ADVERTISEMENT

ವಿಜಯ ಬ್ಯಾಂಕ್‌ ವಿಲೀನಕ್ಕೆ ಯುಪಿಎ ಕಾರಣ: ಕಾಂಗ್ರೆಸ್‌ ವಿರುದ್ಧ ಆರೋಪ

ಬ್ಯಾಂಕ್‌ನ ನಿವೃತ್ತ ಅಧಿಕಾರಿಗಳಿಂದಆರೋಪ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2019, 9:15 IST
Last Updated 9 ಏಪ್ರಿಲ್ 2019, 9:15 IST
   

ಮಂಗಳೂರು: ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ವಿಲೀನ ಪ್ರಕ್ರಿಯೆ ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲೇ ಆರಂಭವಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹುಟ್ಟಿದ ವಿಜಯ ಬ್ಯಾಂಕ್‌ ವಿಲೀನಕ್ಕೆ ಯುಪಿಎ ಸರ್ಕಾರವೇ ಕಾರಣ ಎಂದು ವಿಜಯ ಬ್ಯಾಂಕ್‌ನ ನಿವೃತ್ತ ಅಧಿಕಾರಿಗಳ ಒಂದು ಗುಂಪು ಆರೋಪಿಸಿದೆ.

ಬ್ಯಾಂಕ್‌ನ ನಿವೃತ್ತ ಅಧಿಕಾರಿಗಳಾದ ಬಾಲಪ್ಪ ಶೆಟ್ಟಿ, ರಾಮಕೃಷ್ಣ ರೈ, ಸೋಮಶೇಖರ್‌ ಶೆಟ್ಟಿ, ಮೋಹನ್‌ ಶೆಟ್ಟಿ ಮತ್ತು ಜಯಂತ್‌ ಶೆಟ್ಟಿ ಮಂಗಳವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಈ ಆರೋಪ ಮಾಡಿದರು.

‘ಇಂದಿರಾ ಗಾಂಧಿಯವರ ಆಡಳಿತ ಕಾಲದಲ್ಲಿ ಬ್ಯಾಂಕ್‌ಗಳ ರಾಷ್ಟ್ರೀಕರಣ ನಡೆದಾಗಲೇ ವಿಜಯ ಬ್ಯಾಂಕ್‌ ಅಸ್ತಿತ್ವ ಕಳೆದುಕೊಂಡಿತ್ತು. ಯುಪಿಎ ಸರ್ಕಾರದಲ್ಲಿ ಬ್ಯಾಂಕ್‌ಗಳ ವಿಲೀನಕ್ಕಾಗಿ ನರಸಿಂಹನ್‌ ಸಮಿತಿ ನೇಮಿಸಲಾಯಿತು. ಆಗ ಕೇಂದ್ರದಲ್ಲಿ ಸಚಿವರಾಗಿದ್ದ ಆಸ್ಕರ್‌ ಫರ್ನಾಂಡಿಸ್, ವೀರಪ್ಪ ಮೊಯಿಲಿ ಸೇರಿದಂತೆ ಯಾರೊಬ್ಬರೂ ವಿರೋಧ ಮಾಡಲಿಲ್ಲ. ಯುಪಿಎ ಸರ್ಕಾರದ ನಿರ್ಧಾರವೇ ವಿಜಯ ಬ್ಯಾಂಕ್‌ ವಿಲೀನಕ್ಕೆ ಕಾರಣ’ ಎಂದು ಬಾಲಪ್ಪ ಶೆಟ್ಟಿ ದೂರಿದರು.

