ಮಂಗಳೂರು: ಕ್ರೆಡಿಟ್ ಸಂಘಗಳು ಗ್ರಾಹಕರ ಅವಶ್ಯಕತೆಗಳನ್ನು ವಿಮರ್ಶೆ ಮಾಡಿ ಸಾಲ ನೀಡುವ ಕೆಲಸ ಮಾಡಬೇಕು. ಇಲ್ಲದೆ ಇದ್ದರೆ ಸುಲಭವಾಗಿ ಸಿಗುವ ಸಾಲ ದುಂದುವೆಚ್ಚಕ್ಕೂ ಬಳಕೆ ಆಗುವ ಸಾಧ್ಯತೆಗಳಿವೆ ಎಂದು ನಿಟ್ಟೆ ವಿಶ್ವವಿದ್ಯಾಲಯದ ಕುಲಾಧಿಪತಿ ಎನ್.ವಿನಯ ಹೆಗ್ಡೆ ಇಲ್ಲಿ ಹೇಳಿದರು.
ನಗರದ ಶ್ರೀನಿವಾಸ ಹೋಟೆಲ್ ಸಭಾಂಗಣದಲ್ಲಿ ಭಾನುವಾರ ನಡೆದ ಮಂಗಳೂರು ಶಿಕ್ಷಕರ ಸಹಕಾರಿ ಕ್ರೆಡಿಟ್ ಸಂಘದ ರಜತ ಮಹೋತ್ಸವ ವರ್ಷಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಾಲದ ಉದ್ದೇಶವನ್ನು ಅರಿತುಕೊಂಡು ತುರ್ತು ಕಾರ್ಯಗಳಿಗೆ ಮಾತ್ರ ಸಾಲ ನೀಡಿದರೆ ಹಣ ಪೋಲಾಗುವುದಿಲ್ಲ. ಇಲ್ಲದೆ ಇದ್ದರೆ ವೃಥಾ ವೆಚ್ಚವಾಗುವ ಸಾಧ್ಯತೆ ಇರುತ್ತದೆ ಎಂದರು.
ಕನ್ನಡ ಮಾಧ್ಯಮ ಶಾಲೆಗಳು ಇಂದು ಕಡಿಮೆ ಆಗುತ್ತಿವೆ. ಪೋಷಕರೂ ವಿದ್ಯಾರ್ಥಿಗಳನ್ನು ಕನ್ನಡ ಮಾಧ್ಯಮಕ್ಕೆ ಕಳುಹಿಸಲು ಹಿಂದೇಟು ಹಾಕುತ್ತಾರೆ. ಇದು ಸಲ್ಲದು. ಆಂಗ್ಲಭಾಷೆ ಅನಿವಾರ್ಯ. ಅದನ್ನು ವಿರೋಧಿಸುವುದು ತಪ್ಪು. ಈ ಕುರಿತು ವಿಮರ್ಶೆಯೂ ಆಗಬೇಕು. ಶಿಕ್ಷಕರು ಸರ್ಕಾರಕ್ಕೆ ದಾರಿ ತೋರಿಸುವ ಕೆಲಸ ಆಗಬೇಕು. ದೇಶದ ಏಕತೆಗೆ ಅಧ್ಯಾಪಕರ ಕೊಡುಗೆ ಅಪಾರವಾದುದು ಎಂದರು.
ಸಂಘದ ರಜತ ಯೋಜನೆ ಪತ್ರ ಬಿಡುಗಡೆ ಮಾಡಿ ಮಾತನಾಡಿದ ಕೆಥೊಲಿಕ್ ಶಿಕ್ಷಣ ಮಂಡಳಿ ಕಾರ್ಯದರ್ಶಿ ವಿಲ್ಸನ್ ವಿ.ಡಿಸೋಜ, ಸದಸ್ಯರ ಸಂಖ್ಯೆಯನ್ನು ಮತ್ತು ಶಾಖೆಗಳನ್ನು ವಿಸ್ತರಿಸುವಂತೆ ಸಲಹೆ ನೀಡಿದರು.
ಯೇನೆಪೋಯ ವಿಶ್ವವಿದ್ಯಾಲಯದ ನಿರ್ದೇಶಕ ಪ್ರೊ.ಪಿ.ಸಿ.ಎಂ.ಕುಂಞಿ ಮಾತನಾಡಿ, ದೇಶದ ಅಭಿವೃದ್ಧಿ ಕಾರ್ಯದಲ್ಲಿ ಶಿಕ್ಷಕರು ತೊಡಗಿಸಿಕೊಳ್ಳಬೇಕು. ಶಿಕ್ಷಕರು ಪ್ರೇರಣೆ ನೀಡುವ ಕಾರ್ಯ ಮಾಡಬೇಕು. ಶಿಕ್ಷಕರಿಗೆ ನೆರವಾಗುವ ಕೆಲಸವನ್ನು ಸಮಾಜವೂ ಮಾಡಬೇಕು ಎಂದರು. ಸಂಘದ ಅಧ್ಯಕ್ಷ ಪಿ.ವೆಂಕ ಶೆಟ್ಟಿಗಾರ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ರಾಮಶೇಷ ಶೆಟ್ಟಿ ಸ್ವಾಗತಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.