ADVERTISEMENT

‘ವಿಶ್ವವಿದ್ಯಾಲಯಗಳಿಗೆ ಸ್ವಾಯತ್ತತೆ ಅಗತ್ಯ'

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2017, 8:42 IST
Last Updated 25 ಅಕ್ಟೋಬರ್ 2017, 8:42 IST

ಮಂಗಳೂರು: ವಿಶ್ವವಿದ್ಯಾಲಯಗಳಿಗೆ ಸ್ವಾಯತ್ತತೆ ನೀಡದೇ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವುದು ಕಷ್ಟದ ಕೆಲಸ. ಪ್ರಸ್ತುತ ದೇಶದಲ್ಲಿ ಉನ್ನತ ಶಿಕ್ಷಣ ಕ್ಷೇತ್ರವನ್ನು ನಿಯಂತ್ರಿಸುವುದಕ್ಕಾಗಿಯೇ 64 ಸಂಸ್ಥೆಗಳಿವೆ ಎಂದು ಕಡಪದ ಯೋಗಿ ವೇಮುನ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಪ್ರೊ. ಅರ್ಜುಲ ರಾಮಚಂದ್ರ ರೆಡ್ಡಿ ಹೇಳಿದರು.

ಮಂಗಳೂರು ವಿಶ್ವವಿದ್ಯಾಲಯದ ಒಳಾಂಗಣ ಕ್ರೀಡಾಂಗಣದಲ್ಲಿ ಮಂಗಳವಾರ ‘ಉನ್ನತ ಶಿಕ್ಷಣದಲ್ಲಿ ಮಾನವಶಕ್ತಿಯ ಯೋಜನೆ’ ಎಂಬ ವಿಷಯದಲ್ಲಿ ನಡೆದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು. ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯ ನಿಯಂತ್ರಣ ನೀತಿಗಳಿಂದಾಗಿಯೇ ಈ ದೇಶದಲ್ಲಿ ತಾಂತ್ರಿಕ ಶಿಕ್ಷಣ ಕ್ಷೇತ್ರವೇ ಕುಸಿಯುವಂತಾಗಿದೆ.

ವಿಶ್ವವಿದ್ಯಾಲಯಗಳಲ್ಲಿ ಸಿಬ್ಬಂದಿ ಕೊರತೆ, ಸಮರ್ಥ ನೇತೃತ್ವದ ಕೊರತೆ ಹಾಗೂ ನೀತಿ ನಿರೂಪಣೆಗಳಲ್ಲಿನ ವ್ಯತ್ಯಾಸ ವಿಶ್ವವಿದ್ಯಾಲಯಗಳಲ್ಲಿ ಸಮಸ್ಯೆ ಸೃಷ್ಟಿಸುತ್ತದೆ. ಆದರೆ ಸ್ವಾಯತ್ತತೆಯ ಕೊರತೆ ಎಲ್ಲ ಸಮಸ್ಯೆಗಳ ಮೂಲವಾಗಿದೆ. ಸರ್ಕಾರವೇ ಕುಲಪತಿಗಳ ಮೇಲೆ ವಿಶ್ವಾಸ ಇರಿಸುವುದಿಲ್ಲ. ಹಾಗಾದಾಗ ನೇಮಕಾತಿ, ಸುಧಾರಣೆ ಪ್ರಕ್ರಿಯೆಗಳು ಕಷ್ಟವಾಗುತ್ತವೆ ಎಂದು ಅವರು ಅಭಿಪ್ರಾಯಪಟ್ಟರು.

