ADVERTISEMENT

ರೈತಸಂಘ -ಹಸಿರುಸೇನೆ ಸಂಘಟನೆ ವಿಭಜನೆ

​ಪ್ರಜಾವಾಣಿ ವಾರ್ತೆ
Published 14 ಜೂನ್ 2013, 5:56 IST
Last Updated 14 ಜೂನ್ 2013, 5:56 IST

ಪುತ್ತೂರು: ರಾಜ್ಯ ರೈತ ಸಂಘ, ಹಸಿರು ಸೇನೆಯ ಜಿಲ್ಲಾ ಸಂಘಟನೆಯಲ್ಲಿ ಗುಂಪುಗಾರಿಕೆ ಆರಂಭಗೊಂಡಿದ್ದು, ಸಂಘಟನೆ ವಿಭಜನೆಯತ್ತ ಸಾಗಿದೆ. 
ರಾಜ್ಯ ರೈತ ಸಂಘ ಹಸಿರುಸೇನೆಯ ಜಿಲ್ಲಾಧ್ಯಕ್ಷ ರೋಹಿತಾಕ್ಷ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ಪುತ್ತೂರಿನ ಕಲ್ಲಾರೆಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಕಾರ್ಯಾಧ್ಯಕ್ಷ ಶ್ರಿಧರ್  ಶೆಟ್ಟಿ ಬೈಲುಗುತ್ತು ಅವರನ್ನು ಬದಲಾಯಿಸಲಾಗಿದೆ.

`ಯಾರೋ ಬೀದಿಯಲ್ಲಿ ಹೋಗುವವರು ಸೇರಿಕೊಂಡು ಸಂಘಟನೆಯ ಹೆಸರಿನಲ್ಲಿ ಸಭೆ ನಡೆಸಿದರೆ ಅದು ಅಧಿಕೃತ ಸಭೆಯಾಗುವುದಿಲ್ಲ. ಅದಕ್ಕೆ ಮಾನ್ಯತೆ ಸಿಗುವುದಿಲ್ಲ' ಎಂದು ಶ್ರಿಧರ್ ಶೆಟ್ಟಿ ಬೈಲುಗುತ್ತು ಪ್ರತಿಕ್ರಿಯೆ ನೀಡಿದ್ದಾರೆ.

ಕಲ್ಲಾರೆಯಲ್ಲಿ ರಾಜ್ಯ ರೈತ ಸಂಘ ಹಸಿರುಸೇನೆಯ ಜಿಲ್ಲಾಧ್ಯಕ್ಷ ರೋಹಿತಾಕ್ಷ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಳೆದ ವಿಧಾನಸಭಾ ಚುನಾವಣೆಯ ವೇಳೆ ರಾಜಕೀಯ ಪಕ್ಷವೊಂದಕ್ಕೆ ಬೆಂಬಲ ವ್ಯಕ್ತಪಡಿಸಿದ ಆರೋಪದಲ್ಲಿ ಸಂಘಟನೆಯ ಕಾರ್ಯಾಧ್ಯಕ್ಷರಾಗಿದ್ದ ಶ್ರಿಧರ್ ಶೆಟ್ಟಿ ಅವರನ್ನು ಹೊರಗಿಟ್ಟು ನೂತನ ಕಾರ್ಯಾಧ್ಯಕ್ಷರಾಗಿ ರವಿಕಿರಣ್ ಪುಣಚ ಅವರನ್ನು ಆಯ್ಕೆ ಮಾಡಲಾಗಿದೆ.

ಸಂಘಟನೆಯ ಕಾರ್ಯಾಧ್ಯಕ್ಷ ಶ್ರೀಧರ್ ಶೆಟ್ಟಿ ಅವರ ಏಕವ್ಯಕ್ತಿ ಧೋರಣೆ ಮತ್ತು ಅವರು ವಿಧಾನಸಭಾ ಚುನಾವಣೆಯ ವೇಳೆ ಒಂದು ರಾಜಕೀಯ ಪಕ್ಷಕ್ಕೆ ಬೆಂಬಲ ಸೂಚಿಸಿರುವುದು ಸರಿಯಲ್ಲ ಎಂಬ ವಾದವನ್ನು ಕೆಲ ಮುಖಂಡರು ಸಭೆಯಲ್ಲಿ ಮಂಡಿಸಿದ್ದರು.

ರಾಜ್ಯ ರೈತ ಸಂಘ ಹಸಿರು ಸೇನೆಯ ರಾಜ್ಯ ಕಾರ್ಯದರ್ಶಿ ಕುಮಾರ ಸುಬ್ರಹ್ಮಣ್ಯ ಶಾಸ್ತ್ರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಡಿಲ ಈಶ್ವರ ಭಟ್ , ವಲಯ ಮುಖಂಡರಾದ ಧರ್ಣಪ್ಪ ಗೌಡ ಇಡ್ಯಾಡಿ ,ಚೆನ್ನಪ್ಪ ಗೌಡ ಮೊದಲಾದವರ ಗಮನಕ್ಕೆ ತಾರದೆ ನಡೆಸಿದ ಸಭೆ ಅಧಿಕೃತವಾಗುವುದಿಲ್ಲ. ಆ ಸಭೆಗೆ ಯಾವ ಮಾನ್ಯತೆಯೂ ಇಲ್ಲ ಎಂದು ಶ್ರಿಧರ್ ಶೆಟ್ಟಿ ಹೇಳಿದ್ದಾರೆ.

`ನಾವು ವೈಯಕ್ತಿಕ ನೆಲೆಯಲ್ಲಿ ಶಕುಂತಳಾ ಶೆಟ್ಟಿ ಅವರಿಗೆ ಬೆಂಬಲ ನೀಡಿದ್ದೆವು. ಅನಧಿಕೃತರ ಹೇಳಿಕೆಗೆ ತಲೆಕೆಡಿಸಿಕೊಳ್ಳುವುದಿಲ್ಲ' ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.