ADVERTISEMENT

ವಿಟ್ಲ: ಹದಗೆಟ್ಟ ರಸ್ತೆ, ದುರಸ್ತಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 20 ಜುಲೈ 2012, 12:10 IST
Last Updated 20 ಜುಲೈ 2012, 12:10 IST

ವಿಟ್ಲ: ವಿಟ್ಲ- ಸಾಲೆತ್ತೂರು ರಸ್ತೆ ಸಂಪೂರ್ಣವಾಗಿ ಹದಗೆಟ್ಟು ಹೋಗಿದೆ. ಕರೈ ಎಂಬಲ್ಲಿ ರಸ್ತೆಗಳ ಮಧ್ಯದಲ್ಲಿ ಹೊಂಡಗಳು ನಿರ್ಮಾಣವಾಗಿದ್ದು, ವಿದ್ಯಾರ್ಥಿಗಳು ಹಾಗೂ ವಾಹನ ಚಾಲಕರು ಪರದಾಡುತ್ತಿದ್ದಾರೆ. ಈ ರಸ್ತೆಯ ಡಾಂಬರೀಕರಣ ನಡೆಯದೇ ಅದೆಷ್ಟೋ ವರ್ಷಗಳು ಕಳೆದಿವೆ. ಸಾಲೆತ್ತೂರು- ಕಡಂಬು ರಸ್ತೆಗೆ ಈಗಾಗಲೇ ಸರ್ಕಾರದಿಂದ 4.25 ಕೋಟಿ ಅನುದಾನವಿದ್ದು, ಕಾಮಗಾರಿ ನಡೆಸಲು ಇಲಾಖೆ ಮೀನಾಮೇಷ ಎಣಿಸುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

 ಈ ರಸ್ತೆ ವಿಟ್ಲದಿಂದ ಕಡಂಬು, ಸಾಲೆತ್ತೂರು, ಕುಕ್ಕಾಜೆ ಮಂಚಿ, ಬಿ.ಸಿ ರೋಡ್ ಪ್ರದೇಶಗಳನ್ನು ಸಂಪರ್ಕಿಸುತ್ತದೆ. ಅದೇ ರೀತಿ ವಿಟ್ಲದಿಂದ ಸಾಲೆತ್ತೂರು ಮಾರ್ಗವಾಗಿ ಕೊಣಾಜೆ, ದೇರಳಕಟ್ಟೆ, ಮಂಗಳೂರನ್ನು ಸಂಪರ್ಕಿಸುತ್ತದೆ. ರಸ್ತೆಯಲ್ಲಿ ವಾಹನಗಳು ಹೋದಾಗ ಪಾದಚಾರಿಗಳಿಗೆ ಕೆಸರಿನ ಅಭಿಷೇಕವಾಗುತ್ತದೆ.  ದೇರಳಕಟ್ಟೆಯ ಯೆನಪೋಯ ಕೆ.ಎಸ್ ಹೆಗ್ಡೆ ಆಸ್ಪತ್ರೆ ಕಡೆಗೆ ಹೋಗುವ ವಿದ್ಯಾರ್ಥಿಗಳು, ನಾಗರಿಕರು ಪ್ರತಿದಿನ ಈ ರಸ್ತೆಯಲ್ಲಿ ಕಿರಿಕಿರಿ ಅನುಭವಿಸುತ್ತಿದ್ದಾರೆ.

 ವಿಟ್ಲ ಆಸುಪಾಸಿನ ಶಾಲಾ, ಕಾಲೇಜುಗಳಿಗೆ ಸಾಲೆತ್ತೂರು, ಕುಡ್ತಮುಗೇರು, ಕಡಂಬು, ಬಾಕ್ರಬೈಲು ಮೊದಲಾದ ಕಡೆಗಳಿಂದ ನೂರಾರು ವಿದ್ಯಾರ್ಥಿಗಳು ಹೋಗುತ್ತಿದ್ದು, ಈ ರಸ್ತೆಗಳಲ್ಲಿ ಹೊಂಡ ನಿರ್ಮಾಣವಾದ ಕಾರಣ ಭಯಪಡುವಂತಾಗಿದೆ. ಕಳೆದ ವರ್ಷವೇ ಸಾಲೆತ್ತೂರು- ಕಡಂಬು ರಸ್ತೆ ವಿಸ್ತರಣೆ ಕಾಮಗಾರಿ ನಡೆಯಬೇಕಿತ್ತು. ಆದರೆ ಇದೂವರೆಗೂ ನಡೆದಿಲ್ಲ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.

ಬಿರುಕು ಬಿಟ್ಟ ಸೇತುವೆ: ಸಾಲೆತ್ತೂರು ಸಮೀಪದ ಕಟ್ಟತ್ತಿಲ್ಲ ಎಂಬಲ್ಲಿ ನದಿಯೊಂದಕ್ಕೆ ಕಟ್ಟಲಾದ ಸೇತುವೆ ಬಿರುಕು ಬಿಟ್ಟಿದ್ದು, ಅಪಾಯವನ್ನು ಅಹ್ವಾನಿಸುತ್ತಿದೆ. ಬ್ರಿಟಿಷರ ಕಾಲದಲ್ಲಿ ಈ ಸೇತುವೆಯನ್ನು ಕಟ್ಟಲಾಗಿತ್ತು. ಇದರಿಂದ ಸಾರ್ವಜನಿಕರು, ವಿದ್ಯಾರ್ಥಿಗಳು ಆತಂಕಪಡುವಂತಾಗಿದೆ.

ಕೊಡಂಗಾಯಿ ಸೇತುವೆ: ಇದೇ ರಸ್ತೆಯ ಕೊಡಂಗಾಯಿ ಎಂಬಲ್ಲಿ ನದಿಯೊಂದಕ್ಕೆ ಕಟ್ಟಲಾದ ಸೇತುವೆಯೊಂದು ಶಿಥಿಲಗೊಂಡಿದ್ದು, ಬೀಳುವ ಸ್ಥಿತಿಯಲ್ಲಿದೆ. ಈ ಸೇತುವೆ ಮೇಲೆ ಒಂದೇ ಬಾರಿಗೆ ಎರಡು ವಾಹನಗಳು ಚಲಿಸುವುದು ಅಪಾಯಕಾರಿಯಾಗಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಕಲ್ಲಡ್ಕ- ಕಾಞಂಗಾಡ್ ಹಾಗೂ ಕಂಬಳಬೆಟ್ಟು- ಕಬಕ ರಸ್ತೆಗಳಿಗೆ ಈಗಾಗಲೇ ಡಾಂಬರೀಕಣ ಹಾಗೂ ರಸ್ತೆ ವಿಸ್ತರಣೆ ಕಾಮಗಾರಿ ಮುಗಿದಿದೆ. ಆದರೆ ಸಾಲೆತ್ತೂರು- ಕಡಂಬು ರಸ್ತೆ ವಿಸ್ತರಣೆಗೆ ಸಮಯ ಕೂಡಿಬಂದಿಲ್ಲ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಸಮಸ್ಯೆಗೆ ಪರಿಹಾರ ಒದಗಿಸಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.