ADVERTISEMENT

ವಿದ್ಯಾರ್ಥಿ ಸಾಧನೆಗೆ ವಿಫುಲ ಅವಕಾಶ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2012, 7:15 IST
Last Updated 22 ಅಕ್ಟೋಬರ್ 2012, 7:15 IST

ಮುಡಿಪು:  `ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸ್ನಾತಕೋತ್ತರ ಪದವಿ ಮಾತ್ರ ನಮ್ಮ ಭವಿಷ್ಯವನ್ನು ಕಟ್ಟಲು ಸಾಧ್ಯ ಇಲ್ಲ. ಪಠ್ಯೇತರ ಚಟುವಟಿಕೆಗಳೊಂದಿಗೆ ನಮ್ಮಲ್ಲಿ ನೈಪುಣ್ಯ, ಪರಿಶ್ರಮ, ಧೈರ್ಯ, ಶಕ್ತಿ ಕೂಡ ಅಗತ್ಯ.
ಇವುಗಳನ್ನೆಲ್ಲಾ ವಿದ್ಯಾರ್ಥಿ ದೆಸೆಯಿಂದಲೇ ಪಾಲಿಸಿಕೊಂಡು ಮುನ್ನಡೆದರೆ ಉತ್ತಮ ಜೀವನವನ್ನು ಕಂಡುಕೊಳ್ಳಬಹುದು~ ಎಂದು ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ದೇಶಕರಾದ ಎಂ.ಆರ್.ವಾಸುದೇವ ಅವರು ಅಭಿಪ್ರಾಯ ಪಟ್ಟರು. 

 ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳಾ ಅಡಿಟೋರಿಯಂನಲ್ಲಿ ಬುಧವಾರ 2012-13ನೇ ಸಾಲಿನ ಸ್ನಾತಕೋತ್ತರ ವಿದ್ಯಾರ್ಥಿ ಸಂಘದ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು. 

 `ಮಂಗಳೂರಿನ ಜನರನ್ನು ಬುದ್ಧಿವಂತ ಜನತೆ ಎಂದು ಬಹಳಷ್ಟು ಕರೆಯುತ್ತಾರೆ. ಮಾತ್ರವಲ್ಲದೆ ನಮ್ಮನ್ನು ಮೂಲ ಸೌಲಭ್ಯಗಳಿಂದ ಹಾಗೂ ಅವಕಾಶಗಳಿಂದ ವಂಚಿತರನ್ನಾಗಿ ಮಾಡುತ್ತಾರೆ. ಆದರೆ ಈ ಮಾತಿಗೆ ನಾವು ಮರುಳಾಗದೆ ನಮ್ಮ ಬುದ್ಧಿವಂತಿಕೆಯನ್ನು ಹೆಚ್ಚಿಸುವ ಪ್ರಯತ್ನವನ್ನು ಕೈ ಬಿಡದೆ ಮತ್ತಷ್ಟು ಸಾಧನೆಗೆ ಪ್ರಯತ್ನಿಸಬೇಕು. ಇಂದಿನ ವಿದ್ಯಾರ್ಥಿಗಳಿಗೆ ಬಹಳಷ್ಟು ಅವಕಾಶಗಳಿವೆ. ವಿಶ್ವವಿದ್ಯಾನಿಲಯಗಳು ಕೂಡ ಅವರ ಶೈಕ್ಷಣಿಕ ಚಟುವಟಿಕೆಗೆಗೆ ಪೂರಕವಾಗುವಂತಹ ಮೂಲ ಸೌಕರ್ಯಗಳನ್ನು ಒದಗಿಸಿಕೊಡುತ್ತಿವೆ. ಆದ್ದರಿಂದ ನಮ್ಮ ಯೌವನದ ಬಿಸಿನೆತ್ತರು ಆರಿ ಹೋಗುವ ಮುನ್ನ ಸಾಧನೆಯೊಂದಿಗೆ ಉತ್ತಮ ಭವಿಷ್ಯವನ್ನು ಕಟ್ಟಿಕೊಳ್ಳಬೇಕು~ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಮಂಗಳೂರು ವಿ.ವಿ.ಕುಲಪತಿ ಪ್ರೊ.ಟಿ.ಸಿ.ಶಿವಶಂಕರಮೂರ್ತಿ, `ಉತ್ತಮ ಜೀವನದ ಕನಸನ್ನು ವಿದ್ಯಾರ್ಥಿ ಜೀವನದಲ್ಲಿ ಕಾಣಬೇಕು. ಶೈಕ್ಷಣಿಕ ಮತ್ತು ಪೂರಕವಾಗುವ ಚಟುವಟಿಕೆಗಳು ಹಾಗೂ ಶಿಸ್ತು ನಮ್ಮ ಬೆಳವಣಿಗೆಯಲ್ಲಿ ಬಹಳ ಮುಖ್ಯ ಪಾತ್ರವಹಿಸುತ್ತದೆ~ ಎಂದು ಹೇಳಿದರು.

 ಕಾರ್ಯಕ್ರಮದ ಪ್ರಾರಂಭದಲ್ಲಿ ವಿದ್ಯಾರ್ಥಿ ಸಂಘದ ನೂತನ ಅಧ್ಯಕ್ಷ ಹಿಲ್ಸನ್, ಉಪಾಧ್ಯಕ್ಷ ಪ್ರಶಾಂತ್ ಕುಮಾರ್, ಕಾರ್ಯದರ್ಶಿ ಪರ್ವಿನ್, ಜತೆ ಕಾರ್ಯದರ್ಶಿ ಶ್ರವಣ್, ಸಾಂಸ್ಕೃತಿಕ ಕಾರ್ಯದರ್ಶಿ ಸುಮಿತ್ರಾ, ಸಹ ಸಾಂಸ್ಕೃತಿಕ ಕಾರ್ಯದರ್ಶಿ ನವೀನ್ ರಾಜ್ ಅವರಿಗೆ ವಿದ್ಯಾರ್ಥಿ ಕ್ರೇಮ ಪಾಲನಾ ವಿಭಾಗದ ನಿರ್ದೇಶಕ ಡಾ.ಎ.ಎಂ.ಎ.ಖಾದರ್ ಪ್ರಮಾಣವಚನ ಬೋಧಿಸಿದರು.

ಕಾರ್ಯಕ್ರಮದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ.ಪಿ.ಎಸ್.ಯಡಪಡಿತ್ತಾಯ ಹಾಗೂ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಹಾಜರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.