ADVERTISEMENT

ಕೇಂದ್ರ ವಿಶ್ವವಿದ್ಯಾಲಯಗಳಿಗೆ ಉತ್ತಮ ಆರ್ಥಿಕ ಸಂಪನ್ಮೂಲವಾದರೂ ದೊರೆಯುತ್ತದೆ. ಆದರೆ ರಾಜ್ಯ ವಿಶ್ವವಿದ್ಯಾಲಯಗಳಿಗೆ ಆರ್ಥಿಕತೆಯ ಕೊರತೆಯೂ ಕಾಡುತ್ತದೆ. ಹಿಂದೆಲ್ಲ ಮೌಲ್ಯಾಧಾರಿತ ಶಿಕ್ಷಣದ ಪರಿಕಲ್ಪನೆ ಇದ್ದರೆ, ಇತ್ತೀಚೆಗೆ ‘ಶಿಕ್ಷಣದಲ್ಲಿ ಮೌಲ್ಯಗಳನ್ನು ಅಳವಡಿಸಬೇಕು’ ಎಂಬ ಮಾತುಗಳು ಕೇಳಿ ಬರುತ್ತಿವೆ. ಶಿಕ್ಷಣ ಪಡೆಯುವ ಪ್ರಕ್ರಿಯೆಯೇ ಮೌಲ್ಯಗಳನ್ನು ಅರಿಯುವುದಲ್ಲವೇ ಎಂದು ಅವರು ಪ್ರಶ್ನಿಸಿದರು. ಆದರೆ ಜ್ಞಾನಾರ್ಜನೆಯ ಹೊರತಾಗಿ ಕೌಶಲಗಳ ಕಲಿಕೆಯತ್ತ ವಿಶ್ವವಿದ್ಯಾಲಯಗಳು ಮುಖ ಮಾಡಿರುವುದು ಬೇಸರದ ಸಂಗತಿ. ವಿಶ್ವವಿದ್ಯಾಲಯಗಳು ಸಾರ್ವಜನಿಕ ಸಂಪತ್ತಿಗೆ ಬದಲಾಗಿ ಖಾಸಗಿಯಾಗುತ್ತಿರುವುದು ಆತಂಕಕಾರಿ ಎಂದು ಅವರು ವಿವರಿಸಿದರು.

ಮೈಸೂರು ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಹಾಗೂ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ನಿವೃತ್ತ ಪ್ರಾಂಶುಪಾಲರ ವೇದಿಕೆಯ ಅಧ್ಯಕ್ಷರಾದ ಪ್ರೊ. ಎಸ್‌. ಎನ್‌. ಹೆಗ್ಡೆ ಮಾತನಾಡಿ, ‘ನಿವೃತ್ತ ಕುಲಪತಿಗಳ ಚರ್ಚೆಯ ಬಳಿಕ ಸಾರಾಂಶವನ್ನು ಸರ್ಕಾರಕ್ಕೆ ಕಳುಹಿಸಲಾಗುವುದು. ವಿಶ್ವವಿದ್ಯಾಲಯಗಳ ಪರಿಸ್ಥಿತಿ ಸುಧಾರಿಸುವ ನಿಟ್ಟಿನಲ್ಲಿ ಚರ್ಚೆಯ ಸಾರಾಂಶ ನೆರವಾಗಬಹುದು’ ಎಂದು ಹೇಳಿದರು.

ಮಂಗಳೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ. ಕೆ. ಭೈರಪ್ಪ ಅಧ್ಯಕ್ಷತೆ ವಹಿಸಿದ್ದರು. ಕುಲಸಚಿವ ಪ್ರೊ. ಕೆ. ಎಂ. ಲೋಕೇಶ್‌ ಸ್ವಾಗತಿಸಿದರು. ವೇದಿಕೆಯ ಕಾರ್ಯದರ್ಶಿ ಪ್ರೊ. ಆರ್‌. ಎನ್‌. ಶ್ರೀನಿವಾಸ ಗೌಡ, ಮಂಗಳೂರು ವಿವಿ ಕಾಲೇಜು ಅಭಿವೃದ್ಧಿ ಮಂಡಳಿಯ ನಿರ್ದೇಶಕ ಪ್ರೊ. ಜಯರಾಜ್‌ ಅಮೀನ್‌ ಇದ್ದರು. ಡಾ. ಧನಂಜಯ ಕುಂಬ್ಳೆ ಮತ್ತು ಪ್ರೊ. ರವಿಶಂಕರ ರಾವ್‌ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.