ADVERTISEMENT

ವಿಜಯ ಬ್ಯಾಂಕ್‌ನ ಅಭಿವೃದ್ಧಿಯ ರೂವಾರಿಯಾದ ಮೂಲ್ಕಿ ಸುಂದರರಾಮ ಶೆಟ್ಟಿಯವರ ಹೆಸರನ್ನು ನಗರದ ಲೈಟ್‌ಹೌಸ್‌ ಹಿಲ್‌ ರಸ್ತೆಗೆ ನಾಮಕರಣ ಮಾಡಲು ಮಹಾನಗರ ಪಾಲಿಕೆ ತೀರ್ಮಾನಿಸಿತ್ತು. ದಿನಾಂಕ ನಿಗದಿಯೂ ಆಗಿತ್ತು. ಆದರೆ, ಕಾಂಗ್ರೆಸ್‌ ಶಾಸಕರಾಗಿದ್ದ ಜೆ.ಆರ್‌.ಲೋಬೊ ಮತ್ತು ವಿಧಾನ ಪರಿಷತ್‌ ಸದಸ್ಯ ಐವನ್‌ ಡಿಸೋಜ ಅದನ್ನು ತಡೆದರು. ಐವನ್‌ ಡಿಸೋಜ ಪ್ರತಿಭಟನೆಯನ್ನೂ ನಡೆಸಿದ್ದರು. ಆಗ ಧ್ವನಿ ಎತ್ತದ ಕಾಂಗ್ರೆಸ್‌ ನಾಯಕರು ಈಗ ರಾಜಕೀಯಕ್ಕಾಗಿ ತಪ್ಪು ಮಾಹಿತಿ ಪ್ರಚಾರ ಮಾಡುತ್ತಿದ್ದಾರೆ ಎಂದರು.

ಸುಂದರರಾಮ ಶೆಟ್ಟಿಯವರಂತಹ ಮಹಾನ್‌ ನಾಯಕರಿಗೆ ಅವಮಾನ ಮಾಡಿದ ಮುಖಂಡರಿಗೆ ಈಗ ವಿಜಯ ಬ್ಯಾಂಕ್‌ ವಿಲೀನದ ಕುರಿತು ಮಾತನಾಡುವ ನೈತಿಕತೆ ಇಲ್ಲ. ರಸ್ತೆ ನಾಮಕರಣಕ್ಕೆ ಸಂಬಂಧಿಸಿದಂತೆ ಸತ್ಯಶೋಧನಾ ಸಮಿತಿ ನೇಮಿಸಿದ್ದ ಆಗಿನ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ನಂತರದ ದಿನಗಳಲ್ಲಿ ಯಾವುದೇ ಮಾಹಿತಿ ನೀಡಿಲ್ಲ. ಸಮಿತಿಯ ವರದಿಯನ್ನೂ ಬಹಿರಂಗಪಡಿಸಿಲ್ಲ ಎಂದು ಹೇಳಿದರು.

ರಸ್ತೆಗೆ ಸುಂದರರಾಮ ಶೆಟ್ಟಿಯವರ ಹೆಸರನ್ನು ನಾಮಕರಣ ಮಾಡುವುದನ್ನು ತಪ್ಪಿಸಿದ್ದ ಕಾಂಗ್ರೆಸ್‌ ಪಕ್ಷ, ಅವರಿಗೆ ಅವಮಾನ ಮಾಡಿತ್ತು. ಈಗ ಅದೇ ವಿಜಯ ಬ್ಯಾಂಕ್‌ ಹೆಸರಿನಲ್ಲಿ ಕೆಟ್ಟ ರಾಜಕಾರಣ ಮಾಡಲು ಆ ಪಕ್ಷ ಯತ್ನಿಸುತ್ತಿದೆ. ‘ಸಂಸದನಾದರೆ ವಿಜಯ ಬ್ಯಾಂಕ್‌ ಅಸ್ತಿತ್ವ ಉಳಿಸುತ್ತೇನೆ’ ಎಂದು ಕಾಂಗ್ರೆಸ್‌ ಅಭ್ಯರ್ಥಿ ಮಿಥುನ್‌ ರೈ ಹೇಳಿದ್ದಾರೆ. ಇದು ಅತ್ಯಂತ ಬಾಲಿಶ ಮತ್ತು ಹಾಸ್ಯಾಸ್ಪದ ಹೇಳಿಕೆ ಎಂದರು.

ಕಾಂಗ್ರೆಸ್‌ ಪಕ್ಷ ಬ್ಯಾಂಕ್‌ಗಳ ವಿಲೀನದ ಪರವಾಗಿಯೇ ಇದೆ. ಆ ಪಕ್ಷದ ಪ್ರಣಾಳಿಕೆಯಲ್ಲೇ ಈ ವಿಷಯ ಸ್ಪಷ್ಟವಾಗಿದೆ. ಇನ್ನೂ ಕೆಲವು ಬ್ಯಾಂಕ್‌ಗಳ ವಿಲೀನ ಆಗಲಿದೆ. ಆದರೆ, ವಿಜಯ ಬ್ಯಾಂಕ್‌ ವಿಲೀನದ ವಿಚಾರವನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿದೆ ಎಣದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.