ADVERTISEMENT

ವಿಜ್ಞಾನ ಯೋಜನೆ ಅನುಷ್ಠಾನ:ಮಂಗಳೂರು ವಿ.ವಿ.ಗೆ 17ನೇ ಸ್ಥಾನ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2012, 7:50 IST
Last Updated 3 ಮಾರ್ಚ್ 2012, 7:50 IST

ಮಂಗಳೂರು: ದೇಶದ ವಿ.ವಿ.ಗಳ ಪೈಕಿ, ವಿಜ್ಞಾನ ಯೋಜನೆಯ ಪರಿಣಾಮಕಾರಿ ಅನುಷ್ಠಾನದಲ್ಲಿ ಮಂಗಳೂರು ವಿಶ್ವವಿದ್ಯಾಲಯ 17ನೇ ಸ್ಥಾನ ಪಡೆದಿದೆ.ರಾಷ್ಟ್ರ ಮಟ್ಟದಲ್ಲಿ ವಿಜ್ಞಾನ ಪ್ರಬಂಧಗಳನ್ನು ಪಟ್ಟಿ ಮಾಡುವ `ಸ್ಕೋಪಸ್~ (ಸೈನ್ಸ್ ಸೈಟೇಷನ್ ಇಂಡೆಕ್ಸಡ್ ಜರ್ನಲ್ಸ್) ನಡೆಸಿದ ರಾಷ್ಟ್ರ ಮಟ್ಟದ ಸಮೀಕ್ಷೆಯ ಶಿಫಾರಸಿನ ಮೇಲೆ ಕೇಂದ್ರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು, ವಿಶ್ವವಿದ್ಯಾಲಯಕ್ಕೆ ಈ ಸ್ಥಾನ ನೀಡಿದೆ.

ರಾಜ್ಯ ಮಟ್ಟದಲ್ಲಿ ಮೈಸೂರು ವಿಶ್ವವಿದ್ಯಾಲಯ ಮೊದಲ ಸ್ಥಾನ ಗಳಿಸಿದ್ದು, ಮಂಗಳೂರು ವಿಶ್ವವಿದ್ಯಾಲಯ ದ್ವಿತೀಯ ಸ್ಥಾನ ಗಳಿಸಿದ ಹೆಗ್ಗಳಿಕೆಗೂ ಪಾತ್ರವಾಗಿದೆ. ಈ ಸಂಬಂಧ ಇಲಾಖೆಯು ವಿಶ್ವವಿದ್ಯಾಲಯಕ್ಕೆ ಏಳು  ಹೊಸ ವೈಜ್ಞಾನಿಕ ಸಂಶೋಧನಾ ಯೋಜನೆಯನ್ನು ಹಮ್ಮಿಕೊಳ್ಳುವಂತೆ ಸೂಚಿಸಿದ್ದು, 9 ಕೋಟಿ ರೂಪಾಯಿಗಳ ಅನುದಾನವನ್ನೂ ನೀಡಿದೆ. ಈ ಯೋಜನೆಗಳು ಈಗಾಗಲೇ ಕಾರ್ಯರೂಪಕ್ಕೆ ಬಂದಿದ್ದು, 3.79 ಕೋಟಿ ರೂಪಾಯಿ ಹಣ ಬಿಡುಗಡೆಯೂ ಆಗಿದೆ.

ಸಂಶೋಧನೆಯಲ್ಲಿ ಮುಂದು: ವೈಜ್ಞಾನಿಕ ಸಂಶೋಧನೆಗಳನ್ನು ನಡೆಸಲು ವಿವಿ ಆರಂಭದಿಂದಲೂ ಉತ್ಸಾಹ ತೋರಿಸಿದೆ. ಕಳೆದ 3  ವರ್ಷಗಳಲ್ಲಿ ವಿ.ವಿ.ಯು ಬರೋಬ್ಬರಿ 65 ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದು, ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಹಾಗೂ ರಾಜ್ಯ ಸರ್ಕಾರದಿಂದ ಒಟ್ಟು 17.70 ಕೋಟಿ ರೂಪಾಯಿಗಳ ಅನುದಾನವನ್ನು ವಿವಿ ಈಗಾಗಲೇ ಬಳಸಿಕೊಂಡಿದ್ದು, ಈಗ ಸಿಕ್ಕಿರುವ ಅನುದಾನ ಹೆಚ್ಚುವರಿಯಾಗಿದೆ.
 
ಕೇಂದ್ರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಿಂದ ಸ್ಥಾನ ಘೋಷಣೆ ಹಾಗೂ ಅನುದಾನ ಪಡೆದ ಎರಡು ವಿವಿಗಳ ಪೈಕಿ ಮಂಗಳೂರು ವಿವಿಯೂ ಒಂದು ಎಂಬುದು ಮತ್ತೊಂದು ಹೆಗ್ಗಳಿಕೆಯಾಗಿದೆ. ಇಲಾಖೆಯು ಟಾಪ್ ಟೆನ್ ವಿವಿಗಳಿಗೆ ರೂ. 15 ಕೋಟಿ, 10 ರಿಂದ 20 ನೇ ಸ್ಥಾನ ಗಳಿಸಿದ ವಿ.ವಿ.ಗಳಿಗೆ ರೂ. 9 ಕೋಟಿ, 20 ರಿಂದ 30 ನೇ ಸ್ಥಾನ ಗಳಿಸಿದ ವಿ.ವಿ.ಗಳಿಗೆ ರೂ. 6 ಕೋಟಿ ರೂಪಾಯಿಗಳನ್ನು ನೀಡಿದೆ.

