ಎಂದು ತಿಳಿಸಿದರು.

ನಟಿ ಗಾಯತ್ರಿ ಪ್ರಭಾಕರ್ ಮಾತನಾಡಿ, `ಮಾನವೀಯ ಅಂತಃಕರಣಕ್ಕೆ ಮಿಡಿಯುವುದರಿಂದ ಮಾತ್ರ ಧರ್ಮ ಕಾರ್ಯ ಮಾಡಲು ಸಾಧ್ಯ. ಒಡಿಯೂರು ಕ್ಷೇತ್ರದಲ್ಲಿ ನಿಸ್ವಾರ್ಥ ಸಾಮಾಜಿಕ ಕಾರ್ಯ ನಡೆಯುತ್ತದೆ' ಎಂದರು.

ಸಾಧ್ವಿ ಮಾತಾನಂದಮಯಿ, ಗುರುವಾಯನಕೆರೆ ವಿಜಯ ಕ್ರೆಡಿಟ್ ಕೋ-ಆಪ್ ಸೊಸೈಟಿಯ ಅಧ್ಯಕ್ಷ ಎಸ್. ಜಯರಾಮ ಶೆಟ್ಟಿ, ಬಾಯಾರು ಪಂಚಲಿಂಗೇಶ್ವರ ದೇವಾಲಯ ಆಡಳಿತ ಮೊಕ್ತೇಸರ ಪೆರ್ವೋಡಿ ರಮಾನಂದ ಭಂಡಾರಿ, ಬಂಟ್ವಾಳ ಎಪಿಎಂಸಿ ಅಧ್ಯಕ್ಷ ನೇಮಿರಾಜ್ ರೈ ಬೋಳಂತೂರು, ಪುಣೆಯ ಉದ್ಯಮಿ ಎಂ. ಬಾಲಕೃಷ್ಣ ಹೆಗ್ಡೆ, ಥಾಣೆ ಜಯರಾಮ ಟಿ. ಸಾಂತ, ಥಾಣೆ ಉದ್ಯಮಿಗಳಾದ ಗುಣಪಾಲ ಶೆಟ್ಟಿ, ಸುರೇಶ್ ಕೆ. ಶೆಟ್ಟಿ, ಚಲನಚಿತ್ರ ನಟಿ ಅನುಪ್ರಭಾಕರ್, ಗೀತಾ ರಾಜೇಶ್, ಸಂತೋಷ್ ಹೆಗ್ಡೆ, ಉದ್ಯಮಿಗಳಾದ ವಾಮಯ್ಯ ಶೆಟ್ಟಿ ಮುಂಬೈ, ರೋಹಿತ್ ಶೆಟ್ಟಿ ನಗ್ರಿಗುತ್ತು, ಕಿಶೋರಿ ಎನ್.ಶೆಟ್ಟಿ ಪುಣೆ ಇನ್ನಿತರರು ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ ದೇಗುಲದ ನೂತನ ಶಿಲಾಮಯ ಮಹಾಮಂಟಪದ ಕಾರ್ಯಕ್ಕೆ ಸ್ವಾಮೀಜಿ ಚಾಲನೆ ನೀಡಿದರು.ರೇಣುಕಾ ಎಸ್.ರೈ ಪ್ರಾರ್ಥನೆ ಹಾಡಿದರು. ಒಡಿಯೂರು ವಿಕಾಸ ಯೋಜನೆ ಪ್ರಧಾನ ಸಂಚಾಲಕ ಟಿ.ತಾರಾನಾಥ ಕೊಟ್ಟಾರಿ ಸ್ವಾಗತಿಸಿದರು. ಕ್ಷೇತ್ರದ ಕಾರ್ಯ ನಿರ್ವಾಹಕ ಜಗನ್ನಾಥ ರೈ ಅರಂತನಡ್ಕ ವಂದಿಸಿದರು. ಒಡಿಯೂರು ಶ್ರೀ ವಿಕಾಸ ಯೋಜನೆ ಮೇಲ್ವಿಚಾರಕ ಸದಾಶಿವ ಅಳಿಕೆ ಕಾರ್ಯಕ್ರಮ ನಿರೂಪಿಸಿದರು.

ಬೆಳಗ್ಗೆ ಅಖಂಡ ಭಗವನ್ನಾಮ ಸಂಕೀರ್ತನೆ ಸಮಾಪನ ನಡೆಯಿತು. ಮದ್ರಾರಾಮಾಯಣ  ಮಹಾಯಜ್ಞ ಆರಂಭಗೊಂಡಿತು, ನಾಗದೇವರಿಗೆ ಪಂಚಾಮೃತ ಅಭಿಷೇಕ, ನಾಗತಂಬಿಲ, ಕಲ್ಪೋಕ್ತ ಪೂಜೆ, ಯಾಗದ ಪೂರ್ಣಾಹುತಿ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.