ಈ ಮೂಲಕ ಜಗತ್ತಿನ ಶ್ರೇಷ್ಠ ಸಂಶೋಧನಾ ಕಾರ್ಯಗಳನ್ನು ನಡೆಸಿ ವಿ.ವಿ.ಗೆ ಕೀರ್ತಿ ತರಲು ವಿಶ್ವವಿದ್ಯಾಲಯದ ವಿಜ್ಞಾನಿಗಳು ಅವಿರತ ಶ್ರಮಿಸುತ್ತಿದ್ದಾರೆ ಎಂದು ಕುಲಪತಿ ಪ್ರೊ.ಟಿ.ಸಿ.ಶಿವಶಂಕರ ಮೂರ್ತಿ `ಪ್ರಜಾವಾಣಿ~ಗೆ ತಿಳಿಸಿದರು.

ಇಲಾಖೆ ನೀಡಿರುವ ಹೊಸ ಏಳು ವೈಜ್ಞಾನಿಕ ಯೋಜನೆಗಳನ್ನು ನಡೆಸಲು ವಿ.ವಿ.ಯ ಸಮುದ್ರ ಪ್ರಾಣಿಶಾಸ್ತ್ರ, ಅನ್ವಯಿಕ ಸಸ್ಯಶಾಸ್ತ್ರ, ಅನ್ವಯಿಕ ಪ್ರಾಣಿಶಾಸ್ತ್ರ, ಭೌತಶಾಸ್ತ್ರ, ವಸ್ತು ವಿಜ್ಞಾನ ಅಧ್ಯಯನ ವಿಭಾಗಗಳಿಗೆ ಸೂಚಿಸಲಾಗಿದ್ದು, ಸಂಶೋಧನಾ ಕಾರ್ಯ ಆರಂಭಗೊಂಡಿದೆ.

ಸಂಶೋಧನೆಗೆ ಕಾಲಮಾನದ ಮಿತಿಯೂ ಇರುವುದರಿಂದ ತ್ವರಿತಗತಿಯಲ್ಲಿ ಸಂಶೋಧನೆಗಳು ನಡೆಯಲಿದ್ದು, ಹೊಸ ಅನ್ವೇಷಣೆಗಳನ್ನು ನಡೆಸುವ ಆಶಾಭಾವನೆ ಹೊಂದಿದ್ದೇವೆ ಎಂದು ತಿಳಿಸಿದರು.

ಅನುದಾನಗಳ ಹೊಳೆ: ಇವಿಷ್ಟೇ ಅಲ್ಲದೇ, 2011-12 ನೇ ಸಾಲಿನಲ್ಲಿ ವಿಶ್ವವಿದ್ಯಾಲಯ ಧನಸಹಾಯ ಆಯೋಗದ ವಿಶೇಷ ಸಹಾಯ ಕಾರ್ಯಕ್ರಮದ ಅಡಿಯಲ್ಲಿ ವಿವಿಗೆ ಸುಮಾರು 1.74 ಕೋಟಿ ರೂಪಾಯಿಗಳ ಅನುದಾನ ದೊರೆತಿದೆ.

ಅನ್ವಯಿಕ ಪ್ರಾಣಿಶಾಸ್ತ್ರ ವಿಭಾಗಕ್ಕೆ ರೂ. 52 ಲಕ್ಷ, ರಸಾಯನಶಾಸ್ತ್ರ ವಿಭಾಗಕ್ಕೆ ರೂ. 32 ಲಕ್ಷ, ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗಕ್ಕೆ ರೂ. 40 ಲಕ್ಷ ಸಿಕ್ಕಿದೆ. ಜತೆಗೆ ಯುಜಿಸಿಯು ಕಲಾ ನಿಕಾಯಕ್ಕೆ ರೂ. 23.63 ಲಕ್ಷ, ವಿಜ್ಞಾನ ನಿಕಾಯಕ್ಕೆ ರೂ. 17.71 ಕೋಟಿ ಹಾಗೂ ವಾಣಿಜ್ಯ ನಿಕಾಯಕ್ಕೆ ರೂ. 21.93 ಲಕ್ಷ ನೀಡಿದೆ. ಈ ಅನುದಾನಗಳ ಜತೆಗೆ ಅರ್ಥಶಾಸ್ತ್ರ, ಸಂಖ್ಯಾಶಾಸ್ತ್ರ, ಯೋಗ ವಿಜ್ಞಾನ, ದೈಹಿಕ ಶಿಕ್ಷಣ ವಿಭಾಗಗಳಿಗೂ ನೆರವು ಸಿಗಲಿದ್ದು, ಶೈಕ್ಷಣಿಕ ಸಂಶೋಧನಾ ಹಾಗೂ ಯೋಜನೆಗಳನ್ನು ನಡೆಸಲು ಅನುಕೂಲವಾಗಲಿದೆ. ಕೇವಲ ಕಂಪ್ಯೂಟರ್ ಖರೀದಿಗೇ ಯುಜಿಸಿಯಿಂದ ರೂ. 2 ಕೋಟಿ ಸಿಕ್ಕಿರುವುದು ವಿಶ್ವವಿದ್ಯಾಲಯಕ್ಕೆ ಅನುಕೂಲಕರವಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.